ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಪಕ್ಕ ಅಂಗಡಿ, ಡಾಬಾಗಳ ತ್ಯಾಜ್ಯ

Last Updated 14 ಅಕ್ಟೋಬರ್ 2017, 8:29 IST
ಅಕ್ಷರ ಗಾತ್ರ

ಕುಷ್ಟಗಿ: ಜಿಲ್ಲಾ ಕೇಂದ್ರವನ್ನು ಸಂಪರ್ಕಿಸುವ ಪಟ್ಟಣದ ವ್ಯಾಪ್ತಿಯ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಬಹುತೇಕ ಜನರು ತಮ್ಮ ಅಂಗಡಿ ಮುಂಗಟ್ಟುಗಳಲ್ಲಿನ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.

‘ರಸ್ತೆಪಕ್ಕದಲ್ಲಿರುವ ಡಾಬಾಗಳು, ಮಾಂಸಹಾರಿ ಖಾನಾವಳಿ ಇತರ ಅಂಗಡಿ ಮುಂಗಟ್ಟುಗಳಿಗೆ ಸೇರಿದ ತ್ಯಾಜ್ಯ ರಸ್ತೆ ಮಗ್ಗಲಿನಲ್ಲಿ ದಿನನಿತ್ಯ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಾಗುತ್ತಿದ್ದು, ಇಡಿ ಪ್ರದೇಶ ಮಾಲಿನ್ಯಕ್ಕೀಡಾಗಿದೆ. ಈ ಬಗ್ಗೆ ಗಮನಹರಿಸಬೇಕಿದ್ದ ಪುರಸಭೆ ನಿರ್ಲಕ್ಷ್ಯವಹಿಸಿದೆ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ಹೀಗೆ ರಸ್ತೆಗೆ ಲೋಡ್‍ಗಟ್ಟಲೆ ವಾಹನಗಳ ಮೂಲಕ ಬೇಕಾಬಿಟ್ಟಿಯಾಗಿ ವಿಲೇವಾರಿಯಾಗುವ ತ್ಯಾಜ್ಯದಲ್ಲಿ ಬಹಳಷ್ಟು ಅಪಾಯಕಾರಿ ವಸ್ತುಗಳು ಇರುತ್ತವೆ. ಈ ಮಾರ್ಗದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಬಹಳಷ್ಟು ಜನ ವಾಯುವಿಹಾರಕ್ಕೆ ಬರುತ್ತಿರುತ್ತಾರೆ. ಗಾಳಿ ಬೀಸಿದಾಗ ತ್ಯಾಜ್ಯದಲ್ಲಿನ ಸೂಕ್ಷ್ಮಕಣಗಳು ದೂಳಿನ ಮೂಲಕ ಜನರ ದೇಹ ಸೇರುತ್ತದೆ. ಕಣ್ಣುಗಳಿಗೂ ಹಾನಿಯಾಗುತ್ತಿದೆ. ಇದರಿಂದ ಜನ ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ತ್ಯಾಜ್ಯದಲ್ಲಿ ಡಾಬಾ ಮತ್ತು ಬಾರ್, ರೆಸ್ಟೊರೆಂಟ್‍ಗಳಲ್ಲಿನ ಮದ್ಯದ ಖಾಲಿ ಬಾಟಲಿಗಳು, ಗಾಜಿನ ಚೂರುಗಳು ಇರುತ್ತವೆ. ತ್ಯಾಜ್ಯದಲ್ಲಿ ಮಾಂಸದ ಉಳಿಕೆಯೂ ಇರುವುದರಿಂದ ನಾಯಿ ಹಿಂಡಿನ ಹಾವಳಿ ವಿಪರೀತವಾಗಿದ್ದು, ವಾಹನಗಳಿಗೆ ಅಡ್ಡಿಯಾಗುತ್ತಿವೆ’ ಎಂದು ಜನರು ದೂರಿದ್ದಾರೆ.

‘ಕೆಲವರು ಕೊಳಚೆಯನ್ನು ತಂದು ಇಲ್ಲಿಯೇ ಸುರಿದು ಹೋಗುತ್ತಿದ್ದು, ಅಸಹ್ಯಕರ ವಾತಾವರಣ ಉಂಟಾಗಿ ಜನರ ನೆಮ್ಮದಿಯನ್ನೂ ಹಾಳುಮಾಡುತ್ತಿದೆ. ತ್ಯಾಜ್ಯ ವಿಲೇವಾರಿಗೆಂದೇ ಟೆಂಗುಂಟಿ ರಸ್ತೆಯಲ್ಲಿ ಪುರಸಭೆ ಜಮೀನು ಖರೀದಿಸಿರುವ ಜಾಗದಲ್ಲಿ ವಿಲೇವಾರಿ ಮಾಡಲು ಸ್ಥಳ ನಿಗದಿಪಡಿಸಲಾಗಿದೆ.

ಇದರ ಅಭಿವೃದ್ಧಿ ಸಲುವಾಗಿಯೇ ಪುರಸಭೆ ಸಾಕಷ್ಟು ಹಣ ಖರ್ಚುಮಾಡಿದೆ. ಆದರೂ ರಸ್ತೆ ಪಕ್ಕದಲ್ಲಿಯೇ ತ್ಯಾಜ್ಯ ವಿಲೇವಾರಿಯಾಗುತ್ತಿರುವುದನ್ನು ಪುರಸಭೆ ಗಮನಕ್ಕೆ ಹಲವು ಬಾರಿ ತರಲಾಗಿದೆ. ಆದರೂ ಪುರಸಭೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಲು ಮುಂದಾಗಿಲ್ಲ’ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT