ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ: ₹60.46 ಲಕ್ಷ ಉಳಿತಾಯ ಬಜೆಟ್

Last Updated 9 ಫೆಬ್ರುವರಿ 2018, 9:24 IST
ಅಕ್ಷರ ಗಾತ್ರ

ಬೀದರ್: ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಗುರುವಾರ ಇಲ್ಲಿ ನಗರಸಭೆಯ 2018-19ನೇ ಸಾಲಿನ ₹ 60.46 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು. ‘ವರ್ಷದ ಅವಧಿಯಲ್ಲಿ ವಿವಿಧ ಮೂಲಗಳಿಂದ ₹ 9.75 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ₹ 9.69 ಕೋಟಿ ವೆಚ್ಚ ಆಗಲಿದೆ’ ಎಂದು ಅವರು ತಿಳಿಸಿದರು.

‘ನಗರದ ಜನತೆಯ ಅನುಕೂಲಕ್ಕಾಗಿ ಎರಡು ಆಂಬುಲನ್ಸ್ ಹಾಗೂ ಎರಡು ಶವ ಸಾಗಿಸುವ ವಾಹನಗಳನ್ನು ಖರೀದಿಸಲಾಗುವುದು’ ಎಂದು ಪ್ರಕಟಿಸಿದರು. ‘₹ 20 ಲಕ್ಷ ವೆಚ್ಚದಲ್ಲಿ ನಗರದಲ್ಲಿ ಸಸಿಗಳನ್ನು ನೆಡಲಾಗುವುದು. ₹ 50 ವೆಚ್ಚದಲ್ಲಿ ಚರಂಡಿಗಳಲ್ಲಿ ತುಂಬಿದ ಹೂಳು ತೆಗೆಯಲಾಗುವುದು’ ಎಂದು ಹೇಳಿದರು.

ವಾರ್ಡ್‌ಗೆ ತಲಾ ₹15 ಲಕ್ಷ: ಅಧ್ಯಕ್ಷೆ ಬಜೆಟ್ ಮಂಡಿಸುವ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ರಿಯಾಜ್ ಪ್ರತಿ ವಾರ್ಡ್‌ನ ಅಭಿವೃದ್ಧಿಗೆ ₹ 15 ಲಕ್ಷ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು. ಅನೇಕ ಸದಸ್ಯರು ಅವರೊಂದಿಗೆ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮನೋಹರ ಅವರು, ‘ಪ್ರತಿ ವಾರ್ಡ್‌ಗೆ ತಲಾ ₹ 15 ಲಕ್ಷ ಅನುದಾನ ಒದಗಿಸಿದರೆ ₹ 5 ಕೋಟಿ ಬೇಕಾಗಲಿದೆ. ಈಗಾಗಲೇ ನಗರಸಭೆ ಮೇಲೆ ಅನೇಕ ಹೊಣೆಗಾರಿಕೆಗಳು ಇವೆ. ಈ ಬಗೆಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವ ಕಳಿಸೊಣ. ಅನುದಾನ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳೊಣ’ ಎಂದು ತಿಳಿಸಿದರು.

ಆದರೆ, ಇದಕ್ಕೆ ಒಪ್ಪದ ಸದಸ್ಯರು, ‘ತಲಾ ₹ 15 ಲಕ್ಷ ಅನುದಾನ ಕೊಡುವ ಭರವಸೆ ನೀಡಿದ ನಂತರವೇ ಬಜೆಟ್ ಚರ್ಚೆ ನಡೆಸಬೇಕು’ ಎಂದು ಪಟ್ಟು ಹಿಡಿದರು. ಕೆಲವರು ಸಭೆಯಿಂದ ಹೊರ ನಡೆಯಲು ಮುಂದಾದರು.

ಬಳಿಕ ಶಾಲಿನಿ ಚಿಂತಾಮಣಿ ಅವರು ಒಂದು ತಿಂಗಳೊಳಗೆ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತಿ ವಾರ್ಡ್‌ಗೆ ತಲಾ ₹ 15 ಲಕ್ಷ ಅನುದಾನ ನೀಡುವ ಭರವಸೆ ನೀಡಿದರು. ನಂತರ ಸದಸ್ಯರು ಬಜೆಟ್‌ಗೆ ಅನುಮೋದನೆ ನೀಡಿದರು.

‘ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ನಗರದ ಓಲ್ಡ್‌ಸಿಟಿಯಲ್ಲಿ ಸಮರ್ಪಕವಾಗಿ ಆಗಿಲ್ಲ. ನಿತ್ಯ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ. ನಗರದ ಕೆಲ ಪ್ರದೇಶಗಳು ನಿರಂತರ ನೀರು ಪೂರೈಕೆ ಹಾಗೂ ಒಳಚರಂಡಿ ಕಾಮಗಾರಿ ನಕಾಶೆಯಲ್ಲಿ ಇಲ್ಲ’ ಎಂದು ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ನಗರದಲ್ಲಿ ಹೊಸದಾಗಿ ಸಸಿಗಳನ್ನು ನೆಡಲು ನನ್ನ ಅಭ್ಯಂತರವೇನೂ ಇಲ್ಲ. ಆದರೆ, ಮೊದಲು ಹೆಚ್ಚಿರುವ ಗಿಡಗಳಿಗೆ ನೀರು ಹಾಕುವ ಕೆಲಸ ಮಾಡಬೇಕು’ ಎಂದು ಅವರು ಹೇಳಿದರು. ‘ಬಾಕಿ ಉಳಿದಿರುವ ನಗರಸಭೆಯ ಮನೆ, ಆಸ್ತಿ, ನೀರಿನ ಕರ ವಸೂಲಿ ಮಾಡಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎನ್ನುವ ಸಲಹೆ ಸದಸ್ಯರಿಂದ ಕೇಳಿ ಬಂದಿತು. ಸ್ಥಾಯಿ ಸಮಿತಿಯ ಅಧ್ಯಕ್ಷ ಅತಿಕ್ ಅಹಮ್ಮದ್ ಉಪಸ್ಥಿತರಿದ್ದರು.

* * 

ಬೀದರ್ ತಾಲ್ಲೂಕಿನ ಸುಲ್ತಾನಪುರ ಬಳಿಯ ಕಸ ವಿಲೇವಾರಿ ಘಟಕದ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುವುದು
ಶಾಲಿನಿ ಚಿಂತಾಮಣಿ,  ನಗರಸಭೆ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT