ಸೋಮವಾರ, ಸೆಪ್ಟೆಂಬರ್ 16, 2019
26 °C

ಮತ್ತೆ ವರುಣನ ಆರ್ಭಟ; ತತ್ತರಿಸಿದ ಜನ

Published:
Updated:
ಮತ್ತೆ ವರುಣನ ಆರ್ಭಟ; ತತ್ತರಿಸಿದ ಜನ

ಬೆಂಗಳೂರು: ರಾಜ್ಯದ ಉತ್ತರ ಒಳನಾಡು ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಶುಕ್ರವಾರ ರಾತ್ರಿ ಜೋರು ಮಳೆಯಾಗಿದ್ದು, ಕೆರೆಕಟ್ಟೆಗಳು ತುಂಬಿವೆ.

ಕೆಲವೆಡೆ ಕೆರೆಕೋಡಿ ಬಿದ್ದು ಮತ್ತು ಹಳ್ಳಗಳು ಉಕ್ಕೇರಿದ ಪರಿಣಾಮ ನೂರಾರು ಮನೆಗಳಿಗೆ ನೀರು ನುಗ್ಗಿದ್ದು, ಈರುಳ್ಳಿ, ಮೆಕ್ಕೆಜೋಳ, ಮೆಣಸಿನ ಗಿಡಗಳು ನೀರಿನಲ್ಲಿ ನಿಂತಿವೆ.

ಅಫಜಲಪುರ ತಾಲ್ಲೂಕಿನಲ್ಲಿ ಶುಕ್ರವಾರ ಕೊಚ್ಚಿಹೋಗಿದ್ದ ಬಾಲಕನ ಶವ ಪತ್ತೆಯಾಗಿದೆ.

ಚಿತ್ರದುರ್ಗ ನಗರದಲ್ಲಿ ಶುಕ್ರವಾರ ಸುರಿದ ಮಳೆಯಿಂದಾಗಿ ಹಲವು ಗಂಟೆಗಳ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತು. ಇಲ್ಲಿನ ನೆಹರೂ ನಗರ, ಚೇಳುಗುಡ್ಡ, ಮೆದೇಹಳ್ಳಿ, ದಾವಣಗೆರೆ ರಸ್ತೆ ಮಾರ್ಗ, ಐಯುಡಿಪಿ ಬಡಾವಣೆಗಳಲ್ಲಿ 500ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಹೊಂಡಗಳು ಭರ್ತಿಯಾಗಿ ರಾಜಕಾಲುವೆಗಳಲ್ಲಿ ಹರಿದ ನೀರು ಮನೆಗಳಿಗೆ ನುಗ್ಗಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದೆ.

ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕುಗಳಲ್ಲಿ ಶನಿವಾರವೂ ಧಾರಾಕಾರ ಮಳೆಯಾಗಿದ್ದು, ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಹೋಬಳಿ ವ್ಯಾಪ್ತಿಯ ತೋಟಗಳಲ್ಲಿ ನೀರು ನಿಂತಿದೆ.

ದಶಕದಲ್ಲಿ ಇದೇ ಪ್ರಥಮ ಬಾರಿಗೆ ಚಂದ್ರವಳ್ಳಿ ಕೆರೆ ಕೋಡಿ ಬಿದ್ದು, ಬಂಡೆ ಮೇಲೆ ನೀರು ಹರಿಯುತ್ತಿದೆ. ಜಲಪಾತದಂತೆ ಬಂಡೆ ಮೇಲಿಂದ ಹರಿಯುವ ನೀರಿನಲ್ಲಿ ಯುವಕರು, ಮಕ್ಕಳು ಸಂಭ್ರಮಿಸಿದರು.

ಶಿವಮೊಗ್ಗ ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆಯಾಗಿದೆ. ಸಾಗರ ತಾಲ್ಲೂಕಿನಲ್ಲಿ ಹದ ಮಳೆಯಾಗಿದ್ದು, ಶಿವಮೊಗ್ಗ ನಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಾಧಾರಣ ಮಳೆ ಸುರಿದಿದೆ.

ಕಲಬುರ್ಗಿ, ಕೊಪ್ಪಳ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಹಲವೆಡೆ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ.ಅಫಜಲಪುರ ತಾಲ್ಲೂಕಿನ ತೆಲ್ಲೂರು ಹಳ್ಳದಲ್ಲಿ ಶುಕ್ರವಾರ ಕೊಚ್ಚಿಹೋಗಿದ್ದ ಬಾಲಕನ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.

ರಾಯಚೂರು ಜಿಲ್ಲೆಯ ಶಕ್ತಿನಗರ ಸಮೀಪದ ದೇವಸೂಗೂರು ಹೋಬಳಿ ವ್ಯಾಪ್ತಿಯಲ್ಲಿ 50 ಮನೆಗಳಿಗೆ ಹಾನಿಯಾಗಿದೆ. ಸೇತುವೆಗಳು ಮುಳುಗಡೆಯಾಗಿ 15 ಗ್ರಾಮಗಳ ಸಂಚಾರ ಕಡಿತಗೊಂಡು ಜನ ಪರದಾಡಿದರು.

ಕೊಪ್ಪಳ ತಾಲ್ಲೂಕಿನ ಹಿರೇಹಳ್ಳ ಜಲಾಶಯ ಭರ್ತಿಯಾಗಿದೆ. ಶನಿವಾರ ಬೆಳಿಗ್ಗೆ ಜಲಾಶಯದಿಂದ ನೀರು ಹೊರಬಿಡಲಾಗಿದ್ದು. ಹಳ್ಳದಲ್ಲಿ ಪ್ರವಾಹ ಉಂಟಾಗಿದ್ದರಿಂದ ಈರುಳ್ಳಿ, ಮೆಕ್ಕೆಜೋಳ, ಮೆಣಸಿನ ಗಿಡ, ಸಜ್ಜೆ ಹಾಗೂ ಹೂ ನೀರಿನಲ್ಲಿ ಮುಳುಗಿವೆ. ಗಬ್ಬೂರು ಕೆರೆ ಭರ್ತಿಯಾಗಿದ್ದು, ಕೋಡಿ ಬಿದ್ದಿದೆ.

ಬೀದರ್‌ ತಾಲ್ಲೂಕಿನ ಕಾಶೆಂಪುರ(ಪಾನ್)–ಮನ್ನಳ್ಳಿ ರಸ್ತೆಯಲ್ಲಿ ಹಳ್ಳದ ಸೇತುವೆಯ ತಡೆಗೋಡೆ ಕುಸಿದು ಬಿದ್ದಿದೆ. ಭಾಲ್ಕಿ ತಾಲ್ಲೂಕಿನ ಏಣಕೂರಿನ ಹಳ್ಳ ಉಕ್ಕಿ ಹರಿದಿದೆ.ಕಾರಂಜಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದೆ. ಯಾದಗಿರಿ ತಾಲ್ಲೂಕಿನ ಗುರಸಣಗಿ, ನಾಯ್ಕಲ್, ಚಟ್ನಳ್ಳಿ, ಮಗನಾಲ ಸೇರಿ ಭೀಮಾ ನದಿ ಪಾತ್ರದಲ್ಲಿ 300 ಎಕರೆಗೂ ಹೆಚ್ಚು ಕೊಯ್ಲು ಹಂತದ ಭತ್ತದ ಬೆಳೆ ನೆಲಕಚ್ಚಿದೆ.

ಧಾರವಾಡ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಶನಿವಾರವೂ ಮಳೆಯಾಗಿದ್ದು, ಹುಬ್ಬಳ್ಳಿ ತಾಲ್ಲೂಕಿನ ಮಂಟೂರು ಗ್ರಾಮದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಬೆಣ್ಣಿಹಳ್ಳದ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಮಂಟೂರಿನ 15 ಮನೆಗಳು ಜಲಾವೃತವಾಗಿದೆ. ಈ ಮನೆಗಳಲ್ಲಿ ವಾಸ ಇದ್ದ 90 ಮಂದಿಯನ್ನು ಮಂಟೂರಿನ ಅನ್ನದಾನೇಶ್ವರ ಮಠಕ್ಕೆ ಸ್ಥಳಾಂತರಿಸಲಾಗಿದೆ.

ತುಂಗಭದ್ರಾ ಜಲಾಶಯದ ಹಿನ್ನೀರು ಹೆಚ್ಚಾಗಿರುವುದರಿಂದ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ವ್ಯಾಪ್ತಿಯ ಹೊಲಗಳಲ್ಲಿನ ಮೆಕ್ಕೆಜೋಳ, ಶೇಂಗಾ ಬೆಳೆಗಳು ನೀರಿನಿಂದ ಆವೃತವಾಗಿವೆ.

ಬೆಳಗಾವಿ ಜಿಲ್ಲೆಯ ಖಾನಾಪುರ, ಹಿರೇಬಾಗೇವಾಡಿ ಮುಂತಾದ ಕಡೆಗಳಲ್ಲಿ ಮಳೆಯಾಗಿದೆ. ಸವದತ್ತಿಯ ಹೂಲಿ ಕೆರೆ ಶುಕ್ರವಾರ ಸಂಜೆ ಒಡೆದಿದ್ದು, 150ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಹೊಲಗಳಿಗೆ ನೀರು ನುಗ್ಗಿದ್ದು, ಬೆಳೆ ನಾಶವಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಹೊಸೂರ ಗ್ರಾಮದಲ್ಲಿ 12 ಮನೆಗಳು ಕುಸಿದಿವೆ.

ಗುಂಡಿಗೆ ಬಿದ್ದು ಬಾಲಕಿ ಸಾವು

ದಾವಣಗೆರೆ: ವಿನೋಬ ನಗರದ ಗೌರಮ್ಮ ನರಹರಿಶೇಟ್‌ ಕಲ್ಯಾಣ ಮಂಟಪ ಸಮೀಪ ಶನಿವಾರ ಮಳೆ ನೀರು ತುಂಬಿಕೊಂಡಿದ್ದ ಗುಂಡಿಗೆ ಬಿದ್ದು ಆರು ವರ್ಷದ ಬಾಲಕಿ ಮಧು ಮೃತಪಟ್ಟಿದ್ದಾಳೆ.

ಬಾಲಕಿ ವಾಸವಿದ್ದ ಟೆಂಟ್‌ ಸಮೀಪದ ಗುಂಡಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ತುಂಬಿ ಹರಿಯುತ್ತಿತ್ತು. ಬೆಳಿಗ್ಗೆ ಆಟವಾಡುತ್ತಿರುವಾಗ ಬಾಲಕಿ ಆಕಸ್ಮಿಕವಾಗಿ ಗುಂಡಿಗೆ ಬಿದ್ದಿದ್ದಾಳೆ. ಮಹಾರಾಷ್ಟ್ರದ ಪಂಡರಾಪುರದಿಂದ ಕೂಲಿ ಅರಸಿ ಬಂದಿದ್ದ ಅಜ್ಜಿಯ ಜತೆಗೆ ಬಾಲಕಿ ಇಲ್ಲಿ ವಾಸವಾಗಿದ್ದಳು.

Post Comments (+)