ಬುಧವಾರ, ಸೆಪ್ಟೆಂಬರ್ 18, 2019
21 °C

ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅನುಮೋದನೆ

Published:
Updated:

ಗೋಣಿಕೊಪ್ಪಲು: ಕೊಡಗಿನ ಮೂಲಕ ಮಂಗಳೂರು, ಕೇರಳಕ್ಕೆ ತಲುಪಲು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಇಲ್ಲಿನ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಬಿಜೆಪಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು ತಾವು ಸಂಸದರಾದ ಮೇಲೆ ಕೊಡಗಿನ ಅಭಿವೃದ್ಧಿಗೆ ಗಮನಹರಿಸಿದ್ದರ ಫಲವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಆದೇಶ ನೀಡಿದ್ದಾರೆ.

ಜತೆಗೆ ಮೈಸೂರಿನಿಂದ ಕುಶಾಲನಗರದವರೆಗೂ ರೈಲು ಮಾರ್ಗ ನಿರ್ಮಾಣ ಆರಂಭಗೊಳ್ಳಲಿದೆ. ಆದರೆ ಇದಕ್ಕೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ ಎಂದು ದೂರಿದರು.

ಬಡವರ ಆರೋಗ್ಯ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ದೇಶದೆಲ್ಲೆಡೆ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರಗಳನ್ನು ತೆರೆಯಲಿದೆ. ಗೋಣಿಕೊಪ್ಪಲು ಮತ್ತು ಸಿದ್ದಾಪುರದಲ್ಲಿಯೂ ಈ ಕೇಂದ್ರಗಳನ್ನು ತೆರೆಯಲಾಗುವುದು. ಇದರಿಂದ ಬಡಜನತೆಗೆ ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭಿಸಲಿವೆ ಎಂದು ಹೇಳಿದರು.

ನೋಟು ಕೊಟ್ಟು ಖರೀದಿ ಮಾಡಿ, 5 ವರ್ಷ ರಾಜ್ಯವನ್ನು ಲೂಟಿಮಾಡುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮತ ನೀಡಬಾರದು. ಜಿಲ್ಲೆಯಲ್ಲಿ ಈಗಾಗಲೆ ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್‌ವರೆಗೂ ಬಿಜೆಪಿ ಪ್ರತಿನಿಧಿಗಳೇ ಇದ್ದಾರೆ. ಜನತೆ ಕಾಗೆ ಓಡಿಸುವಂತೆ ಕೊಡಗಿನಿಂದ ಕಾಂಗ್ರೆಸ್ ಪಕ್ಷವನ್ನು ಓಡಿಸಿದ್ದಾರೆ. ಮುಂದೆಯೂ ಇದೇ ಕೆಲಸವಾಗಬೇಕು ಎಂದು ಪ್ರಚೋದನೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಅತ್ಯಾಚಾರ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕೆ.ಸಿ.ವೇಣುಗೋಪಾಲ್ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಮನೆಮನೆಗೆ ಬರುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಂದೆ ತಾಯಂದಿರು ತಮ್ಮ ಹೆಣ್ಣು ಮಕ್ಕಳನ್ನು ಎಚ್ಚರಿಕೆಯಿಂದ ರಕ್ಷಿಸಿಕೊಳ್ಳಬೇಕು ಎಂದು ತೀಕ್ಷ್ಣವಾಗಿ ನುಡಿದರು.

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಟಿಗಟ್ಟಲೇ ಸಾಲಮಾಡುವ ಮೂಲಕ ರಾಜ್ಯವನ್ನು ಸಾಲದಲ್ಲಿ ಮುಳುಗಿಸಿದ್ದಾರೆ ಎಂದು ದೂರಿದರು. ಇವರ ಆಳ್ವಿಕೆಯಲ್ಲಿ 33 ಮಂದಿ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇವರ ಸಾಧನೆ ಎಂದು ಟೀಕಿಸಿದರು.

ಸ್ಥಾನೀಯ ಸಮಿತಿ ಅಧ್ಯಕ್ಷ ದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಅರುಣ್ ಭೀಮಯ್ಯ, ಮುಖಂಡರಾದ ಗಿರೀಶ್ ಗಣಪತಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ, ಮಾಜಿ ಸದಸ್ಯೆ ಕಾಂತಿ ಸತೀಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಯ ಪೂವಯ್ಯ ಹಾಜರಿದ್ದರು.

Post Comments (+)