ಸೋಮವಾರ, ಸೆಪ್ಟೆಂಬರ್ 16, 2019
26 °C

ಕಾಯುವ ಸುಖ, ದುಃಖ

Published:
Updated:
ಕಾಯುವ ಸುಖ, ದುಃಖ

‘ಕಾಯೋರಿಗೆ ಗೊತ್ತು ಕಾಯುವ ಕಷ್ಟ’ ಅನ್ನುವ ಮಾತನ್ನು ಬಹುಶಃ ನಾವೆಲ್ಲರೂ ಕೇಳಿರುತ್ತೇವೆ ಹಾಗೂ ಆಡಿಯೂ ಇರುತ್ತೇವೆ. ಆಯಾ ಸಂದರ್ಭಗಳಲ್ಲಿ ನಮ್ಮ ಮನಸ್ಥಿತಿಗೆ ಅನುಗುಣವಾಗಿ ಇದು ಸತ್ಯವೂ ಹೌದು, ಸತ್ಯ ಅಲ್ಲದೆಯೂ ಇರಬಹುದು. ಈ ವಿಷಯದ ಬಗ್ಗೆ ಬರೆಯಬೇಕು ಎಂದು ನನ್ನ ಮನಸ್ಸಿಗೆ ಬಂದಿದ್ದು ಮೊನ್ನೆ ನಡೆದ ಒಂದ ಸಂಗತಿಯ ಕಾರಣದಿಂದ.

ನನ್ನ ಚಿತ್ರಲೇಖನವೊಂದು ಪತ್ರಿಕೆಯೊಂದರಲ್ಲಿ ಸ್ವೀಕೃತವಾಗಿತ್ತು. ಅದು ಸ್ವೀಕೃತವಾಗಿದೆ ಅನ್ನುವುದು ನನಗೆ ಗೊತ್ತಾಗಿದ್ದು, ಅವರಿಗೆ ಇನ್ನೊಂದು ಲೇಖನ ಕಳಿಸುವ ಸಂದರ್ಭದಲ್ಲಿ. ಈ ಹಿಂದೆ ಕಳಿಸಿದ ಲೇಖನಗಳ ಬಗೆಗೆ ನೆನಪಿಸಿದಾಗ ಅವರು ಹೀಗೆ ಬರೆದಿದ್ದರು: ‘ನಿಮ್ಮ ಚಿತ್ರಲೇಖನ ಬರುವ ತಿಂಗಳ ಸಂಚಿಕೆಯಲ್ಲಿ ಪ್ರಕಟವಾಗಲಿದೆ’.

ಆ ಪತ್ರಿಕೆ ಅಂಗಡಿಗಳಲ್ಲಿ ಸಿಗುವುದಿಲ್ಲವಾದ್ದರಿಂದ ಅಂಚೆಯಲ್ಲಿ ಬರುವವರೆಗೆ ಕಾಯಲೇಬೇಕಿತ್ತು. ನಿತ್ಯ ಅಂಚೆಯ ಅಣ್ಣನನ್ನು ಕಾಯುವುದೇ ಕೆಲಸವಾಯಿತು. ಅವರು ಮೊಪೆಡ್‍ನಲ್ಲಿ ಬರುವವರಾದ್ದರಿಂದ ಯಾವುದೇ ಮೊಪೆಡ್ ಸದ್ದಾದರೂ ಹೊರಗೆ ಓಡಿ ಬಂದು ನೋಡುವ ಕಾತರ ನನಗೆ. ‘ಬಂದರೆ ಕೊಡ್ತಾರೆ ಬಿಡಿ, ಅವರ ಮನೆಗೇನೂ ತಗೊಂಡು ಹೋಗಲ್ಲ’ ಅಂತ ಹೆಂಡತಿಯ ಕೀಟಲೆ ಬೇರೆ. ದಿನಗಳು ಕಳೆದವು. ನನಗೆ ಪತ್ರಿಕೆ ಬರಲಿಲ್ಲ. ಅಂಚೆ ಕಚೇರಿಗೆ ಎರಡು ದಿನಗಳ ರಜೆ ಬಂತು. ಇನ್ನು ನನಗೆ ಪತ್ರಿಕೆ ಸಿಗುವುದು ಮುಂದಿನ ವಾರವೇ ಅನ್ನುವುದು ಖಾತ್ರಿಯಾಯಿತು.

ಬೆಂಗಳೂರಿನಲ್ಲಿರುವ ನನ್ನ ಮಿತ್ರರೊಬ್ಬರು ಆ ಪತ್ರಿಕೆಯನ್ನು ತರಿಸುತ್ತಾರಾದ್ದರಿಂದ, ಬೆಂಗಳೂರಿನಿಂದಲೇ ಪ್ರಕಟವಾಗುವ ಪತ್ರಿಕೆ ಅವರಿಗೆ ನನಗಿಂತ ಬೇಗ ಸಿಗುತ್ತದೆ ಎಂಬ ನಂಬಿಕೆಯಿಂದ, ಸಂಜೆ ಅವರಿಗೆ ಮೆಸೇಜ್ ಮಾಡಿ ಕೇಳಿದೆ. ‘ಪತ್ರಿಕೆ ಬಂತಾ’ ಎಂದು. ‘ಬಂತು. ನಾನಿನ್ನೂ ನೋಡಿಲ್ಲ’ ಅನ್ನುವ ಉದಾಸೀನದ ಉತ್ತರ (ನನಗೆ ಹಾಗೆನಿಸಿತೇನೋ!) ಬಂತು. ನನ್ನ ಚಿತ್ರಲೇಖನ ಪ್ರಕಟವಾಗುವ ಬಗ್ಗೆ ಅವರಿಗೂ ಗೊತ್ತಿತ್ತು. ನನಗಿರುವ ಕುತೂಹಲ, ಕಾತರ ಅವರಿಗಿರಬೇಕಲ್ಲ? ಪ್ರಕಟವಾಗಿರುವ ಚಿತ್ರಲೇಖನದ ಫೋಟೊ ತೆಗೆದು ವಾಟ್ಸ್‌ ಆ್ಯಪ್‌ನಲ್ಲಿ ಕಳಿಸಿ ಅಂದೆ. ಒಂದು ಗಂಟೆಯಾಯಿತು, ಒಂದೂವರೆ ಗಂಟೆಯಾಯಿತು... ಬರಲಿಲ್ಲ. ‘ಥ್ಯಾಂಕ್ಸಪ್ಪಾ’ ಎಂದು ಮೆಸೇಜ್ ಕಳಿಸಿದೆ ಬೇಸರದಿಂದ.

ಇದೇನೂ ನನ್ನ ಮೊದಲ ಚಿತ್ರಲೇಖನವಾಗಿರಲಿಲ್ಲ. ಬಹುಶಃ ಪ್ರತಿ ಲೇಖಕನಿಗೂ, ತನ್ನ ಹೊಸ ಕೃತಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಕುತೂಹಲ ಇದ್ದೇ ಇರುತ್ತೇನೋ. ಅಲ್ಲದೇ ಈ ಚಿತ್ರಲೇಖನದ ಬಗೆಗೆ ನನ್ನ ನಿರೀಕ್ಷೆಗಳು ಹೆಚ್ಚೇ ಇದ್ದವು, ಹತ್ತು ಹಲವು ಪ್ರಶ್ನೆಗಳು ನನ್ನಲ್ಲಿದ್ದವು. ಅವಕ್ಕೆ ಉತ್ತರ ಸಿಗುವುದು ಇನ್ನು ಮಂಗಳವಾರವೇ ಅನ್ನುವುದು ಗಟ್ಟಿಯಾಯಿತು. ನನಗೆ ಸಿಟ್ಟು ಬಂದಿದೆ ಅಂತ ಅವರಂದುಕೊಂಡರೇನೋ, ತಾವು ಪತ್ರಿಕೆಯನ್ನು ನೋಡಲು ಸಾಧ್ಯವಾಗದ್ದಕ್ಕೆ ವಿವರಣೆ ಕೊಟ್ಟು ಒಂದು ಮೆಸೇಜ್ ಹಾಕಿಬಿಟ್ಟರು. ಅವರಿಗೂ ಬೇಸರ ಉಂಟುಮಾಡಿದ್ದೆ ನಾನು. ಅಂತೂ ರಾತ್ರಿ ಹತ್ತೂಮುಕ್ಕಾಲಿಗೆ ನನ್ನ ಚಿತ್ರಲೇಖನದ ಫೋಟೊಗಳನ್ನು ತೆಗೆದು ವಾಟ್ಸ್‌ ಆ್ಯಪ್‌ನಲ್ಲಿ ಕಳಿಸಿದರು. ಅತ್ತೂ ಕರೆದು ಔತಣಕ್ಕೆ ಹೇಳಿಸಿಕೊಂಡಂತಾಯ್ತು ನನಗೆ. ಮತ್ತೊಮ್ಮೆ ಅವರಿಗೆ ಥ್ಯಾಂಕ್ಸ್ ಹೇಳಿದೆ!

ಕೆ.ಪಿ. ಸತ್ಯನಾರಾಯಣ, ಹಾಸನ

Post Comments (+)