'ಹಸಿರು ದೀಪಾವಳಿ' ಅಭಿಯಾನದ ಬಗ್ಗೆ ಮೋದಿ ಸರ್ಕಾರ ಯೂ ಟರ್ನ್ ?

ಮಂಗಳವಾರ, ಜೂನ್ 18, 2019
23 °C

'ಹಸಿರು ದೀಪಾವಳಿ' ಅಭಿಯಾನದ ಬಗ್ಗೆ ಮೋದಿ ಸರ್ಕಾರ ಯೂ ಟರ್ನ್ ?

Published:
Updated:
'ಹಸಿರು ದೀಪಾವಳಿ' ಅಭಿಯಾನದ ಬಗ್ಗೆ ಮೋದಿ ಸರ್ಕಾರ ಯೂ ಟರ್ನ್ ?

ನವದೆಹಲಿ: ಹಸಿರು ದೀಪಾವಳಿ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೇಂದ್ರ ಪರಿಸರ ಸಚಿವ ಡಾ.ಹರ್ಷವರ್ಧನ್ ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧಿಸಿದ್ದನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದರು. ಆದರೆ ಬಿಜೆಪಿ ಬೆಂಬಲಿಗರಿಂದಲೇ ಈ ಟ್ವೀಟ್ ಟ್ರೋಲ್‍ಗೊಳಗಾದ ಕಾರಣ ಸಚಿವರು ಟ್ವೀಟ್ ಡಿಲೀಟ್ ಮಾಡಿದ್ದರು. ಇದಾದನಂತರ ಕೇಂದ್ರ ಸರ್ಕಾರ ಹಸಿರು ದೀಪಾವಳಿ ಅಭಿಯಾನದ ಬಗ್ಗೆ ಸುಮ್ಮನಾಗಿರುವುದೇಕೆ? ಎಂಬುದರ ಬಗ್ಗೆ ಆಲ್ಟ್ ನ್ಯೂಸ್ ವರದಿ ಪ್ರಕಟಿಸಿದೆ.

ಸಚಿವರ ಟ್ವೀಟ್ ಹೀಗಿತ್ತು

ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್‌ಸಿಆರ್‌) ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಮಾರಾಟದ ಮೇಲೆ ಸುಪ್ರೀಂಕೋರ್ಟ್‌ ನಿಷೇಧಿಸಿರುವುದರಿಂದ ನಮ್ಮ ಹಸಿರು ದೀಪಾವಳಿ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ಸಿಕ್ಕಿದಂತಾಗಿದೆ ಎಂದು ಕೇಂದ್ರ ಪರಿಸರ ಸಚಿವ ಹರ್ಷವರ್ಧನ್ ಸುಪ್ರೀಂಕೋರ್ಟ್ ಆದೇಶವನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದರು. ಆಗಸ್ಟ್ ತಿಂಗಳಲ್ಲಿ ಹರಿತ್ ದೀವಾಳಿ, ಸ್ವಸ್ಥ್ ದೀವಾಳಿ (ಹಸಿರು ದೀಪಾವಳಿ, ಆರೋಗ್ಯಕರ ದೀಪಾವಳಿ) ಅಭಿಯಾನ ಆರಂಭವಾದಾಗ ಡಾ.ಹರ್ಷವರ್ಧನ್ ಅವರು,ಒಬ್ಬ ವೈದ್ಯ ವಿಶೇಷವಾಗಿ ಕಿವಿ, ಮೂಗು,ಗಂಟಲು ತಜ್ಞನಾಗಿ ಹೇಳುತ್ತಿದ್ದೇನೆ. ದೀಪಾವಳಿ ಆಚರಣೆಯ ವೇಳೆ ಕಣ್ಣು, ಕಿವಿಗೆ ಗಾಯ ಮಾಡಿಕೊಂಡು, ಸುಟ್ಟ ಗಾಯಗಳಿಂದ ನರಳುವ, ಅಸ್ತಮಾದಿಂದ ಬಳಲುವ ಜನರು ಆಸ್ಪತ್ರೆಗೆ ದಾಖಲಾಗುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಟ್ವೀಟಿಸಿದ್ದರು.

ನಿಮ್ಮ ಸಂಭ್ರಮಗಳು ಇನ್ನೊಬ್ಬರನ್ನು ಸಂಕಟಕ್ಕೆ ದೂಡಬಾರದು. ವಾಯು ಮಾಲಿನ್ಯದ ವಿರುದ್ಧ ಹೋರಾಡೋಣ ಎಂದು 2014ರಲ್ಲಿ ಟ್ವೀಟ್ ಮಾಡಿದ್ದರು. ಹೀಗೆ ಪರಿಸರ ಕಾಳಜಿಯ ಬಗ್ಗೆ ಇವರು ಸದಾ ದನಿಯೆತ್ತಿದವರು ಡಾ. ಹರ್ಷವರ್ಧನ್.

ಆದರೆ ಈ ಬಾರಿ ಸುಪ್ರೀಂಕೋರ್ಟ್ ಪಟಾಕಿ ಮಾರಾಟ ನಿಷೇಧ ಮಾಡಿದಾಗ ಸಂಭ್ರಮಿಸಿ ಹರ್ಷವರ್ಧನ್ ಅವರು ಮಾಡಿದ ಟ್ವೀಟ್ ಟ್ರೋಲ್‍ಗೊಳಗಾಗಿತ್ತು. ಇದರ ಪರಿಣಾಮ ಅವರು ಆ ಟ್ವೀಟ್‍ಗಳನ್ನೇ ಡಿಲೀಟ್ ಮಾಡಿದ್ದರು.

ಟ್ವೀಟ್ ಡಿಲೀಟ್ ಆದ ನಂತರ ಇದು ತಮ್ಮ ಸಾಧನೆ ಎಂಬಂತೆ ಬಲಪಂಥೀಯರು ಸಂಭ್ರಮಿಸಿದ್ದರು.

ಡಿಲೀಟ್ ಮಾಡಿದ್ದ ಟ್ಟೀಟ್‍ನಲ್ಲಿ ಏನಿತ್ತು?

ಏನಿದು ಹರಿತ್ ದೀವಾಳಿ ಅಭಿಯಾನ?

ಆಗಸ್ಟ್ ತಿಂಗಳಲ್ಲಿ ಪರಿಸರ ಖಾತೆ ಸಚಿವಾಲಯ ಹರಿತ್ ದೀವಾಳಿ, ಸ್ವಸ್ಥ್  ದೀವಾಳಿ ಅಭಿಯಾನ ಆರಂಭಿಸಿತ್ತು. ಹಸಿರು ಮತ್ತು ಆರೋಗ್ಯಕರ ದೀಪಾವಳಿ ಆಚರಣೆ ಮಾಡಲು ಹರ್ಷವರ್ಧನ್ ಅವರು ಕರೆ ನೀಡಿದ್ದರು. ಅಷ್ಟೇ ಅಲ್ಲದೆ ದೀಪಾವಳಿ ಹಬ್ಬದವರೆಗೆ ಶಾಲೆ ಕಾಲೇಜು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯಕರ ದೀಪಾವಳಿ ಆಚರಣೆಗೆ ಬದ್ಧವಾಗಿರುವ ಪ್ರತಿಜ್ಞೆಯನ್ನು ಅಸೆಂಬ್ಲಿಯಲ್ಲಿ ಹೇಳಬೇಕು ಎಂದು ಸುತ್ತೋಲೆ ಹೊರಡಿಸಿದ್ದರು.


ಹಸಿರು ದೀಪಾವಳಿಯ ಪ್ರಚಾರಕ್ಕಾಗಿ ಹಲವಾರು ಸ್ಪರ್ಧೆಗಳನ್ನೂ ಆಯೋಜಿಸಲು ತೀರ್ಮಾನಿಸಲಾಗಿತ್ತು. ಮಾಲಿನ್ಯಮುಕ್ತ ದೀಪಾವಳಿ ಎಂಬ ಸ್ಪರ್ಧಾ ವಿಷಯ ನೀಡಿ ಆನ್‍ಲೈನ್‍ನಲ್ಲಿ ಸ್ಪರ್ಧೆ ನಡೆಸುವ ಉದ್ದೇಶವೂ ಇತ್ತು. ಈ ಅಭಿಯಾನದ ಅಂಗವಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆಯ ಮಾಹಿತಿಯನ್ನು ಸಚಿವಾಲಯದ ವೆಬ್‍ಸೈಟ್‍ನಲ್ಲಿ ನೀಡಲಾಗಿತ್ತು. ಹರ್ಷವರ್ಧನ್ ಅವರು ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸುಪ್ರೀಂಕೋರ್ಟ್ ನಿರ್ಧಾರವನ್ನು ಪ್ರಶಂಸಿಸಿ ಮಾಡಿದ ಟ್ವೀಟ್ ಟ್ರೋಲ್‍ಗಳಿಂದಾಗಿ ಡಿಲೀಟ್ ಮಾಡಬೇಕಾಗಿ ಬಂತು. ಅಲ್ಲಿಗೆ ಹಸಿರು ದೀಪಾವಳಿ ಅಭಿಯಾನವೂ ಸುದ್ದಿಯಿಲ್ಲದೆ ಹಿಂದೆ ಸರಿಯಿತೇ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry