ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ ಗೋಲಿನ ಅಬ್ಬರ

Last Updated 14 ಅಕ್ಟೋಬರ್ 2017, 19:58 IST
ಅಕ್ಷರ ಗಾತ್ರ

ಗುವಾಹಟಿ: ಯುರೋಪ್‌ನ ಫುಟ್‌ಬಾಲ್‌ ಶಕ್ತಿ ಕೇಂದ್ರ ಫ್ರಾನ್ಸ್‌ ತಂಡದವರ ಗೋಲುಗಳ ಅಬ್ಬರಕ್ಕೆ ಇಂದಿರಾಗಾಂಧಿ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿ ಹೊಂಡುರಸ್‌ ತಂಡದವರು ಬೆಚ್ಚಿದರು.

ಶನಿವಾರ ನಡೆದ ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನ ‘ಇ’ ಗುಂಪಿನ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಫ್ರಾನ್ಸ್‌ ತಂಡ 5–1 ಗೋಲುಗಳಿಂದ ಜಯಭೇರಿ ಮೊಳಗಿಸಿತು. ಇದರೊಂದಿಗೆ ಈ ತಂಡದವರು ಒಟ್ಟು 9 ಪಾಯಿಂಟ್ಸ್‌ ಕಲೆಹಾಕಿ ನಾಕೌಟ್‌ಗೆ ಲಗ್ಗೆ ಇಟ್ಟರು.

ಅಕ್ಟೋಬರ್‌ 17 ರಂದು ಇದೇ ಕ್ರೀಡಾಂಗಣದಲ್ಲಿ ನಡೆಯುವ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಫ್ರಾನ್ಸ್‌ ತಂಡ ‘ಡಿ’ ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿದ್ದ ಸ್ಪೇನ್‌ ವಿರುದ್ಧ ಸೆಣಸಲಿದೆ.

ಈ ಪಂದ್ಯದಲ್ಲಿ ಸೋತರೂ ಕೂಡ ಹೊಂಡುರಸ್‌ ತಂಡದವರು ‘ಇ’ ಗುಂಪಿನಿಂದ ಮೂರನೇ ತಂಡವಾಗಿ ನಾಕೌಟ್‌ ಪ್ರವೇಶಿಸಿದರು.

ಹಿಂದಿನ ಎರಡು ಪಂದ್ಯಗಳಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಫ್ರಾನ್ಸ್‌ ತಂಡ ಆರಂಭದಿಂದಲೇ ವೇಗದ ಆಟಕ್ಕೆ ಒತ್ತು ನೀಡಿತು. ಇನ್ನೊಂದೆಡೆ ಹೊಂಡುರಸ್‌ ಕೂಡ ಮಿಂಚಿನ ಹೋರಾಟ ನಡೆಸಿತು. ಹೀಗಾಗಿ ಮೊದಲ  9 ನಿಮಿಷಗಳ ಕಾಲ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. 10 ನೇ ನಿಮಿಷದಲ್ಲಿ ಹೊಂಡುರಸ್‌ ತಂಡದ ಮೆಜಿಯಾ ಎದುರಾಳಿ ರಕ್ಷಣಾ ಕೋಟೆ ಭೇದಿಸುವಲ್ಲಿ ಯಶಸ್ವಿಯಾದರು.

ಈ ಖುಷಿ ಹೊಂಡುರಸ್‌ ಪಾಳಯದಲ್ಲಿ ಹೆಚ್ಚು ಕಾಲ ಉಳಿಯಲು ಫ್ರಾನ್ಸ್‌ ತಂಡದ ಆಟಗಾರರು ಅವಕಾಶ ನೀಡಲಿಲ್ಲ.  14ನೇ ನಿಮಿಷದಲ್ಲಿ ಈ ತಂಡಕ್ಕೆ ಮೊದಲ ಯಶಸ್ಸು ಸಿಕ್ಕಿತು. ಇಸಿಡೊರ್‌, ಗೋಲು ದಾಖಲಿಸಿ 1–1ರ ಸಮಬಲಕ್ಕೆ ಕಾರಣರಾದರು.

23ನೇ ನಿಮಿಷದಲ್ಲಿ ಫ್ರಾನ್ಸ್‌ ಮುನ್ನಡೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಫ್ಲಿಪ್ಸ್‌ ಗೋಲು ದಾಖಲಿಸಿ ಮಿಂಚಿದರು. ಆ ನಂತರ ಹೊಂಡುರಸ್‌ ತಂಡ ಸಮಬಲದ ಗೋಲು ಗಳಿಸಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.

ದ್ವಿತೀಯಾರ್ಧದಲ್ಲಿ ಫ್ರಾನ್ಸ್‌ ತಂಡ ಅಬ್ಬರಕ್ಕೆ ಹೊಂಡುರಸ್‌ ಬೆಚ್ಚಿತು. 64ನೇ ನಿಮಿಷದಲ್ಲಿ ಫ್ಲಿಪ್ಸ್‌ ಮತ್ತೊಮ್ಮೆ ಮೋಡಿ ಮಾಡಿದರು. ವೈಯಕ್ತಿಕ ಎರಡನೇ ಗೋಲು ದಾಖಲಿಸಿದ ಅವರು 3–1ರ ಮುನ್ನಡೆಗೆ ಕಾರಣರಾದರು.

ಆ ನಂತರವೂ ಫ್ರಾನ್ಸ್‌ ಮೋಡಿ ಮಾಡಿತು. 86ನೇ ನಿಮಿಷದಲ್ಲಿ ಗೌಯಿರಿ ಗೋಲು ಗಳಿಸಿದರೆ, ಅಡ್ಲಿ 90+6 ಗೋಲ ದಾಖಲಿಸಿ ಮಿಂಚಿದರು.

ಜಪಾನ್‌ ಮತ್ತು ನ್ಯೂ ಕ್ಯಾಲೆಡೋ ನಿಯಾ ನಡುವಣ ದಿನದ ಇನ್ನೊಂದು ಪಂದ್ಯ 1–1 ಗೋಲುಗಳಿಂದ ಡ್ರಾ ಆಯಿತು.

ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್‌ 4–0 ಗೋಲುಗಳಿಂದ ಇರಾಕ್‌ಗೆ ಸೋಲುಣಿಸಿತು. ಮೆಕ್ಸಿಕೊ ಮತ್ತು ಚಿಲಿ ಪಂದ್ಯ ಗೋಲು ರಹಿತ ಡ್ರಾ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT