ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: ದಿಡಿಗಿನಹಳ್ಳದ ಮಿನಿ ಜಲಪಾತ

Last Updated 17 ಅಕ್ಟೋಬರ್ 2017, 5:13 IST
ಅಕ್ಷರ ಗಾತ್ರ

ಗುಳೇದಗುಡ್ಡ: ಈಚೆಗೆ ಸುರಿದ ಮಳೆಯಿಂದಾಗಿ ಗುಳೇದಗುಡ್ಡ–ಕೋಟೆಕಲ್ಲ ಗುಡ್ಡದ ಮೇಲಿನ ನಿಸರ್ಗದ ಮಧ್ಯದಲ್ಲಿ ಮಳೆ ನೀರಿನಿಂದ ಸೃಷ್ಟಿಯಾಗಿರುವ ದಿಡಗಿನಹಳ್ಳದ ಮಿನಿ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಗುಳೇದಗುಡ್ಡದಿಂದ 3 ಕಿ.ಮೀ ದೂರದಲ್ಲಿರುವ ಬೆಟ್ಟ ಹತ್ತಿ ನಡೆದರೆ ಸಮತಟ್ಟಿನ ವಿಶಾಲವಾದ ನಿಸರ್ಗದ ನಿರ್ಜನ ಪ್ರದೇಶದಲ್ಲಿ ಜುಳು ಜುಳು ಹರಿಯುವ ದಿಡಗಿನಹಳ್ಳದ ಜಲಪಾತದ ಕೊಳ್ಳ ಇದೆ, ಅಲ್ಲಿನ ಬೆಟ್ಟದ ತುದಿಯಿಂದ 35 ಅಡಿ ಎತ್ತರದಿಂದ ಜುಳು ಜುಳು ಬೀಳುವ ಮಳೆ ನೀರಿನ ಜಲಪಾತ ಸೃಷ್ಟಿಯಾಗುತ್ತಿದೆ. ಇಂತಹ ಅದ್ಭುತ ಸೌಂದರ್ಯವನ್ನು ಸೃಷ್ಟಿಸಿದ ಜಲಪಾತ ನೋಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಗುಡ್ಡದ ಬೆಟ್ಟದಲ್ಲಿ ಮೈದುಂಬಿ ಹರಿಯೋ ನೀರು, ಹಾಲ್ನೊರೆಯಂತೆ ಬೀಳೋ ಜಲಪಾತ, ನಿಸರ್ಗದ ಮಧ್ಯದಲ್ಲಿ ಹರಿವ ನೀರ ಮಧ್ಯೆ ಸ್ನಾನಕ್ಕಿಳಿಯುವ ಜನರು ಬೆಳಿಗ್ಗೆಯಿಂದ ಸಂಜೆವರೆಗೆ ಕಾಲ ಕಳೆದು ಸಂಭ್ರಮಪಡುತ್ತಿದ್ದಾರೆ. ಇದು ದೊಡ್ಡದಾದ ಜಲಪಾತ ಅಗದಿದ್ದರೂ ಜಲಪಾತದ ಬುಡದಲ್ಲಿ ಸೃಷ್ಟಿಯಾಗಿರುವ ದಿಡಗಿನ ಕೊಳ್ಳ ಮಾತ್ರ ಅದ್ಬುತ ಸುಂದರ ನಿಸರ್ಗದ ಜಲಪಾತದ ತಾಣವಾಗಿದೆ.

ಬರಗಾಲದ ನಾಡಾಗಿದ್ದರೂ ಮಳೆಗಾಲದಲ್ಲಿ ವಿಶಾಲವಾದ ಗುಡ್ಡದ ಮೇಲಿಂದ ಭೋರ್ಗರೆಯುತ್ತಿರುವ ಮಿನಿ ಜಲಪಾತವು ಚಲನಚಿತ್ರ ಮತ್ತು ಟಿ.ವಿ. ಧಾರಾವಾಹಿಗಳಿಗೆ ಶೂಟಿಂಗ್ ಮಾಡಲು ಹೇಳಿ ಮಾಡಿಸಿದ ನಿಸರ್ಗ ತಾಣವಾಗಿದೆ.

ಈ ಜಲಪಾತಕ್ಕೆ ಹೋಗಲು ಎರಡು ಮಾರ್ಗಗಳಿವೆ. ಗುಳೇದಗುಡ್ಡ ಮೂಕೇಶ್ವರಿ ದೇವಸ್ಥಾನದಿಂದ ಒಂದು ಬೆಟ್ಟ ಹತ್ತಿ ಇಳಿದರೆ ಜಲಪಾತ ಸಿಗುವುದು. ಇನ್ನೊಂದು ಮಾರ್ಗ ಕೋಟೆಕಲ್ಲ ಗ್ರಾಮದ ಹುಚ್ಚೇಶ್ವರ ಮಠದಿಂದ ಗುಡ್ಡ ಹತ್ತಿ ಅಲ್ಲಿಂದ ಕಾಲ್ನಡಿಗೆಯಿಂದ ಮುಂದೆ ಸಾಗಿದರೆ ಜಲಪಾತ ತಲುಪಬಹುದು. ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಹುಟ್ಟುತ್ತದೆ. ಹೀಗಾಗಿ ಅಲ್ಲಿಗೆ ಹೋಗಲು ಸ್ವಲ್ಪ ಪ್ರಯಾಸಪಡಬೇಕು.

ಈ ಸುಂದರ ಜಲಪಾತ ನೋಡಲು ಗುಳೇದಗುಡ್ಡ ಸುತ್ತ ಮುತ್ತಲಿನ ಹಳ್ಳಿಗಳ ಯುವಕರು. ಯುವತಿಯರು ಹಾಗೂ ಕುಟುಂಬದ ಸದಸ್ಯರು ಪಿಕ್ನಿಕ್‌ಗೆ ಬುತ್ತಿ ಕಟ್ಟಿಕೊಂಡು ತಂಡೋಪತಂಡವಾಗಿ ಬರುತ್ತಿದ್ದಾರೆ. ಮಳೆಗಾಲ ಮುಗಿಯುವುದರೊಳಗಾಗಿ ನೀವೂ ಒಮ್ಮೆ ಏಕೆ ಈ ಜಲಪಾತ ನೋಡಲು ಹೋಗಬಾರದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT