ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಟ್ಟೆಕಿಚ್ಚು ಪಡುವವರು ಸುಟ್ಟು ಹೋಗುತ್ತಾರೆ– ಸಿದ್ದರಾಮಯ್ಯ

ವಿರೋಧಿಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೆ.ಆರ್.ನಗರ (ಮೈಸೂರು): ‘ಹೊಟ್ಟೆ ಕಿಚ್ಚು ಪಡುವವರು ಮೊದಲು ಸುಟ್ಟು ಹೋಗುತ್ತಾರೆ. ಅದರಿಂದ ನನಗೇನೂ ಆಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರೋಧಿಗಳಿಗೆ ತಿರುಗೇಟು ನೀಡಿದರು.

ಇಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.‘ಕೆಲವರಿಗೆ ಟೀಕಿಸುವುದೇ ಕಸುಬಾಗಿದೆ. ಟೀಕೆ ಮಾಡಲೆಂದೇ ಅವರು ಹುಟ್ಟಿದ್ದಾರೆ. ಹೆಚ್ಚು ಹೆಚ್ಚು ಟೀಕಿಸುವುದರಿಂದ ನನಗೆ ಒಳ್ಳೆಯದೇ ಆಗುತ್ತದೆ’ ಎಂದು ಅವರು ಹೇಳಿದರು.

ರಾಜಕೀಯದಲ್ಲಿ ಹೆದರಿಕೊಂಡಿದ್ದು ಗೊತ್ತಿಲ್ಲ. ರಾಜಕೀಯ ಎನ್ನುವುದು ಯಾರಪ್ಪನ ಆಸ್ತಿಯೂ ಅಲ್ಲ. ಜನರ ಆಶೀರ್ವಾದ ಇರುವವರೆಗೂ ಸೋಲೆಂಬುದು ಇಲ್ಲ ಎಂದು ತಿಳಿಸಿದರು.

ದುಡ್ಡಿನ ಚೀಲ ತಂದ ನಾಯಕರು!
‘ಸಿದ್ದರಾಮಯ್ಯನನ್ನು ಸೋಲಿಸುವುದಕ್ಕೆ ಎಲ್ಲ ಶಕ್ತಿಗಳು ಒಂದಾಗುತ್ತಿವೆಯಂತೆ. 2006ರಲ್ಲಿ ಏನಾಗಿತ್ತು? ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ದುಡ್ಡಿನ ಚೀಲವನ್ನೇ ತಂದು ಕೂತರು. ಆಗ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ’ ಎಂದು ಚಾಟಿ ಬೀಸಿದರು.

‘ದುಷ್ಟಶಕ್ತಿಗಳೆಲ್ಲ ಒಂದುಗೂಡಿದರೆ ನನಗೇನೂ ಭಯವಿಲ್ಲ. ನನಗೆ ಜನರ ಮೇಲೆ ನಂಬಿಕೆ ಇದೆ. ಗೆಲುವಿಗೂ, ಸೋಲಿಗೂ ಅವರೇ ಕಾರಣ. ಯಾರೊ ಒಂದಿಬ್ಬರು ಕೂಡಿಕೊಂಡು ಸೋಲಿಸುವುದಕ್ಕೆ ಆಗುತ್ತದಾ’ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಈಗ ದಲಿತರ ಮನೆಯಲ್ಲಿ ತಿಂಡಿ ತಿನ್ನುತ್ತಾರೆ. ತಿನ್ನಲಿ ಬೇಡ ಎನ್ನುವುದಿಲ್ಲ. ಆದರೆ, ಅವರು ಅಲ್ಲೂ ಹೋಟೆಲ್ ನಿಂದ ತಿಂಡಿ ತರಿಸಿಕೊಂಡು ತಿನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ಗೆ ಕರೆ ಬಂದ ಕಥೆ:
‘ಕೆಲವರು ಸಿದ್ದರಾಮಯ್ಯನನ್ನು ನಾನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದೆ, ನಾನು ಕರೆದುಕೊಂಡು ಬಂದೆ ಎಂದು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ, ಇವರು ಯಾರೂ ನನ್ನನ್ನು ಕರೆದುಕೊಂಡು ಬಂದಿಲ್ಲ’ ಎಂದು ಅವರು ತಿಳಿಸಿದರು.

ಬೆಂಗಳೂರಿನ ಪೀರ್‌ ಲಾಲ್ ಎಂಬುವವರು ಮೊದಲು ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರೊಂದಿಗೆ ಭೇಟಿ ಮಾಡಿಸಿದರು. ನಂತರ, ಅವರು ಸೋನಿಯಾ ಗಾಂಧಿ ಅವರೊಂದಿಗೆ ಸಭೆ ಏರ್ಪಡಿಸಿದರು. ಆಗ ಅಧಿಕೃತ ಆಹ್ವಾನ ನೀಡಿದರು’ ಎಂದರು.

ಮಾತಿಗೆ ತಪ್ಪಿದ ಸೋನಿಯಾ:
‘ಸೋನಿಯಾ ಗಾಂಧಿ ಅವರು ನನ್ನೊಡನೆ ಬಂದ ಎಲ್ಲ ಶಾಸಕರಿಗೂ ಟಿಕೆಟ್ ನೀಡುವ ಮಾತು ನೀಡಿದ್ದರು. ಆದರೆ, ಮಂಚನಹಳ್ಳಿ ಮಹದೇವ್ ಅವರಿಗೆ ಟಿಕೆಟ್ ನೀಡಲಿಲ್ಲ. ಮುಂದೆ ಲೋಕಸಭೆಗೆ ನೀಡುವ ಭರವಸೆ ನೀಡಿದರು. ಆದರೆ, ಆಗಲೂ ನೀಡಲಿಲ್ಲ. ಇದಕ್ಕೆಲ್ಲ ಮಾಜಿ ಶಾಸಕ ಕಾರಣ’ ಎಂದು ಅಡಗೂರು ಎಚ್.ವಿಶ್ವನಾಥ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಕೆ.ಆರ್.ನಗರ ಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸೋತಿದ್ದ ದೊಡ್ಡಸ್ವಾಮಿಗೌಡ ಅವರ ಪುತ್ರ ರವಿಶಂಕರ್ ಅವರಿಗೆ ಟಿಕೆಟ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು. ಇದನ್ನು ಕೇಳಿ ವೇದಿಕೆ ಮೇಲಿದ್ದ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯ, ಸಿದ್ದರಾಮಯ್ಯ ಅವರ ಬಳಿಗೆ ಬರುತ್ತಿದ್ದಂತೆ ತಡೆದ ಅವರು, ಮುಂದೆ ಒಳ್ಳೆಯ ಅವಕಾಶ ನೀಡಲಾಗುವುದು ಎಂದು ಸಮಾಧಾನಪಡಿಸಿದರು.

ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಸಭಾಂಗಣದಲ್ಲಿ ತುಂಬಿದ್ದ ಹಲವು ಜನರು ಎದ್ದು ಹೊರಡತೊಡಗಿದರು. ‘ನನ್ನ ಮಾತು ಕೇಳಿ ಕುಳಿತುಕೊಳ್ಳಿ’ ಎಂದು ಸಿದ್ದರಾಮಯ್ಯ ಹೇಳಿದರೂ ಜನರು ಹೊರಡತೊಡಗಿದರು. ನಂತರ, ಕೆಲ ನಿಮಿಷಗಳಲ್ಲಿಯೇ ಸಿದ್ದರಾಮಯ್ಯ ತಮ್ಮ ಭಾಷಣ ಮುಗಿಸಿದರು.

***

ಪೂರ್ವದಲ್ಲಿ ಸೂರ್ಯ ಹುಟ್ಟುವಷ್ಟೇ ಸತ್ಯ:

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದೂ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿವರೆಗೆ ಒಟ್ಟು 12 ಬಜೆಟ್ ಮಂಡಿಸಿದ್ದೇನೆ. ಮುಂದಿನ ವರ್ಷ 13ನೇ ಬಜೆಟ್‌ ಅನ್ನೂ ಮಂಡಿಸುತ್ತೇನೆ. ನಂತರದ 5 ಬಜೆಟ್‌ ಗಳನ್ನೂ ನಾವೇ ಮಂಡಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT