ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲಿ ಹಗಲು ದರೋಡೆ: ಯಡಿಯೂರಪ್ಪ

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ. ರಸ್ತೆ ಅಭಿವೃದ್ದಿ, ವೈಟ್ ಟ್ಯಾಪಿಂಗ್ ಹೆಸರಿನಲ್ಲಿ ಹಣ ಲೂಟಿ ಹೊಡೆಯಲಾಗುತ್ತಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆರೋಪಿಸಿದರು.

‘ಬಿಬಿಎಂಪಿ ತನ್ನ ಆಸ್ತಿಗಳನ್ನೆಲ್ಲ ಅಡವಿಟ್ಟು ₹ 1,000 ಕೋಟಿ ಸಾಲ ಪಡೆದಿದೆ. ಮತ್ತೆ ₹ 800 ಕೋಟಿ ಸಾಲ ಎತ್ತಲು ಮುಂದಾಗಿದ್ದು, ಯಾವ ಆಸ್ತಿ ಒತ್ತೆ ಇಡುತ್ತದೋ ಗೊತ್ತಿಲ್ಲ’ ಎಂದರು.

‘ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ 850 ಕಿ.ಮೀ ಉದ್ದದ ರಾಜಕಾಲುವೆಯ ಪೈಕಿ 325 ಕಿ.ಮೀ. ಒತ್ತುವರಿಯಾಗಿದೆ. ರಾಜಕಾಲುವೆಗಳ ದುರಸ್ತಿಗೆ ₹ 800 ಕೋಟಿ ಮೊತ್ತದ 600 ಕಾಮಗಾರಿಗಳನ್ನು 5 ಪ್ಯಾಕೇಜ್‌ಗಳಲ್ಲಿ 5 ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ, ಆ ಗುತ್ತಿಗೆದಾರರು ಕಪ್ಪು ಪಟ್ಟಿಗೆ ಸೇರಿದವರು’ ಎಂದೂ ಅವರು ಹೇಳಿದರು.

ವಿರೋಧ ಪಕ್ಷ ಜವಾಬ್ದಾರಿ ನಿಭಾಯಿಸುವುದು ತಪ್ಪೇ?: ‘ಬಿಜೆಪಿ ಗುಂಡಿ ಬಿದ್ದಿರುವ ರಸ್ತೆಗಳ ವೀಕ್ಷಣೆ ನಡೆಸಿದರೆ, ಮಳೆಯಿಂದ ಅವಘಡ ಸಂಭವಿಸಿ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಿದರೆ, ಕಾಂಗ್ರೆಸ್‌ನವರು ರಾಜಕೀಯ ಪ್ರೇರಿತ ಎನ್ನುತ್ತಾರೆ. ನೀವೇ ಹೇಳಿ, ವಿರೋಧ ಪಕ್ಷವಾಗಿ ಬಿಜೆಪಿ ತನ್ನ ಜವಾಬ್ದಾರಿ ನಿಭಾಯಿಸುವುದು ತಪ್ಪೇ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳನ್ನು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಇಂದು (ಶನಿವಾರ) ಬೆಳಿಗ್ಗೆ ಇನ್ನೂ ನಿದ್ದೆಯಲ್ಲಿದ್ದಾಗಲೇ, ನಾನು ನಮ್ಮ ಪಕ್ಷದ ಮುಖಂಡರ ಜತೆ ಮಳೆಗೆ ಸಾವಿಗೀಡಾದವರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಸಾಧ್ಯವಾದಷ್ಟು ಪರಿಹಾರ ಕೊಟ್ಟಿದ್ದೇನೆ. ನಾವು ಹೋಗಿ ಬಂದ ಬಳಿಕ ನಿದ್ದೆಯಿಂದ ಎದ್ದು ತಡಬಡಾಯಿಸಿ ಸಾಂತ್ವನ ಹೇಳಲು ಮುಖ್ಯಮಂತ್ರಿ ತೆರಳಿದರು’ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT