ಖುಷಿಯ ಕಥೆಗಳನ್ನು ಮೈದುಂಬಿಕೊಳ್ಳಿ

ಬುಧವಾರ, ಜೂನ್ 19, 2019
31 °C

ಖುಷಿಯ ಕಥೆಗಳನ್ನು ಮೈದುಂಬಿಕೊಳ್ಳಿ

Published:
Updated:
ಖುಷಿಯ ಕಥೆಗಳನ್ನು ಮೈದುಂಬಿಕೊಳ್ಳಿ

ಈ ಕಥೆ ಸಾಕಷ್ಟು ಜನಪ್ರಿಯವಾಗಿರುವುದೇ. ಆದರೂ ಈಗ ನಾನು ಹೇಳುತ್ತಿರುವ ವಿಷಯವನ್ನು ಈ ಕಥೆಯಿಂದಲೇ ಆರಂಭಿಸುವುದು ಸೂಕ್ತ. ತುಂಬ ಚಿಕ್ಕ ಕಥೆ ಇದು:ಆ ವರ್ಷ ಬೀಕರ ಬರಗಾಲ ಬಂದಿತ್ತು. ಮಳೆಯ ಸುಳಿವೇ ಇರಲಿಲ್ಲ. ಒಂದು ಊರಿನ ಜನರೆಲ್ಲ ಊರ ಹೊರಗಿನ ಬಯಲಲ್ಲಿ ಸೇರಿ ಮಳೆಗಾಗಿ ಪ್ರಾರ್ಥಿಸಲು ನಿರ್ಧರಿಸಿದರು. ನಿಗದಿತ ಸಮಯಕ್ಕೆ ಊರವರೆಲ್ಲರೂ ಬರಿಗೈಯಲ್ಲಿ ಬಯಲಿನಲ್ಲಿದ್ದರು. ಆದರೆ ಒಬ್ಬ ಹುಡುಗ ಮಾತ್ರ ತನ್ನ ಜೊತೆ ಕೊಡೆಯನ್ನೂ ತೆಗೆದುಕೊಂಡು ಬಂದಿದ್ದ. ಅದು ನಂಬಿಕೆ!

ಇನ್ನೊಂದು ತಮಾಷೆಯ ಸಂದರ್ಭವನ್ನು ನಾವೆಲ್ಲರೂ ಎದುರಿಸಿರುತ್ತೇವೆ. ನೀವು ನಿಮ್ಮ ಸ್ನೇಹಿತರನ್ನು ಊಟಕ್ಕೆ ಕರೆದಿರುತ್ತೀರಿ. ಮನೆಗೆ ಬಂದ ಸ್ನೇಹಿತರೆಲ್ಲರೂ ‘ನೀನು ಚೆನ್ನಾಗಿ ಅಡುಗೆ ಮಾಡ್ತೀಯಾ ಅಂತ ಬೆಳಿಗ್ಗೆ ಉಪಾಹಾರವನ್ನೂ ಮಾಡದೇ ಬಂದಿದ್ದೇವೆ’ ಎನ್ನುತ್ತಾರಲ್ಲ, ಅದೂ ನಂಬಿಕೆಯೇ!

***

ಇಂಥ ನೂರು–ಸಾವಿರಾರು ಕಥೆಗಳು ನಮ್ಮ ಸುತ್ತಮುತ್ತಲೂ ಕೇಳುತ್ತಲೇ ಇರುತ್ತೇವೆ. ಎಷ್ಟೋ ಸಲ ಅವು ನಮ್ಮ ಬದುಕಿನ ಭಾಗವೂ ಆಗಿರುತ್ತವೆ. ಇಂಥ ಕಥೆಗಳು ನಮಗೆ ಯಾಕೆ ಬೇಕು? ಅವು ನಮಗೆ ಏನನ್ನು ಹೇಳುತ್ತವೆ? ಖುಷಿಯ ಕಥೆಗಳು ಬದುಕನ್ನು ಹಸನುಗೊಳಿಸಿಕೊಳ್ಳುವ ದಾರಿಗಳೂ ಹೌದು.

ನಿಮ್ಮ ವ್ಯಕ್ತಿತ್ವದಲ್ಲಿ ಸುಂದರ, ಉದಾತ್ತ, ಪ್ರೇಮಮಯ ಚೈತನ್ಯವನ್ನು ಸದಾ ತುಂಬುತ್ತಲೇ ಇರಿ. ಅದು ಚೆಲ್ಲಿಯೂ ಹೋಗಬಾರದು, ಆರಿಯೂ ಹೋಗಬಾರದು; ಬದಲಾಗಿ ನಿಧಾನಕ್ಕೆ ನಿಮ್ಮೊಳಗಿ ತುಂಬಿ ತುಳುಕುವವರೆಗೂ ಆ ಚೈತನ್ಯದ ಪ್ರಮಾಣವನ್ನೂ ಏರಿಸುತ್ತಲೇ ಹೋಗಿ.

ನೀವು ನಿಜವಾಗಿಯೂ ಇಂಗಿಸಿಕೊಳ್ಳಬೇಕಾಗಿರುವುದು ನಿಮ್ಮ ವ್ಯಕ್ತಿತ್ವದೊಳಗಿನ ವಿಷಗುಣಗಳಾದ ಕೋಪ, ಭಯ, ಅಸೂಯೆ, ದ್ವೇಷ, ಅಸಮಧಾನ, ಅಪರಾಧಿಪ್ರಜ್ಞೆ, ಪಾಪಪ್ರಜ್ಞೆ, ಖಿನ್ನತೆ, ಕೃತಘ್ನತೆ, ಅಹಂಕಾರಗಳನ್ನು.

ಈ ಭಾವಗಳನ್ನು ಬೆಳೆಸುವ ಕಥೆಗಳನ್ನು ನಮ್ಮೊಳಗೆ ಬಿಟ್ಟುಕೊಂಡರೆ ಅವು ನಮ್ಮಲ್ಲಿ ಅನುಮಾನ, ಅಪನಂಬಿಕೆ, ಅವಮಾನ, ಅಸಹ್ಯ, ಸ್ವಾನುಕಂಪ, ಭಯಾನಕತೆಗಳ ಗಲೀಜುಕೊಳಗಳನ್ನು ನಿರ್ಮಿಸುತ್ತ ಹೋಗುತ್ತವೆ. ಇಂಥ ಒಂದೊಂದು ಕಥೆಗಳೂ ನಮ್ಮ ಮಾನಸಿಕ–ದೈಹಿಕ ಆರೋಗ್ಯಕ್ಕೆ ಎಷ್ಟು ಮಾರಕವಲ್ಲವೇ? ಮೊದಲು ಇಂಥ ವಿಷಮೂಲಗಳನ್ನು ನಿಮ್ಮೊಳಗಿಂದ ಹೊರಹಾಕಿ. ನಿಮ್ಮಲ್ಲಿ ಇಂಥ ಯಾವ್ಯಾವ ಗುಣಗಳಿವೆಯೋ ಅವುಗಳನ್ನೆಲ್ಲ ಒಂದು ಹಾಳೆಯ ಮೇಲೆ ಬರೆದು ನಂತರ ಆ ಹಾಳೆಯನ್ನು ಸುಟ್ಟು ಹಾಕಿ. ಅವುಗಳ ಬದಲಿಗೆ ಖುಷಿಯ ಕಥೆಗಳನ್ನು ತುಂಬಿಕೊಳ್ಳಿ.

ನಿಮ್ಮ ದೇಹದ ಪ್ರತಿ ಕಣದಲ್ಲಿಯೂ ಜೀವನಪ್ರೇಮದ, ಸುಂದರ, ಸ್ಫೂರ್ತಿದಾಯಕ, ದಿವ್ಯ ಕಥೆಗಳನ್ನು ತುಂಬಿಕೊಳ್ಳುತ್ತಲೇ ಹೋಗಿ. ಅದು ನಿಮ್ಮ ಹೃದಯ, ಮಿದುಳುಗಳಲ್ಲಿ ತುಂಬಿ ಜೀವಚೈತನ್ಯವನ್ನು ಉಕ್ಕಿಸಲಿ. ಎಲ್ಲಿಯವರೆಗೆ ಇಂಥ ಕಥೆಗಳನ್ನು ತುಂಬಿಕೊಳ್ಳುತ್ತ ಹೋಗಬೇಕು ಎಂದರೆ ಅವು ಅದು ನಮ್ಮೊಳಗಿಂದ ತುಳುಕಿ ನಮ್ಮ ಸುತ್ತಲೂ ಆಹ್ಲಾದಕರ ವೈಭವವನ್ನು ಸೃಷ್ಟಿಮಾಡಬೇಕು. ಹೀಗೆ ತುಳುಕುವಿಕೆಯ ಸೂಚನೆಯಾಗಿ ಇಂಥ ಕಥೆಗಳನ್ನು ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಬೇಕು ಅನಿಸುತ್ತದೆ. ಅವರನ್ನೂ ನೀವು ಹೊಂದಿದ ಖುಷಿ ಭಾಗವಾಗಿಸಿಕೊಳ್ಳಬೇಕು ಅನಿಸುತ್ತದೆ. ಅಕಾರಣ ನಗುವುದು, ಚೆಂದದ ಹಾಡೊಂದು ಗುನುಗಿಕೊಳ್ಳುವುದು, ಎಲ್ಲರನ್ನೂ ಪ್ರೇಮದಿಂದ ಕಾಣುವುದು, ಆ ಪ್ರೇಮವನ್ನು ಅವರೆದುರು ಅಭಿವ್ಯಕ್ತಿಸುವುದು ಈ ಎಲ್ಲವೂ ನಮ್ಮೊಳಗೆ ಚೈತನ್ಯದ ಚಿಲುಮೆ ಉಕ್ಕಿ ಹರಿಯುತ್ತಿರುವುದರ ಸೂಚನೆ.

ನನ್ನ ಸ್ನೇಹಿತೆ ಸ್ಮೃತಿ ನನಗೆ ಕೆನಡಾದೇಶದ ಒಂದು ವಿಚಿತ್ರ ವಸ್ತುವೊಂದನ್ನು ಉಡುಗೊರೆಯಾಗಿ ಕೊಟ್ಟಳು. ಅದರ ಹೆಸರು ‘ಡ್ರೀಂ ಕ್ಯಾಚರ್‌’. ಅದನ್ನು ನಾವು ಮಲಗುವ ಕೋಣೆಯಲ್ಲಿ ತೂಗುಹಾಕಿಕೊಳ್ಳಬೇಕಂತೆ. ಆ ವಸ್ತುವನ್ನು ನೋಡುತ್ತ ನೋಡುತ್ತ ನನಗೆ ನಮ್ಮ ಮನಸ್ಸನ್ನೂ ಯಾಕೆ ನಾವು ಜಾಯ್‌ ಕ್ಯಾಚರ್‌ ಮಾಡಿಕೊಳ್ಳಬಾರದು ಎಂಬ ಆಲೋಚನೆಯೊಂದು ಸುಳಿದುಹೋಯಿತು. ಅಷ್ಟಕ್ಕೂ ಮನಸ್ಸೆಂಬುದು ದೇಹಕ್ಕಿಂತ ತುಂಬ ದೊಡ್ಡವಾದದ್ದು, ಕ್ಷಿಪ್ರವಾದದ್ದು. ದೇಹ ಇಲ್ಲಿರುವಂತೆಯೇ ಮನಸ್ಸು ಕೆನಡಾವರೆಗೂ ವಿಸ್ತರಿಸಿಕೊಳ್ಳಬಲ್ಲದು. ನಾನೊಂದು ಬೆಟ್ಟವನ್ನು ದಿಟ್ಟಿಸಿ ನೋಡುತ್ತಿರುವಾಗ ನನ್ನ ಮನಸ್ಸು ಆ ಬೆಟ್ಟವನ್ನು ಎತ್ತಿಹಿಡಿದಿರುತ್ತದೆ. ಹೌದು, ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಎಲ್ಲಿ ಬೇಕಾದರೂ ಕಳಿಸಬಲ್ಲ, ವಿಸ್ತರಿಸಬಲ್ಲ ಶಕ್ತಿ ಹೊಂದಿರುತ್ತಾರೆ.

ಹಾಗಾದರೆ ಖುಷಿಯನ್ನು ಹಿಡಿದಿಟ್ಟುಕೊಳ್ಳುವುದು ಹೇಗೆ? ಸದಾ ನಿಮ್ಮ ಮನಸ್ಸನ್ನು ಉನ್ನತ ಯೋಚನೆಗಳೊಂದಿಗೆ ತುಂಬಿಕೊಳ್ಳಿ. ಕೀಳು ಆಲೋಚನೆಗಳಿಂದ ಹೊರಬಂದ ಮನಸ್ಸು ಉನ್ನತವಾದ, ಉದಾತ್ತವಾದ, ಭಿನ್ನವಾದ ಜಾಗೃತಸ್ಥಿತಿಯೊಂದಿಗೆ ತನ್ನನ್ನು ಜೋಡಿಸಿಕೊಳ್ಳಲು ಬಯಸುತ್ತಿರುತ್ತದೆ. ನಮ್ಮ ಮನಸ್ಸನ್ನು ಅಂಥ ಆಲೋಚನೆಗಳೊಂದಿಗೆ ಪ್ರತಿದಿನವೂ ಜೋಡಿಸುತ್ತಿರಬೇಕು. ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ, ಶ್ರೇಷ್ಠ ಸಂಗೀತವನ್ನು ಕೇಳುವುದರಿಂದ, ಉನ್ನತಮಟ್ಟದ ಚಿಂತನೆಯಿಂದ ಅದು ಸಾಧ್ಯ.

ಬದುಕಿನ ನಿಜವಾದ ಸೌಂದರ್ಯವನ್ನು, ಸೌಗಂಧವನ್ನು ತೋರಿಸಿದ ಹಲವು ಗುರುಗಳು ಈ ನೆಲದಲ್ಲಿ ಆಗಿ ಹೋಗಿದ್ದಾರೆ. ಅವರ ಚಿಂತನೆಗಳು, ಉಪದೇಶಗಳನ್ನು ಒಗ್ಗೂಡಿಸಿ ಅರ್ಥಮಾಡಿಕೊಳ್ಳಿ.

ನಮ್ಮ ವ್ಯಕ್ತಿತ್ವವನ್ನು ಉನ್ನತ ಸ್ತರಕ್ಕೆ ಏರಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಲೇ ಇರಬೇಕು. ಯಾವುದು ನಿಮ್ಮನ್ನು ಉದಾತ್ತಗೊಳಿಸಬಲ್ಲದು? ಯಾವುದು ನಿಮ್ಮನ್ನು ಕಣ್ಣೀರಿನಿಂದ ಹೊರತರಬಲ್ಲದು, ಯಾವುದು ನಿಮ್ಮ ಮುಖದ ಮೇಲೆ ನಗು ಮೂಡಿಸಬಲ್ಲದು, ಯಾವುದು ಈ ಜಗತ್ತಿನ ವಿದ್ಯಮಾನಗಳನ್ನು ಸ್ಥಿತಪ್ರಜ್ಞನಾಗಿ ನೋಡಬಲ್ಲ ನೋಟ ಕೊಡಬಲ್ಲದು, ಯಾವುದು ನಿಮ್ಮನ್ನು ಕೊನೆಯಿಲ್ಲದ ಆನಂದದ ಕಡಲಲ್ಲಿ ತೇಲಿಸಬಲ್ಲದು – ಎಂಬ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿಕೊಳ್ಳುತ್ತಲೇ ಆ ಅಂಶಗಳನ್ನು ನಿಮ್ಮೊಳಗೆ ತುಂಬಿಕೊಳ್ಳುತ್ತಲೇ ಇರಬೇಕು. ನಿಮ್ಮ ವ್ಯಕ್ತಿತ್ವವೆಲ್ಲವೂ ಅಂಥ ಸಂಗತಿಗಳಿಂದಲೇ ತುಂಬಿ ಹೋದಾಗ ನಿಮ್ಮ ನಡೆ, ನುಡಿ, ಬದುಕು – ಎಲ್ಲದಕ್ಕೂ ಶ್ರೇಷ್ಠತೆ ದೊರಕುತ್ತದೆ.

ಹೀಗೊಂದು ಪ್ರತಿಜ್ಞಾತ್ಮಕ ಟಿಪ್ಪಣಿಯನ್ನು ನಿಮಗೆ ನೀವೇ ಬರೆದಿಟ್ಟುಕೊಳ್ಳಿ: ‘ನಾನು ಸಂತೋಷವನ್ನು ನನ್ನೊಳಗೆ ತುಂಬಿಕೊಳ್ಳಲು ಮತ್ತು ಅದು ನನ್ನಿಂದ ಸೋರಿಹೋಗದಂತೆ ಎಚ್ಚರದಿಂದಿರಲು ಬದ್ಧನಾಗಿದ್ದೇನೆ. ಹಾಗೆಯೇ ಆ ಸಂತೋಷ ನನ್ನೊಳಗೆ ತುಂಬಿ ತುಳುಕುವಾಗ ಅದನ್ನು ಇನ್ನೊಬ್ಬರಿಗೂ ಹಂಚುತ್ತೇನೆ. ನನ್ನ ದೇಹಕ್ಕೆ ಮತ್ತು ಮನಸ್ಸಿಗೆ ಆರೋಗ್ಯಕರವಾಗಿರುವ ಆಹಾರವನ್ನೇ ಸೇವಿಸಲು ನಾನು ಬದ್ಧನಾಗಿದ್ದೇನೆ. ಏಕಾಕಿತನ, ಕ್ರೋಧ, ನಿಷ್ಟ್ರಯೋಜಕ ಗುಣಗಳನ್ನು ಹೊರಚೆಲ್ಲಿ ಅದಮ್ಯ ಆನಂದವನ್ನು, ಶಾಂತಿಯನ್ನು ನನ್ನೊಳಗೆ ತುಂಬಿಕೊಳ್ಳುತ್ತಲೇ ಇರುತ್ತೇನೆ. ನಾನು ನನ್ನ ವ್ಯಕ್ತಿತ್ವನ್ನು ಸದಾ ಉನ್ನತ ಮಟ್ಟದಲ್ಲಿಯೇ ಇರಿಸಿಕೊಳ್ಳುತ್ತೇನೆ. ಅದನ್ನು ಎಂದಿಗೂ ಕೀಳುಮಟ್ಟಕ್ಕೆ ಕುಸಿಯಲು ಬಿಡಲಾರೆ. ಇದು ನನ್ನ ಪ್ರತಿಜ್ಞೆ’.

ಇನ್ನೊಂದು ಸಣ್ಣ ಕಥೆಯೊಟ್ಟಿಗೇ ಈ ಚರ್ಚೆಯನ್ನು ಮುಗಿಸೋಣ. ‘ಹಕ್ಕಿಯೊಂದು ಒಂದು ಒಣ ಮರದ ಕೊಂಬೆಯ ಮೇಲೆ ಕೂತಿತ್ತು. ಒಣಗಿದ ರೆಂಬೆ ಯಾವ ಕ್ಷಣದಲ್ಲಾದರೂ ಮುರಿದುಬೀಳುವಂತಿತ್ತು. ಆದರೆ ಹಕ್ಕಿಯ ಮನಸ್ಸಿನಲ್ಲಿ ಇನಿತೂ ಭಯ ಇರಲಿಲ್ಲ. ಏಕೆಂದರೆ ಹಕ್ಕಿಗೆ ತನ್ನ ರೆಕ್ಕೆಗಳ ಮೇಲೆ ನಂಬಿಕೆಯಿತ್ತು!’ಈ ಕಥೆಯನ್ನು ನಿಮ್ಮದಾಗಿಸಿಕೊಳ್ಳಿ. ನಿಮ್ಮತನದಲ್ಲಿ ನಂಬಿಕೆ ಇಟ್ಟುಕೊಳ್ಳಿ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry