ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ಮಹಾಲಕ್ಷ್ಮಿ ರಥೋತ್ಸವ

Last Updated 15 ಅಕ್ಟೋಬರ್ 2017, 7:39 IST
ಅಕ್ಷರ ಗಾತ್ರ

ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಕಲ್ಕತ್ತಾದೇವಿ (ಮಹಾಲಕ್ಷ್ಮಿ) ರಥೋತ್ಸವ ಶನಿವಾರ ಭಕ್ತಸಾಗರದ ಸಂಭ್ರಮ ಮತ್ತು ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆಯಿಂದ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ಸರದಿಯಲ್ಲಿ ನಿಂತು ಮಹಾಲಕ್ಷ್ಮಿ ದರ್ಶನ ಪಡೆದರು. ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ ನಡೆದವು. ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಿದರು.

ವಿವಿಧ ಗ್ರಾಮಗಳ ಸಹಸ್ರಾರು ಭಕ್ತರು, ಮಹಿಳೆಯರು ಮಹಾಲಕ್ಷ್ಮಿ ದರ್ಶನ ಪಡೆದು ಹರಕೆ ತೀರಿಸಿದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ರಥೋತ್ಸವ ಸಂಜೆ 5 ಗಂಟೆವರೆಗೆ ಜರುಗಿತು. ಡೊಳ್ಳು, ಬಾಜಾಬಜಂತ್ರಿಗಳು, ಬ್ಯಾಂಜೋ ತಂಡಗಳು, ಕೊಳಲು ವಾದನ ಮತ್ತಿತರ ವ್ಯಾದ್ಯ ವೈಭವಗಳು ರಥೋತ್ಸವದ ಸೊಬಗನ್ನು ಇಮ್ಮಡಿಸಿದ್ದವು.

ಪಟ್ಟಣದ ಮಹಾಲಕ್ಷ್ಮಿ ದೇವಸ್ಥಾನದಿಂದ ಬುಟ್ನಾಳ ರಸ್ತೆಯಲ್ಲಿರುವ ಸಜ್ಜನ್ ಕಲ್ಯಾಣ ಮಂಟಪದವರೆಗೆ ರಥೋತ್ಸವ ಜರುಗಿತು. ನಂತರ ಭಕ್ತರು ಮಹಾಲಕ್ಷ್ಮಿ ಮೂರ್ತಿಯನ್ನು ರಥದ ಸಮೇತ ಹೆಗಲ ಮೇಲೆ ಹೊತ್ತುಕೊಂಡು ಮೂರು ಕಿಲೋ ಮೀಟರ್ ಅಂತರದಲ್ಲಿರುವ ಏಳು ಗ್ರಾಮಗಳ ಸೀಮೆಯ ಮಧ್ಯೆದಲ್ಲಿನ ಹಿರೇಗೌಡ ಹೊಲದಲ್ಲಿರುವ ‘ಆಯಿ ತಳ’ ಲಕ್ಷ್ಮಿ ದೇವಸ್ಥಾನಕ್ಕೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು.

ಭಕ್ತರು ಬಾದಾಮಿ, ಉತ್ತತ್ತಿ, ಬಾಳೆ ಹಣ್ಣುಗಳನ್ನು ಎಸೆದು ಹರಕೆ ತೀರಿಸಿದರು. ಮುತ್ತೈದೆಯರು ಮಹಾಲಕ್ಷ್ಮಿಗೆ ಕುಪ್ಪಸ ಖಣ, ಅಕ್ಕಿ, ಬಾಳೆಹಣ್ಣು ಉತ್ತತ್ತಿ, ಕೊಬ್ಬರಿ ಉಡಿ ತುಂಬಿದರು. ರಥೋತ್ಸವ ವೀಕ್ಷಿಸಲು ಮಹಿಳೆಯರು, ಮಕ್ಕಳು ಮನೆಗಳ ಮಹಡಿಗಳ ಮೇಲೆ ಕುಳಿತಿದ್ದರು.

ಪೊಲೀಸ್ ಬಂದೋಬಸ್ತ್: ರಥೋತ್ಸವದ ಸಂದರ್ಭದಲ್ಲಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಜಾತ್ರೆಯ ನಿಮಿತ್ತ ಶನಿವಾರ ಮಹಾಲಕ್ಷ್ಮಿ ಜಾತ್ರಾ ಕಮಿಟಿ ವತಿಯಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT