ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟ ಕುಸಿತ: ಮುಚ್ಚುತ್ತಿವೆ ಗಿರಣಿಗಳು

ಸರ್ಕಾರದ ಯೋಜನೆಗಳಿಗೆ ಹೊರರಾಜ್ಯಗಳಿಂದ ಅಕ್ಕಿ ಖರೀದಿಸುತ್ತಿರುವ ಪರಿಣಾಮ
Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಂಡ್ಯ: ಅನ್ನಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಮಾತೃಪೂರ್ಣ ಯೋಜನೆಗಳಿಗೆ ರಾಜ್ಯ ಸರ್ಕಾರ ಹೊರರಾಜ್ಯಗಳಿಂದ ಅಕ್ಕಿ ಖರೀದಿ ಮಾಡುತ್ತಿರುವ ಕಾರಣ ರಾಜ್ಯದಲ್ಲಿ ಅಕ್ಕಿ ಮಾರಾಟ ಕುಸಿತ ಕಂಡಿದ್ದು, ಗಿರಣಿಗಳು ಮುಚ್ಚುವ ಹಂತ ತಲುಪಿವೆ.

ಹಲವು ಯೋಜನೆಗಳಲ್ಲಿ ಕೇಂದ್ರ ಸರ್ಕಾರದ ಸಹಭಾಗಿತ್ವ ಇದ್ದು, ತನ್ನ ಪಾಲಿನ ಅಕ್ಕಿಯನ್ನು ಕೇಂದ್ರ ಸರ್ಕಾರವೇ ರಾಜ್ಯಕ್ಕೆ ಕಳುಹಿಸುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಕುಟುಂಬದ ಪ್ರತಿ ಸದಸ್ಯನಿಗೆ ಏಳು ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ.

ಕುಟುಂಬದಲ್ಲಿ ನಾಲ್ಕು ಸದಸ್ಯರಿದ್ದರೆ ತಿಂಗಳಿಗೆ 28 ಕೆ.ಜಿ ಸಂಗ್ರಹವಾಗುತ್ತದೆ. ಈ ಯೋಜನೆ ಜಾರಿಗೊಳಿಸಿದ ನಂತರ ದಪ್ಪ ಗಾತ್ರದ ಜಯ, 1,001, ಐ.ಆರ್‌–64, ಬಿ.ಆರ್‌ ಮುಂತಾದ ತಳಿಯ ಮಾರಾಟ ಕುಗ್ಗಿದ್ದು ಗಿರಣಿಯ ಗೋದಾಮುಗಳಲ್ಲಿ ಅಕ್ಕಿ ಮಾರಾಟವಾಗದೇ ಉಳಿದಿದೆ. ರಾಜ್ಯದಲ್ಲಿ ದಪ್ಪ ಗಾತ್ರದ ಭತ್ತವನ್ನೇ ಹೆಚ್ಚಾಗಿ ಬೆಳೆಯುತ್ತಿರುವ ಕಾರಣ ಬೆಲೆ ಕುಸಿದು ರೈತರಿಗೂ ನಷ್ಟವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಸ್ಥಳೀಯ ಅಕ್ಕಿಯನ್ನೇ ಖರೀದಿ ಮಾಡಬೇಕು ಎಂದು ಗಿರಣಿ ಮಾಲೀಕರು ಆಗ್ರಹಿಸುತ್ತಾರೆ.

‘ಅನ್ನಭಾಗ್ಯ ಯೋಜನೆಯು ಅಕ್ಕಿ ಗಿರಣಿಗಳ ವಹಿವಾಟು ಕಿತ್ತುಕೊಂಡಿದೆ. ಬಡವರಿಗೆ ಸರ್ಕಾರವೇ ಅಕ್ಕಿ ಕೊಡುತ್ತದೆ. ಶ್ರೀಮಂತರು ಮಾಲ್‌ ಗಳು, ಸೂಪರ್‌ ಮಾರ್ಕೆಟ್‌ ಗಳಲ್ಲಿ ಬ್ರ್ಯಾಂಡೆಡ್‌ ಅಕ್ಕಿ ಕೊಳ್ಳುತ್ತಾರೆ. ಅದಕ್ಕೆ ಅವರು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಟ್ಟುತ್ತಾರೆ.

‘ಮಧ್ಯಮ ವರ್ಗದ ಜನರನ್ನು ನಂಬಿ ನಾವು ಅಕ್ಕಿ ಗಿರಣಿ ನಡೆಸುವುದು ಕಷ್ಟವಾಗಿದೆ. ಯೋಜನೆಗಳ ಜಾರಿಗಾಗಿ ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸುವ ಬದಲು ಸ್ಥಳೀಯ ಗಿರಣಿಗಳಿಂದ ಕೊಂಡರೆ ನಾವೇ ಉತ್ತಮ ಗುಣಮಟ್ಟದ ಅಕ್ಕಿ ಪೂರೈಸುತ್ತೇವೆ’ ಎಂದು ನಗರದ ಬಸವೇಶ್ವರ ಆಗ್ರೊ ರೈಸ್‌ ಇಂಡಸ್ಟ್ರೀಸ್‌ ಮಾಲೀಕ ಎಸ್‌.ಸಿ.ಬಸವರಾಜ್‌ ಹೇಳುತ್ತಾರೆ.

ಸರ್ಕಾರಕ್ಕೆ ಹೊರೆ: ‘ರಾಜ್ಯ ಸರ್ಕಾರವು ಹೊರ ರಾಜ್ಯಗಳಿಂದ ಪ್ರತಿ ಕೆ.ಜಿ ಅಕ್ಕಿಗೆ ₹ 27.29 ಪಾವತಿಸಿ ಖರೀದಿ ಮಾಡುತ್ತಿದೆ. ಇದರ ಜತೆಗೆ ಸಾಗಣೆ ವೆಚ್ಚ, ಗೋದಾಮು ವೆಚ್ಚ ಸೇರಿಸಿದರೆ ಪ್ರತಿ ಕೆ.ಜಿ ಅಕ್ಕಿಯ ಬೆಲೆ ₹ 30ಕ್ಕೂ ಹೆಚ್ಚಾಗುತ್ತದೆ. ಇದರಿಂದ ಸರ್ಕಾರಕ್ಕೆ ಹೆಚ್ಚು ಹೊರೆಯಾಗುತ್ತಿದೆ. ಸ್ಥಳೀಯ ಅಕ್ಕಿ ಗಿರಣಿ ಮಾಲೀಕರು ಹೊರರಾಜ್ಯದ ಬೆಲೆಗಿಂತಲೂ ಕಡಿಮೆ ಬೆಲೆಗೆ ನೀಡಲು ಮುಂದೆ ಬಂದಿದ್ದಾರೆ. ಜತೆಗೆ ಆಯಾ ಜಿಲ್ಲೆಗಳ ಅವಶ್ಯಕತೆಗೆ ಅನುಗುಣವಾಗಿ ಜಿಲ್ಲೆಯ ವ್ಯಾಪ್ತಿಯ ವರ್ತಕರು ಪೂರೈಸಲು ಸಿದ್ಧರಿದ್ದಾರೆ’ ಎಂದೂ ಅವರೂ ಹೇಳುತ್ತಾರೆ.

‘ಹೊರರಾಜ್ಯದಿಂದ ರೈಲ್ವೆ ವ್ಯಾಗನ್‌ನಲ್ಲಿ ಸಾಗಣೆ ಮಾಡುವಾಗ ಅಪಾರ ಪ್ರಮಾಣದ ಅಕ್ಕಿ ವ್ಯರ್ಥವಾಗುತ್ತಿದೆ. ಹೆಚ್ಚು ದಿನಗಳ ಕಾಲ ಗೋದಾಮಿನಲ್ಲಿ ಸಂಗ್ರಹಿಸಿ ಇಡುವ ಕಾರಣ ಗುಣಮಟ್ಟವೂ ಹಾಳಾಗುತ್ತಿದೆ. ಪ್ರತಿ ಕೆ.ಜಿಗೆ ₹ 25ಕ್ಕೆ ನೀಡಲು ನಾವು ಸಿದ್ಧರಿದ್ದೇವೆ. ಸಾಗಣೆ ವೆಚ್ಚ, ಗೋದಾಮು ವೆಚ್ಚವನ್ನು ನಾವೇ ಭರಿಸುತ್ತೇವೆ. ಇದರಿಂದ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಉಳಿತಾಯವಾಗುತ್ತದೆ. ಇದರಿಂದ ಅಕ್ಕಿ ಗಿರಣಿಗಳು ಉಳಿಯುತ್ತವೆ. ಕಾರ್ಮಿಕರೂ ಬದುಕುತ್ತಾರೆ’ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ವೈ.ಕೆ.ಕುಮಾರ್‌ ಹೇಳುತ್ತಾರೆ.

ಸಚಿವ ಖಾದರ್‌ಗೆ ಮನವಿ ಸಲ್ಲಿಕೆ
ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಅಕ್ಕಿ ಗಿರಣಿಗಳ ಸಂಘದ ಪದಾಧಿಕಾರಿಗಳು ಈಚೆಗೆ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಡಾ.ಯು.ಟಿ.ಖಾದರ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಅಕ್ಕಿ ಗಿರಣಿಗಳ ಮಾಲೀಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ.

ಸರ್ಕಾರದ ಯೋಜನೆಗಳಿಗೆ ಅವಶ್ಯವಿರುವ ಅಕ್ಕಿಯನ್ನು ಸ್ಥಳೀಯ ಅಕ್ಕಿ ಗಿರಣಿಗಳಿಂದಲೇ ಖರೀದಿ ಮಾಡಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

‘ರಾಜ್ಯದ ಗಿರಣಿಗಳಿಂದ ಎಷ್ಟು ಪ್ರಮಾಣದ ಅಕ್ಕಿ ಸಿಗಬಹುದು ಎಂದು ಅಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಖಾದರ್‌ ತಿಳಿಸಿದ್ದಾರೆ’ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ವಸಂತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT