ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ತಾಳಿಕೋಟಿ–ದೇವರಹಿಪ್ಪರಗಿ ರಾಜ್ಯ ಹೆದ್ದಾರಿ

Last Updated 15 ಅಕ್ಟೋಬರ್ 2017, 10:06 IST
ಅಕ್ಷರ ಗಾತ್ರ

ದೇವರಹಿಪ್ಪರಗಿ: ದೇವರಹಿಪ್ಪರಗಿ ಮತ್ತು ತಾಳಿಕೋಟಿ ನಡುವಿನ ಬಿ.ಬಿ.ಇಂಗಳಗಿವರೆಗಿನ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಹದಗೆಟ್ಟು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದ್ದು, ತಕ್ಷಣವೇ ದುರಸ್ತಿಗೊಳಿಸಬೇಕು ಎಂದು ದೇವೂರ ಮತ್ತು ಹಂಚಲಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದೇವರಹಿಪ್ಪರಗಿಯಿಂದ ದೇವೂರ, ಡೋಣಿ ಬೂದಿಹಾಳ, ಕೊಂಡಗೂಳಿ ಬಿ.ಬಿ.ಇಂಗಳವರೆಗಿನ ಮಾರ್ಗದ ರಸ್ತೆಯೆಲ್ಲ ಒಡೆದು ಹೋಗಿದೆ. ಡಾಂಬರು ಕಾಣದಂತಾಗಿ ತೆಗ್ಗು ದಿನ್ನೆಗಳಿಂದ ಆವೃತ್ತವಾಗಿದೆ. ಎಲ್ಲೆಂದರಲ್ಲಿ ಮಳೆನೀರು ನಿಂತು ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಯೇ ಹಿಡಿದುಕೊಂಡು ಪ್ರಯಾಣಿಸುವಂತಾಗಿದೆ.

ದೇವರಹಿಪ್ಪರಗಿಯಿಂದ ಬಿ.ಬಿ.ಇಂಗಳಗಿಗೆ 20 ನಿಮಿಷದಲ್ಲಿ ಕ್ರಮಿಸಬೇಕಾದ ರಸ್ತೆ ಒಂದು ಗಂಟೆ ಅವಧಿಯನ್ನು ತೆಗೆದುಕೊಳ್ಳುತ್ತಿದ್ದು, ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ವೃದ್ಧರು ಚಿಕ್ಕಮಕ್ಕಳು ಪರಿತಪಿಸುವಂತಾಗಿದೆ.

ವಾಹನಗಳಲ್ಲಿ ಪ್ರಯಾಣಿಸುವ ಗ್ರಾಮಸ್ಥರು ಸಂಕಷ್ಟದಲ್ಲಿಯೇ ದಿನನಿತ್ಯದ ಪ್ರಯಾಣ ಮಾಡಬೇಕಾಗಿದ್ದು, ಇನ್ನೂ ಖಾಸಗಿ ವಾಹನಗಳು ಸಂತೆಯ ದಿನಗಳಂದು ಕೆಟ್ಟ ರಸ್ತೆಯ ಮೇಲೆ ಪ್ರಯಾಣಿಕರನ್ನು ವಾಹನದ ಒಳಗಡೆ ಮತ್ತು ಮೇಲೆ ಕೂಡ್ರಿಸಿಕೊಂಡು ಬರುವುದರಿಂದ ಅಪಾಯಕ್ಕೆ ಅಹ್ವಾನ ನೀಡಿದಂತಾಗುತ್ತಿದೆ.

ರಸ್ತೆ ದುರಸ್ತಿಗಾಗಿ ಸಂಬಂಧಿಸಿದ ಇಲಾಖೆಯವರಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ಕೇಳಿದಾಗೊಮ್ಮೆ ಹೊಸ ರಸ್ತೆ ಮಂಜೂರಾಗಿದೆ ಎಂಬ ಸಿದ್ದ ಉತ್ತರ ಸಿಗುತ್ತದೆ. ಹೀಗಾಗಿ ಪ್ರಯಾಣ ತುಂಬ ಪ್ರಯಾಸವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕಾಗಿ ತಕ್ಷಣವೇ ದೇವರಹಿಪ್ಪರಗಿಯಿಂದ ಬಿ.ಬಿ.ಇಂಗಳಗಿಯವರೆಗೆ ರಸ್ತೆ ಪುನರ್ ನಿರ್ಮಾಣ ಮಾಡಬೇಕು ಎಂದು ದೇವೂರ, ಹಂಚಲಿ, ಬಿ.ಬಿ. ಇಂಗಳಗಿ ಗ್ರಾಮಗಳ ವಿಜಯಕುಮಾರ ಹಿರೇಮಠ, ಸಾಹೇಬಗೌಡ ಹಿಕ್ಕನಗುತ್ತಿ, ಮಹೇಶ ಬಾಗೇವಾಡಿ, ಗುರು ದಶವಂತ, ಶಿವರಾಯ ಬುದ್ನಿ, ಭೀಮನಗೌಡ ಬಿರಾದಾರ, ಭೀಮಣ್ಣ ವಾಲೀಕಾರ, ಲಾಲಸಾಬ್ ವಠಾರ, ಮಶಾಕಸಾಬ್ ತಿಳಗೂಳ, ದತ್ತುಗೌಡ ಬಿರಾದಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT