ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಪ್ರಗತಿಗೆ ವಿದ್ಯಾರ್ಥಿಗಳ ದೇಣಿಗೆ ಇರಲಿ

Last Updated 15 ಅಕ್ಟೋಬರ್ 2017, 6:55 IST
ಅಕ್ಷರ ಗಾತ್ರ

ದಾವಣಗೆರೆ: ‘ಸರ್ಕಾರಿ ಶಾಲೆ, ಕಾಲೇಜುಗಳು ಮುಚ್ಚುವಂತಹ ಸ್ಥಿತಿಯಲ್ಲಿರುವಾಗ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯ ವಿಷಯ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ
ಕಾಲೇಜಿನ ಆವರಣದಲ್ಲಿ ಶನಿವಾರ ನಡೆದ ಕಾಲೇಜಿನ ಹಾಗೂ ಸ್ನಾತಕೋತ್ತರ ಕೇಂದ್ರದ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ಸರ್ಕಾರವು ಎಲ್ಲ ಸಮುದಾಯಗಳ ಪ್ರಗತಿಗೆ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲು ಸರ್ಕಾರ ನಿರ್ಧರಿಸಿರುವುದು ಶ್ಲಾಘನೀಯ. ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ₹ 300 ಕೋಟಿ ವೆಚ್ಚದಲ್ಲಿ ನಗರದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವ್ಯಾಪ್ತಿಯಲ್ಲಿಯೂ ಒಳಚರಂಡಿ ಕಾಮಗಾರಿ ನಡೆಸಲಾಗುವುದು ಎಂದು ಅವರು ಹೇಳಿದರು. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಮೂಲಕ ಕಾಲೇಜಿನ ಆವರಣದಲ್ಲಿ ಸಭಾಭವನ ನಿರ್ಮಿಸಿಕೊಳ್ಳಬೇಕು. ಜತೆಗೆ ವಿದ್ಯಾರ್ಥಿಗಳಿಂದಲೂ ದೇಣಿಗೆ ಪಡೆದರೆ ಉತ್ತಮ ಎಂದು ಸಲಹೆ ನೀಡಿದರು.

ಕಾಲೇಜಿಗೆ ಕುಡಿಯುವ ನೀರಿನ ಸಂಪರ್ಕ ಹಾಗೂ ಕಾಲೇಜು ಮಾರ್ಗದ ರಸ್ತೆ ದುರಸ್ತಿ ಪಡಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.
ವಿಧಾನಪರಿಷತ್‌ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌ ಮಾತನಾಡಿ, ‘ಸರ್ಕಾರಿ ಶಾಲೆ– ಕಾಲೇಜುಗಳಲ್ಲಿ ಅಧ್ಯಯನ ಮಾಡಿದವರೇ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ಸಹ ಸರ್ಕಾರಿ ಶಾಲೆಯಲ್ಲಿ ಓದಿದವರು. ನೀವು ಕೂಡ ಉತ್ತಮ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆಯನ್ನು ಹೊಂದಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಕಾಲೇಜಿಗೆ ಅಗತ್ಯ ಕಂಪ್ಯೂಟರ್‌ ಸೌಲಭ್ಯ ಹಾಗೂ ಪ್ರಯೋಗಾಲಯಕ್ಕೆ ಅವಶ್ಯ ಉಪಕರಣಗಳನ್ನು ನಮ್ಮ ಅನುದಾನದಿಂದ ಕೊಡಿಸಲಾಗುವುದು’ ಎಂದು ಅವರು ಭರವಸೆ ನೀಡಿದರು. ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ‘1992ರಲ್ಲಿ ಕೇವಲ 23 ವಿದ್ಯಾರ್ಥಿಗಳಿಂದ ಕಾಲೇಜನ್ನು ಆರಂಭಿಸಲಾಯಿತು. ಪ್ರತಿ ವರ್ಷ 3ರಿಂದ 5 ರ‍್ಯಾಂಕ್‌ಗಳು ಬರುತ್ತಿವೆ’ ಎಂದು ಮಾಹಿತಿ ನೀಡಿದರು.

‘ಕಾಲೇಜಿನ 24 ಕೊಠಡಿಗಳಿಗೂ ವೈಫೈ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ 20 ಕೊಠಡಿಗಳ ಅವಶ್ಯವಿದೆ. ಜತೆಗೆ ಸಭಾಭವನ, ಕಂಪ್ಯೂಟರ್‌ ತರಗತಿ ಹಾಗೂ ವಿಜ್ಞಾನ ವಿಷಯದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯದ ಕೊರತೆ ಇದೆ. ಸಚಿವರು ಹಾಗೂ ಶಾಸಕರು ಇವುಗಳ ಸೌಲಭ್ಯ ಒದಗಿಸಿಕೊಡಬೇಕು’ ಎಂದು ಅವರು ಮನವಿ ಮಾಡಿದರು.
ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿದ್ದ ಪ್ರೊ.ಜಿ.ವಿಶ್ವೇಶ್ವರಪ್ಪ ಅವರು ಕಾಲೇಜಿನ ಆರಂಭದ ದಿನಗಳ ಬಗ್ಗೆ ಮಾತನಾಡಿದರು.

ಕಾಲೇಜಿನ ನಿಕಟ ಪೂರ್ವ ಪ್ರಾಂಶುಪಾಲರಾದ ಪ್ರೊ.ಬಿ.ಬಿ.ಪಾಟೀಲ, ಪ್ರೊ.ಟಿ.ಕೆ.ಶಂಕರಯ್ಯ ಅವರನ್ನು ಗೌರವಿಸಲಾಯಿತು. ಕಾಲೇಜು ಶಿಕ್ಷಣ ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಪ್ರೊ.ಎಚ್‌. ವೆಂಕಟಶಿವಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಸಿ.ಎಚ್‌.ಮುರುಗೇಂದ್ರಪ್ಪ, ಆರ್‌.ಪ್ರಸಾದ್‌, ಆರ್‌.ರಾಮಪ್ಪ, ಎಂ.ಬಿ.ರಾಮಪ್ಪ, ದಿಳ್ಯಪ್ಪ, ಎಸ್‌.ಆರ್‌.ಭಜಂತ್ರಿ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ.ಆರ್‌.ತಿಪ್ಪಾರೆಡ್ಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT