ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬಾರಿಕೆ: ದೀಪದ ಕೆಳಗೆ ಕತ್ತಲು

Last Updated 16 ಅಕ್ಟೋಬರ್ 2017, 7:00 IST
ಅಕ್ಷರ ಗಾತ್ರ

ಹಾವೇರಿ: ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮನೆ ಮನೆಗಳಲ್ಲಿ ಹಣತೆಯ ಬೆಳಕು. ಹಬ್ಬದ ಸಂಭ್ರಮಕ್ಕೆ ಜಗವೆಲ್ಲ ಬೆಳಗುವ ಹಣತೆಯನ್ನು ತಯಾರಿಸುವ ಕುಂಬಾರರ ಬದುಕು ಮಾತ್ರ ಕತ್ತಲಲ್ಲಿದೆ. ಇದು, ನಗರದ ಪುರಸಿದ್ದೇಶ್ವರ ಗುಡಿ ಸಮೀಪದ ಗುತ್ತಲ ರಸ್ತೆ ಬದಿಯ ‘ಕುಂಬಾರ ಹೊಂಡ’ದ (ಬಡಾವಣೆ) ದುಸ್ಥಿತಿ.

ಮಡಕೆ, ಹಣತೆಗಳಿಗಾಗಿ ಕುಂಬಾರರು ಮಣ್ಣು ತೆಗೆಯುತ್ತಿದ್ದ ಈ ಓಣಿಗೆ ‘ಕುಂಬಾರ ಹೊಂಡ’ ಎಂದೇ ರೂಢನಾಮ. ಆಸುಪಾಸಿನಲ್ಲಿಯೇ ಸುಮಾರು 30 ಮನೆಗಳಲ್ಲಿ 150ಕ್ಕೂ ಹೆಚ್ಚು ಕುಂಬಾರರ ಕುಟುಂಬಗಳು ವಾಸವಾಗಿವೆ. ನಗರ ಸಭೆಯ ಸತತ ನಿರ್ಲಕ್ಷ್ಯದಿಂದಾಗಿ ಅವರ ಬದುಕು ಮಾತ್ರ ‘ಹೊಂಡ’ಕ್ಕೆ ಬಿದ್ದಂತಾಗಿದೆ.

ಇದು ‘ಹೊಂಡ’ (ಕುಂಬಾರಿಕೆ ಮಣ್ಣು ತೆಗೆಯುವ ಪ್ರದೇಶ) ಪ್ರದೇಶವಾಗಿದ್ದು, ರಸ್ತೆಯಿಂದ ತಗ್ಗಿನಲ್ಲಿದೆ. ಸಮೀಪದಲ್ಲಿಯೇ ನಗರದ ಯಾಲಕ್ಕಿ ಓಣಿ, ಮಾರುಕಟ್ಟೆ ಮತ್ತಿತರ ಪ್ರದೇಶದ ಕೊಳಚೆ ನೀರು ಹಾದು ಹೋಗುವ ಕಾಲುವೆ ಇದೆ. ನಗರದಲ್ಲಿ ಧಾರಾಕಾರ ಮಳೆಯಾದರೆ ಕಾಲುವೆಯ ಕೊಳಚೆ ನೀರೆಲ್ಲ ಕುಂಬಾರರ ಮನೆಗಳಿಗೆ ನುಗ್ಗಿ ಬರುತ್ತವೆ.
ಇಲ್ಲಿರುವ ಗುಡಿಯ ಬಳಿ ಕಾಲುವೆ ತೂಬಿನಲ್ಲಿ ಸಮರ್ಪಕವಾಗಿ ನೀರು ಹರಿದು ಹೋಗುತ್ತಿಲ್ಲ. ಕೊಳಚೆ ನೀರು ಹೊಂಡವನ್ನು ಸೇರಿ, ಬಳಿಕ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತವೆ. ಈ ಕೊಳಚೆ ನೀರಿನ ಜೊತೆ ನಗರದ ತ್ಯಾಜ್ಯವೆಲ್ಲ ಸೇರುತ್ತಿವೆ.

‘ಇಲ್ಲಿರುವ ಹೊಂಡದಲ್ಲಿ ಕೊಳಚೆ ನೀರು ನಿಲ್ಲುತ್ತದೆ. ಮಳೆಗೆ ಹಾವು, ಚೇಳು, ವಿಷಜಂತುಗಳೆಲ್ಲ ಮನೆಯೊಳಗೆ ಬರುತ್ತವೆ. ಅವುಗಳಿಂದ ರಕ್ಷಣೆ ಪಡೆಯುವುದೇ ಕಷ್ಟದ ಕಾರ್ಯವಾಗಿದೆ’ ಎನ್ನುತ್ತಾರೆ ಇಲ್ಲಿನ ಹನುಮಂತಪ್ಪ ಕುಂಬಾರ ಹಾಗೂ ತಿಮ್ಮಣ್ಣ ಕುಂಬಾರ. ‘ಹೊಂಡದ ಬದಿಯಲ್ಲಿ ರಸ್ತೆಗೆ ಮೀಸಲಾದ ಜಾಗವಿದೆ. ಆದರೆ, ರಸ್ತೆ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಈ ಪ್ರದೇಶವೇ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ’ ಎಂದು ಸುರೇಶ ಕುಂಬಾರ ದೂರಿದರು.

ಬೇಸಿಗೆಯಲ್ಲಿ ಬರ:
‘ಮಳೆಯಲ್ಲಿ ಕೊಳಚೆ ನೀರಿನ ಹಾವಳಿಯಾದರೆ, ಬೇಸಿಗೆಯಲ್ಲಿ ನಳದಲ್ಲಿ ನೀರಿಲ್ಲ. ಪಕ್ಕದ ಕೊಳವೆಬಾವಿಗೆ ಹೋಗಬೇಕು. ಆ ನೀರು ಸವಳು ಬರುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ. ನೀರಿಗಾಗಿ ಸರದಿ ಕಾಯಬೇಕು’ ಎನ್ನುತ್ತಾರೆ ಹನುಮಂತಪ್ಪ ಕುಂಬಾರ.

ಬೇಡಿಕೆ ಕುಸಿತ
ಫ್ರಿಡ್ಜ್, ಸ್ಟೀಲ್‌, ಪ್ಲಾಸ್ಟಿಕ್ ಬಿಂದಿಗೆ ಅಬ್ಬರದ ನಡುವೆ ‘ಪರಿಸರ ಸ್ನೇಹಿ ಮಡಕೆ’ಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ, ಬೇಸಿಗೆಯಲ್ಲಿ ನೀರಿನ ಕೊರತೆಯೂ ಇದೆ. ಇನ್ನೊಂದೆಡೆ ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ಹಣತೆ ತಯಾರು ಮಾಡಿ, ಮಾರಾಟ ಮಾಡುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಪಿಂಗಾಣಿ, ಲೋಹಗಳ ಹಣತೆ, ಮೇಣದ ದೀಪ, ಎಲೆಕ್ಟ್ರಿಕಲ್‌, ಎಲ್‌ಇಡಿ ದೀಪಗಳು ಬಂದಿವೆ. ಇದರಿಂದ ಹಣತೆಯ ಬೇಡಿಕೆ ಕಡಿಮೆಯಾಗಿದೆ. ‘ಒಂದು ಡಜನ್‌ ಹಣತೆಗೆ ಸುಮಾರು ₨20 ರಿಂದ ₨30 ಸಿಗುವುದೂ ಕಷ್ಟವಾಗಿದೆ’ ಎನ್ನುತ್ತಾರೆ ಚನ್ನವ್ವ ಮತ್ತಿತರರು.

ಹಣತೆ ತಯಾರಿಸಲು ಮಣ್ಣು ಹದ ಮಾಡಬೇಕು, ಬೆಂಕಿಯಲ್ಲಿ ಕಾಯಿಸಬೇಕು. ಆದರೆ, ಈ ಶ್ರಮಕ್ಕೆ ತಕ್ಕ ಹಣ ಸಿಗುತ್ತಿಲ್ಲ. ಇದರಿಂದ ಯುವಜನತೆ ಕುಂಬಾರಿಕೆಯಿಂದ ದೂರ ಸರಿಯುತ್ತಿದ್ದಾರೆ. ಕೂಲಿ ಕೆಲಸಕ್ಕೆ ತೆರಳುತ್ತಿದ್ದಾರೆ. ಇನ್ನೊಂದೆಡೆ ಮಡಕೆ, ಹಣತೆ ಕಾಯಿಸುವ ಬೆಂಕಿಗೆ ಕಟ್ಟಿಗೆಯ ಕೊರತೆ ಇದೆ. ಅದಕ್ಕಾಗಿ ವ್ಯರ್ಥ ಬಟ್ಟೆಯನ್ನು ಬಳಸುತ್ತಿದ್ದಾರೆ. ಇದರ ಹೊಗೆ ಹಾಗೂ ಬೂದಿಯಿಂದ ಉಸಿರಾಟ ಸಂಬಂಧಿ ಸಮಸ್ಯೆಗಳು ಬರುತ್ತಿವೆ.

‘ನಮ್ಮ ಬಡಾವಣೆಗೆ ಸಿ.ಸಿ. ರಸ್ತೆ, ಕುಡಿಯುವ ನೀರಿನ ನಳ, ಆಶ್ರಯ ಮತ್ತಿತರ ಯೋಜನೆಗಳಲ್ಲಿ ವಸತಿ ವ್ಯವಸ್ಥೆಯನ್ನು ಕಲ್‍ಪಿಸಬೇಕು. ವಿವಿಧ ಇಲಾಖೆಗಳ ಯೋಜನೆಗಳ ಮೂಲಕ ಆಶ್ರಯ ನೀಡಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT