ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಡರ್‌ ಪಾಸ್‌: ವಾಹನ ಸವಾರರಿಗೆ ಕೊಳಚೆ ಅಭಿಷೇಕ!

Last Updated 16 ಅಕ್ಟೋಬರ್ 2017, 8:43 IST
ಅಕ್ಷರ ಗಾತ್ರ

ಮಂಡ್ಯ: ಹೊಳಲು ಸರ್ಕಲ್‌ ಹಾಗೂ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಡುವಿನ ರೈಲ್ವೆ ಅಂಡರ್‌ ಪಾಸ್‌ನಲ್ಲಿ ಕೊಳಚೆ ನೀರಿನ ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಸುತ್ತಲಿನ ಕೊಳಕು ಸೇತುವೆ ಕೆಳಗೆ ಬಂದು ನಿಂತಿದ್ದು ದುರ್ವಾಸನೆಯಿಂದಾಗಿ ಜನರು ಮೂಗುಮುಚ್ಚಿ ಓಡಾಡುತ್ತಿದ್ದಾರೆ.

ರೈಲ್ವೆ ಇಲಾಖೆ ಜೊತೆಗಿನ ಸಮನ್ವಯತೆ ಕೊರತೆ, ಅವೈಜ್ಞಾನಿಕ ಕಾಮಗಾರಿ, ಸ್ವಚ್ಛತೆ ನಿರ್ವಹಣೆಯಲ್ಲಿ ವೈಫಲ್ಯ ಮುಂತಾದ ಕಾರಣಗಳಿಂದಾಗಿ ಜನರು ದಶಕದಿಂದ ಸಮಸ್ಯೆಯ ಜೊತೆ ನಡೆಯುವಂತಾಗಿದೆ. ಈಗ ನಿತ್ಯವೂ ಮಳೆ ಸುರಿಯುತ್ತಿದ್ದು ನಾಲ್ಕು ಕಡೆಯಿಂದ ಹರಿದು ಬರುವ ನೀರು ರಸ್ತೆಯಲ್ಲಿ ಸಂಗ್ರಹವಾಗಿದೆ.

ತಗ್ಗು, ಗುಂಡಿಗಳಲ್ಲಿ ನೀರು ನಿಂತು ಕೆರೆಯಂತಾಗಿದೆ. ಎರಡೂ ಕಡೆಯಿಂದ ಇಳಿಜಾರಿನಲ್ಲಿ ವೇಗವಾಗಿ ಬರುವ ವಾಹನಗಳಿಂದಾಗಿ ಕೊಳಚೆ ನೀರು ಪಾದಚಾರಿಗಳ ಮೇಲೆ, ಇತರ ವಾಹನಗಳ ಮೇಲೆ ಹಾರುತ್ತಿದೆ.

‘ರೈಲ್ವೆ ಇಲಾಖೆಯ ಅನುಮತಿ ಪಡೆದು ಸೇತುವೆಯ ಕೆಳಗೆ ಕೊಳಚೆ ನೀರು ಹರಿದು ಬಾರದಂತೆ ಪೈಪ್‌ಲೈನ್‌ ಅಳವಡಿಸಬಹುದು. ಆದರೆ ನಗರಸಭೆ, ಜಿಲ್ಲಾಡಳಿತಕ್ಕೆ ಕಣ್ಣು ಕಾಣುತ್ತಿಲ್ಲ. ಸಮಸ್ಯೆ ಬಗ್ಗೆ ಹೇಳಿದರೆ ರೈಲ್ವೆ ಇಲಾಖೆ ಕಡೆಗೆ ಬೆರಳು ಮಾಡಿ ತೋರುತ್ತಾರೆ. ಮಳೆಗಾಲ ಬಂದರೆ ವ್ಯಾಪಾರ ನಡೆಸುವವರು ದುರ್ವಾಸನೆ ಅನುಭವಿಸಿ ಕೆಲಸ ಮಾಡಬೇಕು. ಇನ್ನು ಎಷ್ಟು ದಿನ ಈ ಸಮಸ್ಯೆ ಅನುಭವಿಸಬೇಕೋ ಗೊತ್ತಿಲ್ಲ’ ಎಂದು ಅಂಗಡಿ ಮಾಲೀಕ ಆರ್‌.ಶಂಕರ್‌ ಹೇಳಿದರು.

ಸೇತುವೆಯ ಪಕ್ಕದಲ್ಲಿರುವ ಅಂಗಡಿಗಳು, ಹೋಟೆಲ್‌ಗಳು, ರಸ್ತೆ ಬದಿ ವ್ಯಾಪಾರಸ್ಥರು ತ್ಯಾಜ್ಯ ನೀರನ್ನು ಅಂಡರ್‌ ಪಾಸ್‌ಗೆ ಬಿಡುತ್ತಿದ್ದು, ಅಲ್ಲಿಯ ಪರಿಸರ ಕೊಳಕಾಗಿದೆ. ಈ ಬಗ್ಗೆ ನಗರಸಭೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕೆಲ ಅಂಗಡಿ ಮಾಲೀಕರು ಆರೋಪಿಸುತ್ತಾರೆ.

ಪೇಟೆ ಬೀದಿ, ತರಕಾರಿ ಮಾರುಕಟ್ಟೆ, ಜೈನರ ಬೀದಿಗಳಿಗೆ ತೆರಳಲು ಇದೇ ಅಂಡರ್‌ಪಾಸ್‌ನಲ್ಲೇ ತೆರಳಬೇಕು. ಅಲ್ಲದೆ ಮೇಲುಕೋಟೆ, ನಾಗಮಂಗಲ, ಬಸರಾಳು ಮುಂತಾದ ಸ್ಥಳಗಳಿಗೆ ಹೋಗುವ ವಾಹನಗಳು ಇದೇ ಮಾರ್ಗದಲ್ಲಿ ತೆರಳುತ್ತವೆ.

ಇದು ನಗರದಲ್ಲಿ ಅತ್ಯಂತ ಪ್ರಮುಖ ಮಾರ್ಗವಾಗಿದೆ. ಮೊದಲು ಸಮತಟ್ಟಾಗಿದ್ದ ರಸ್ತೆ ಈ ಭಾಗದ ಪ್ರಮುಖ ವಾಣಿಜ್ಯ ಮಾರ್ಗವಾಗಿತ್ತು. ಅಂಡರ್‌ಪಾಸ್‌ ನಿರ್ಮಾಣವಾದ ನಂತರ ಜಿಲ್ಲಾ ಸಹಕಾರಿ ಬ್ಯಾಂಕ್‌ ಹಾಗೂ ತರಕಾರಿ ಮಾರುಕಟ್ಟೆ ಒಂದು ಭಾಗವಾದರೆ, ಸಿಹಿನೀರಿನಕೊಳ ಬಡಾವಣೆಯ ಪ್ರದೇಶ ಇನ್ನೊಂದು ಭಾಗವಾಗಿ ರೂಪುಗೊಂಡವು. ಡಿಸಿಸಿ ಬ್ಯಾಂಕ್‌ ಭಾಗದಲ್ಲಿ ಹೆಚ್ಚು ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ. ಆದರೆ ಸಿಹಿನೀರಿನ ಕೊಳದ ಭಾಗದ ಮಳಿಗೆಗಳಲ್ಲಿ ವಹಿವಾಟು ಕುಗ್ಗಿದೆ.

ಇಲ್ಲಿ ರೈಲ್ವೆ ಬ್ರಿಜ್‌ ಸೇರಿ ಒಟ್ಟು ನಾಲ್ಕು ಸೇತುವೆಗಳಿವೆ. ರೈಲು ಬ್ರಿಜ್‌ ಪಕ್ಕದಲ್ಲೇ ವಾಹನಗಳ ಓಡಾಟಕ್ಕೆ ಸಮಾನಾಂತರವಾಗಿ ಇನ್ನೊಂದು ಸೇತುವೆ ನಿರ್ಮಾಣ ಮಾಡಲಾಗಿದೆ. ಅಂಡರ್‌ಪಾಸ್‌ನ ಎರಡೂ ಭಾಗವನ್ನು ಸಂಪರ್ಕಿಸಲು ಎರಡು ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಮೇಲ್ಸೇತುವೆಗಳ ಬಳಿ ತ್ಯಾಜ್ಯ ಚೆಲ್ಲಾಡುತ್ತಿರುವ ಕಾರಣ ಜನರು ಅವುಗಳನ್ನು ಸರಿಯಾಗಿ ಬಳಸುತ್ತಿಲ್ಲ. ಅಲ್ಲದೆ ಜನರು ಅಲ್ಲೇ ಶೌಚ ಮಾಡುತ್ತಿದ್ದು ದುರ್ವಾಸನೆ ಮೂಗಿಗೆ ರಾಚುತ್ತದೆ.

‘ಸೇತುವೆ ಬಳಿ ಜನರು ಶೌಚ ಮಾಡುತ್ತಾರೆ. ರಾತ್ರಿಯ ವೇಳೆ ಇಲ್ಲಿ ಒಬ್ಬಬ್ಬರೇ ಓಡಾಡುವುದೂ ಕಷ್ಟ. ಸೇತುವೆ ಮರೆ ಇರುವ ಕಾರಣ ಇಲ್ಲಿ ಕಳ್ಳರ ಭಯವಿದೆ. ಅಂಗಡಿಗಳಲ್ಲಿ ಸರಣಿ ಕಳ್ಳತನವಾಗಿದೆ. ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ವಾಚ್‌ ಅಂಗಡಿ ಮಾಲೀಕ ಸುರೇಶ್‌ ಹೇಳಿದರು.\

ನಗರಸಭೆಯಲ್ಲಿ ಚರ್ಚೆ: ‘ಅಂಡರ್‌ಪಾಸ್‌ ಬಳಿ ಉಂಟಾಗುತ್ತಿರುವ ಸಮಸ್ಯೆಯನ್ನು ಗಂಭೀರ ವಿಷಯವನ್ನಾಗಿ ಪರಿಗಣಿಸಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಆ ಸ್ಥಳದಲ್ಲಿ ರೈಲ್ವೆ ಇಲಾಖೆಯವರು ಒಂದು ಕಲ್ಲು ಎತ್ತಲೂ ಬಿಡುತ್ತಿಲ್ಲ. ನಗರದಲ್ಲಿರುವ ರೈಲ್ವೆ ಇಲಾಖೆ ಅಧಿಕಾರಿಗಳು ನಮ್ಮ ಮನವಿಗೆ ಕ್ಯಾರೆ ಎನ್ನುತ್ತಿಲ್ಲ. ವಿಭಾಗೀಯ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಸಮಸ್ಯೆ ಪರಿಹಾರಕ್ಕೆ ರೈಲ್ವೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಗರಸಭೆ ಸದಸ್ಯ ಅನಿಲ್‌ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT