ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಜರ್ಮನಿ

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌; ಮಿಂಚಿದ ಜಾನ್‌
Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜರ್ಮನಿಯ ಅಪೂರ್ವ ತಂತ್ರಗಾರಿಕೆ ಮತ್ತು ಸಾಮರ್ಥ್ಯಕ್ಕೆ ಕೊಲಂಬಿಯಾ ದಂಗಾಯಿತು. ಏಕಪಕ್ಷೀಯವಾದ ನಾಲ್ಕು ಗೋಲುಗಳಿಂದ ಗೆದ್ದ ಜರ್ಮನಿ ತಂಡ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಘಟ್ಟ ತಲುಪಿತು.

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಮೊದಲ ಪ್ರಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನಾಯಕ ಜಾನ್‌ ಫೀಟ್‌ ಆರ್ಪ್ ಗಳಿಸಿದ ಎರಡು ಗೋಲುಗಳು ಮತ್ತು ಯನ್ ಬಿಸೆಕ್‌ ಹಾಗೂ ಜಾನ್ ಯೆಬೋ ಗಳಿಸಿದ ಒಂದೊಂದು ಗೋಲುಗಳು ಜರ್ಮನಿಗೆ ಜಯ ತಂದುಕೊಟ್ಟವು.

1985ರ ಮೊದಲ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಜರ್ಮನಿಗೆ ನಂತರ ಟೂರ್ನಿಯಲ್ಲಿ ಮಹತ್ತರ ಸಾಧನೆ ಮಾಡಲು ಆಗಲಿಲ್ಲ. ಈ ಬಾರಿ ಆರಂಭದಿಂದಲೇ ಅಮೋಘ ಆಟವಾಡಿತ್ತು. ಗುಂಪು ಹಂತದ ಪಂದ್ಯಗಳಲ್ಲಿ ಒಂದು ಸೋಲು ಕಂಡಿದ್ದರೂ ಉಳಿದ ಪಂದ್ಯಗಳಲ್ಲಿ ಜಯದ ತೋರಣ ಕಟ್ಟಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಈ ತಂಡ ಬ್ರೆಜಿಲ್ ಮತ್ತು ಹೊಂಡುರಾಸ್ ನಡುವಿನ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಗೆದ್ದ ತಂಡವನ್ನು ಎದುರಿಸಲಿದೆ.

ಸೋಮವಾರ ಕೊಲಂಬಿಯಾದ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸಿದ ಜರ್ಮನಿ ನಿರಂತರ ಆಕ್ರಮಣ ನಡೆಸಿತು. ಗೋಲ್ ಕೀಪರ್ ಮತ್ತು ರಕ್ಷಣಾ ವಿಭಾಗದ ಆಟಗಾರರು ಎಸಗಿದ ತಪ್ಪಿಗೆ ಕೊಲಂಬಿಯಾ ಬೆಲೆ ತೆತ್ತಿತು. ಗುಂಪು ಹಂತದಲ್ಲಿ ಭಾರತ ವಿರುದ್ಧ ಎರಡು ಗೋಲುಗಳನ್ನು ಗಳಿಸಿದ್ದ ಜುವಾನ್ ಪನಲೋಜಾ ಮತ್ತು ಇನ್ನೊಬ್ಬ ಪ್ರಮುಖ ಆಟಗಾರ ಲಿಯಾಂಡ್ರೊ ಕ್ಯಾಂಪಾಜ್‌ ಮಿಂಚಲು ವಿಫಲವಾದದ್ದು ಕೊಲಂಬಿಯಾ ಸೋಲಿಗೆ ಪ್ರಮುಖ  ಕಾರಣವಾಯಿತು.

ಏಳನೇ ನಿಮಿಷದಲ್ಲಿ ನಾಯಕ ಗಳಿಸಿದ ಗೋಲಿನೊಂದಿಗೆ ಜರ್ಮನಿ ಆರಂಭದಲ್ಲೇ ಮೇಲುಗೈ ಸಾಧಿಸಿತು. ಯೆಬೋ ನೀಡಿದ ಮನಮೋಹಕ ಪಾಸ್‌ನಿಂದ ಆರ್ಪ್‌ ಗೋಲು ಗಳಿಸಿ ಸಂಭ್ರಮಿಸಿದರು. ಚೆಂಡನ್ನು ಡ್ರಿಬಲ್ ಮಾಡುತ್ತ ಮುನ್ನುಗ್ಗಿದ ಆರ್ಪ್‌ ಅವರು ಬಾರಿಸಿದ ಚೆಂಡು ಗೋಲ್‌ಕೀಪರ್‌ ಕೈಗೆ ತಾಗಿ ವಾಪಸಾಯಿತು. ಆದರೆ ಎರಡನೇ ಪ್ರಯತ್ನದಲ್ಲಿ ಜರ್ಮನಿ ನಾಯಕ ತಪ್ಪು ಮಾಡಲಿಲ್ಲ. 14ನೇ ನಿಮಿಷದಲ್ಲಿ ಕೊಲಂಬಿಯಾಗೆ ತಿರುಗೇಟು ನೀಡಲು ಅತ್ಯುತ್ತಮ ಅವಕಾಶವಿತ್ತು. ಆದರೆ ರಾಬರ್ಟ್‌ ಮೆಜಿಯಾ ಎಡಗಾಲಿನಿಂದ ಒದ್ದ ಚೆಂಡು ಗುರಿ ಸೇರಲಿಲ್ಲ. 34ನೇ ನಿಮಿಷದಲ್ಲಿ ಜರ್ಮನಿಗೂ ಅವಕಾಶ ಲಭಿಸಿತು. ಆದರೆ ಚೆಂಡು ಗೋಲು ಪೆಟ್ಟಿಗೆಯ ಕಂಬಕ್ಕೆ ಬಡಿದು ಹೊರಗೆ ಹೋಯಿತು.

39ನೇ ನಿಮಿಷದಲ್ಲಿ ಜರ್ಮನಿ ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿಕೊಂಡಿತು. ಶವೆರ್ದಿ ಶೆಟಿನ್‌ ಅವರು ಕಾರ್ನರ್‌ ಕಿಕ್‌ನಿಂದ ನೀಡಿದ ಚೆಂಡನ್ನು ಹೆಡ್ ಮಾಡಿದ ಯಾನ್ ಬಿಸೆಕ್‌ ಗುರಿ ಮುಟ್ಟಿ ಸಂಭ್ರಮಿಸಿದರು. ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿದ ಜರ್ಮನಿ ಜಾನ್ ಎಬೊ ಮೂಲಕ ಮೂರನೇ ಗೋಲು ಗಳಿಸಿತು. 65ನೇ ನಿಮಿಷದಲ್ಲಿ ಆರ್ಪ್‌ ಸುಲಭ ಗೋಲು ಗಳಿಸಿ ತಂಡದ ಮುನ್ನಡೆಯನ್ನು 4–0ಗೆ ಏರಿಸಿದರು. ಗುಲೆರ್ಮ ಟಾಕ್‌ ನೀಡಿದ ಪಾಸ್‌ನಿಂದ ಈ ಗೋಲು ಮೂಡಿ ಬಂತು.

ಕ್ವಾರ್ಟರ್ ಫೈನಲ್‌ಗೆ ಅಮೆರಿಕ: ಟಿಮ್ ವ್ಹೀ ಗಳಿಸಿದ ಮೂರು ಗೋಲು
ಗಳ ನೆರವಿನಿಂದ ಅಮೆರಿಕ 5–0 ಗೋಲುಗಳಿಂದ ಪೆರುಗ್ವೆಯನ್ನು ಮಣಿಸಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿತು. ಉಭಯ ತಂಡದ ಆಟಗಾರರು ಅತ್ಯುತ್ತಮ ಆಟವಾಡಿದರು. ಆದರೆ ಅವಕಾಶಗಳನ್ನು ಸದುಪಯೋಗ ಮಾಡಿ
ಕೊಂಡ ಅಮೆರಿಕ ಜಯದ ನಗೆ ಸೂಸಿತು. ‌19ನೇ ನಿಮಿಷದಲ್ಲಿ ಗೋಲು ಗಳಿಸಿದ ವ್ಹೀ, ತಂಡಕ್ಕೆ ಮೊದಲ ಮುನ್ನಡೆ ಗಳಿಸಿಕೊಟ್ಟರು. 27ನೇ ನಿಮಿಷದಲ್ಲಿ ಕ್ರಿಸ್ ಕಾಸ್ಲಿನ್‌ ಗಳಿಸಿದ ಮೋಹಕ ಗೋಲು ಅಮೆರಿಕದ ಮುನ್ನಡೆಯನ್ನು ಹೆಚ್ಚಿಸಿತು. ವ್ಹೀ ತಮ್ಮ ಎರಡನೇ ಗೋಲು ಗಳಿಸಿದಾಗ ಪೆರುಗ್ವೆ ಆಟಗಾರರು ನಿರಾಸೆಗೆ ಒಳಗಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT