ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳಿನ ಚಟ್ಟಿನ ಮೇಲೆ ಯುವಕರ ಹೆಜ್ಜೆ ಕುಣಿತ

Last Updated 15 ಅಕ್ಟೋಬರ್ 2017, 8:57 IST
ಅಕ್ಷರ ಗಾತ್ರ

ಹನುಮಸಾಗರ: ಮೊನುಚಾದ ಪಾಪಾಸುಕಳ್ಳಿಯ ಎಲೆಗಳಿಂದ ಹೆಣೆದ ಹದಿನಾರು ಚೌಕಗಳನ್ನು ಹೊಂದಿರುವ ಚಟ್ಟು, ಚಟ್ಟಿನ ಮೇಲೆ ಹೊತ್ತಿ ಉರಿಯುತ್ತಿರುವ ದೀಪಗಳು, ಸುತ್ತಲು ತಾಳಕ್ಕೆ ತಕ್ಕಂತೆ ಹಲಗೆ ಬಡಿಯುತ್ತಿರುವ ನಾಯಕ, ಹಲಗೆಯ ತಾಳ ಬದಲಾಗುತ್ತಿದ್ದಂತೆ ಚೌಕದ ಮನೆಗಳಲ್ಲಿ ಯುವಕರು ಹಾರಿ ಪ್ರೇಕ್ಷಕರು ರೋಮಾಂಚನಗೊಳ್ಳುವಂತೆ ಕುಣಿಯುತ್ತಿರುವುದು, ಯುವಕರು ಹಾಕುತ್ತಿರುವ ಹೆಜ್ಜೆಗಳನ್ನು ತದೇಕದೃಷ್ಟಿಯಿಂದ ವೀಕ್ಷಿಸುತ್ತಿರುವ ಪ್ರೇಕ್ಷಕರು. ಜನರಲ್ಲಿ ರೋಮಾಂಚನ ಉಂಟು ಮಾಡುವ ಮುಳ್ಳಿನ ಮೇಲೆ ಹೆಜ್ಜೆ ಕುಣಿತವನ್ನು ನೋಡಲು ಹನುಮನಾಳಕ್ಕೆ ಬರಬೇಕು.

ಅತ್ಯಂತ ಹಳೆಯ ಸಾಂಪ್ರದಾಯಿಕ ಜನಪದ ಕಲೆಯಾದ ‘ಪಾಪಾಸು ಕಳ್ಳಿಯ ಮೇಲೆ ಹೆಜ್ಜೆ ಕುಣಿತ’ ನೃತ್ಯವನ್ನು ಈಚೆಗೆ ಹನುಮಸಾಗರದ ಸಾಹೇಬ್ ಮಸೀದ್ ಆವರಣದಲ್ಲಿ ಹಜರತ್ ಇಮಾಮ್ ಕಾಶೀಂ ನೌಜವಾನ ಸಂಘ ಆಯೋಜಿಸಿದ್ದು, ಪ್ರತಿ ವರ್ಷ ಹನುಮನಾಳ ಗ್ರಾಮದ ಯುವಕರ ತಂಡ ಈ ನೃತ್ಯವನ್ನು ಮಾಡಿ ಜನರನ್ನು ಜನರನ್ನು ರಂಜಿಸುತ್ತಿದೆ.

ಡಬಗೋಳಿ ಮುಳ್ಳಿನ(ಪಾಪಾಸು ಕಳ್ಳಿ) ಮೇಲೆ ಯುವಕರು ಮಾಡುತ್ತಿರುವ ನೃತ್ಯ ನಾಡಿನ ಯಾವ ಭಾಗದಲ್ಲೂ ಕಂಡು ಬರದಂತಹ ಜನಪದ ಪ್ರಕಾರ. ಪ್ರತಿವರ್ಷ ಈ ಯುವಕರ ಕಲೆಯನ್ನು ನೋಡುವುದಕ್ಕೆ ಸಾವಿರಾರು ಜನರು ಕಾತುರದಿಂದ ಕಾಯುತ್ತಿರುತ್ತಾರೆ.

ಈ ಭಾಗದ ಸಾಂಪ್ರದಾಯಿಕ ಕಲೆ: ಈ ಭಾಗದಲ್ಲಿ ನಾಲ್ಕಾರು ದಶಕಗಳ ಹಿಂದೆ ಅಲಾಯಿ ಹಬ್ಬದ ಸಮಯದಲ್ಲಿ ಗ್ರಾಮೀಣರು ತಮ್ಮ ಮನರಂಜನೆಗಾಗಿ ಮುಳ್ಳಿನ ಮೇಲೆ ಹೆಜ್ಜೆ ಕುಣಿತ, ರಿವಾಯಿತ್ ಪದ, ಕೋಲು ಹೆಜ್ಜೆಯಂತಹ ಅನೇಕ ಜನಪದ ಕಲೆಗಳು ಪ್ರರ್ಶಿಸುತ್ತಿದ್ದರು. ಆದರೆ ಇದರಲ್ಲಿ ರಿವಾಯಿತ್‌ ಪದ ಈಗಲೂ ಉಳಿದಿದ್ದರೆ ಮುಳ್ಳಿನ ಮೇಲೆ ಹೆಜ್ಜೆ ಕುಣಿತ ಮಾತ್ರ ಬಹುತೇಕ ಭಾಗಗಳಲ್ಲಿ ನಿಂತುಹೋಗಿದೆ. ‘ಹನುಮನಾಳ ಗ್ರಾಮದಲ್ಲಿ ಈ ಜನಪದ ನೃತ್ಯಕ್ಕೆ ಈಗಲೂ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದ್ದು, ಗ್ರಾಮದ ಹಿರಿಯರು ಯುವಕರಿಗೆ ಸಾಕಷ್ಟು ತಾಲೀಮು ನೀಡಿ ಅಳಿವಿನಂಚಿನಲ್ಲಿದ್ದ ಇಂತಹ ಜನಪದ ಕಲೆಯೊಂದು ಉಳಿಸಲು ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹಿರಿಯ ಕಲಾವಿದ ಪರಪ್ಪ ನಾಗಲಾಪುರ ಹೇಳಿದರು.

ಡಬಗೊಳ್ಳಿ ಮುಳ್ಳಿನ(ಪಾಪಾಸು ಕಳ್ಳಿ) ಚಟ್ಟಿನ ಮಧ್ಯೆ ನೃತ್ಯ: ಸಾಮಾನ್ಯವಾಗಿ ಕೇವಲ ಅಲಾಯಿ ಹಬ್ಬದಲ್ಲಿ ಮಾತ್ರ ಈ ಆಟ ನಡೆಸುವುದು ಸಂಪ್ರದಾಯ. ಒಂದು ಬಾರಿ ಹಸಿ ಮುಳ್ಳಿನ ಚಟ್ಟು ಕಟ್ಟಿದ ನಂತರ ಎಷ್ಟೆ ಕಡೆಯಾದರೂ ನೃತ್ಯ ಪ್ರದರ್ಶನ ನೀಡಬಹುದು, ಆದರೆ ಕೊನೆಯಲ್ಲಿ ಚಟ್ಟು ನದಿಗೆ ಬಿಟ್ಟು ಬಂದ ನಂತರ ಮತ್ತೊಂದು ಚಟ್ಟು ಕಟ್ಟಿ ಹೆಜ್ಜೆ ನೃತ್ಯ ಆಡುವಂತಿಲ್ಲ. ಅದೇನಿದ್ದರೂ ಮುಂದಿನ ವರ್ಷದಲ್ಲಿ ಬರುವ ಅಲಾಯಿ ಹಬ್ಬಕ್ಕೆ ಮಾತ್ರ ಸೀಮಿತ. ಹದಿನಾರು ಮನೆಗಳಿರುವಂತೆ (ಚೌಕ) ಬಿದಿರಿನ ಚಟ್ಟು ಹೆಣೆದು ಅದರ ಮೇಲ್ಭಾಗದಲ್ಲಿ ಪಾಪಾಸುಕಳ್ಳಿಯ ಮುಳ್ಳಿನ ಎಲೆಗಳನ್ನು ಕಟ್ಟಲಾಗುತ್ತದೆ.

ಅಲ್ಲದೆ ಮಧ್ಯದಲ್ಲಿ ದೀಪಗಳನ್ನು ಹಚ್ಚಿ ಇಡಲಾಗುತ್ತದೆ. ದೀಪಗಳು ಆರಾದಂತೆ ಆಗಾಗ ಎಣ್ಣೆ ಸುರಿಯಲಾಗುತ್ತದೆ. ತಂಡದ ಹಿರಿಕರೊಬ್ಬರು ನೃತ್ಯಕ್ಕೆ ಅಪ್ಪಣೆಕೊಡುತ್ತಿದ್ದಂತೆ ಕುಶಾಲ ತೋಪಿನಿಂದ ಗುಂಡು ಹಾರಿಸುತ್ತಾರೆ. ಹೀಗೆ ಕುಶಾಲ ತೋಪಿನಿಂದ ಗುಂಡು ಹಾರಿತೆಂದರೆ ಗ್ರಾಮದ ವಿವಿಧ ಭಾಗಗಳಲ್ಲಿರುವ ಜನರಿಗೆ ಮುಳ್ಳಿನ ಮೇಲೆ ಹೆಜ್ಜೆ ಕುಣಿತ ಆಟ ಆರಂಭವಾಯಿತು ಎಂದು ಸಂದೇಶ ತಲುಪಿದಂತೆ ಸರಿ. ಹಲಗೆಯ ಸದ್ದಿಗೆ ಹೆಜ್ಜೆ ಹಾಕುವ ಯುವಕರು ಅಲಾಯಿ ಪದಗಳನ್ನು ಹಾಡುತ್ತಲೇ ಮುಳ್ಳಿನ ಮನೆಗಳಲ್ಲಿ ಹಾರುತ್ತಾರೆ. ಬಳಿಕ ಒಂದು ಮನೆಯಿಂದ ಮತ್ತೊಂದು ಮನೆಗೆ ಕುಣಿಯುತ್ತಲೇ ಮನೆ ಬದಲಾಯಿತ್ತಾರೆ.

ಸ್ವಲ್ಪ ಆಯಾ ತಪ್ಪಿದರೆ ಅಥವಾ ಹಾರುವಾಗ ಮುಂದಿನ ಮನೆಯ ಯುವಕ ವಿಳಂಬ ಮಾಡಿದರೆ ಮೊನುಚಾದ ಮುಳ್ಳಿನ ಮೇಲೆ ಬೀಳುವ ಸಾಧ್ಯತೆ ಇರುತ್ತದೆ. ಹಲವಾರು ಹೆಜ್ಜೆಗಳು ಮುಗಿದ ನಂತರ ಬಂಡಿಯಗಾಲಿಯನ್ನು ಹಿಡಿದು ಯುವಕರು ಹೆಜ್ಜೆ ಹಾಕುತ್ತಾರೆ, ಬಳಿಕ ಆ ಚಕ್ರದ ಮೇಲೆ ನಾಲ್ಕಾರು ಯುವಕರು ಏರಿ ನಿಂತು ಅಲ್ಲಿಯೂ ಹೆಜ್ಜೆ ಹಾಕುತ್ತಾರೆ. ಹೀಗೆ ಮೈನವಿರೇಳುವ ಹಾಗೆ ಆಟ ನಡೆಯುತ್ತದೆ.

ಬೆಳ್ಳಂಬೆಳಗಿನವರೆಗೂ ನಡೆಯುವ ಆಟ: ಸಾಮಾನ್ಯವಾಗಿ ಗ್ರಾಮೀಣರು ತಮ್ಮೆಲ್ಲ ಕೆಲಸಗಳನ್ನು ಮುಗಿಸಿ ಬರುವುದು ಸಾಯಂಕಾಲವಾಗುತ್ತದೆ ಎಂಬ ಕಾರಣದಿಂದ ಈ ಮುಳ್ಳಿನ ಹೆಜ್ಜೆ ಆಟ ಆರಂಭವಾಗುವುದೇ ರಾತ್ರಿ ಹೊತ್ತಿನಲ್ಲಿ ಅದು ಮಂದ ಬೆಳಕಿನಲ್ಲಿ. ಬೆಳಗಿನವರೆಗೂ ನಿಲ್ಲದಂತೆ ಈ ಆಟ ನಡೆಯುತ್ತಿದ್ದರೆ ಇದರ ಜೊತೆಯಾಗಿ ಹಾಡುವ ರಿವಾಯಿತ್ ಪದಗಳು ಒಂದರ ಹಿಂದೆ ಒಂದರಂತೆ ಅಲೆಅಲೆಯಾಗಿ ಬರುತ್ತಿರುತ್ತವೆ. ಕೊನೆಯಲ್ಲಿ ಕುಶಾಲ ತೋಪಿನಿಂದ ಗುಂಡು ಹಾರುತ್ತಿದ್ದಂತೆ ಹೆಜ್ಜೆ ಕುಣಿತ ಮುಕ್ತಾಯವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT