ಏಷ್ಯಾಕಪ್‌ ಹಾಕಿ: ಭಾರತಕ್ಕೆ ಜಯದ ಜಪ

ಸೋಮವಾರ, ಮೇ 20, 2019
30 °C

ಏಷ್ಯಾಕಪ್‌ ಹಾಕಿ: ಭಾರತಕ್ಕೆ ಜಯದ ಜಪ

Published:
Updated:
ಏಷ್ಯಾಕಪ್‌ ಹಾಕಿ: ಭಾರತಕ್ಕೆ ಜಯದ ಜಪ

ಢಾಕಾ (ಪಿಟಿಐ): ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವಿನ ಸಿಹಿ ಸವಿದು ವಿಶ್ವಾಸದಿಂದ ಬೀಗುತ್ತಿರುವ ಭಾರತ ಪುರುಷರ ತಂಡದವರು ಈಗ ಮತ್ತೊಂದು ಸವಾಲಿಗೆ ಸನ್ನದ್ಧರಾಗಿದ್ದಾರೆ.

ಬುಧವಾರ ನಡೆಯುವ 10ನೇ ಏಷ್ಯಾಕಪ್‌ ಟೂರ್ನಿಯ ಸೂಪರ್‌ 4 ಹಂತದ ತನ್ನ ಮೊದಲ ಪಂದ್ಯದಲ್ಲಿ ಮನ್‌ಪ್ರೀತ್‌ ಸಿಂಗ್‌ ಬಳಗ ದಕ್ಷಿಣ ಕೊರಿಯಾ ವಿರುದ್ಧ ಆಡಲಿದೆ.

ಶೋರ್ಡ್‌ ಮ್ಯಾರಿಜ್‌, ಮುಖ್ಯ ಕೋಚ್‌ ಆಗಿ ನೇಮಕವಾದ ಬಳಿಕ ಆಡಿದ ಮೊದಲ ಮಹತ್ವದ ಟೂರ್ನಿಯಲ್ಲಿ ಮೋಡಿ ಮಾಡುತ್ತಿರುವ ಭಾರತ ತಂಡದವರು ಗೆಲುವಿನ ಓಟ ಮುಂದುವರಿಸುವ ವಿಶ್ವಾಸ ಹೊಂದಿದ್ದಾರೆ.

ರಮಣದೀಪ್‌ ಸಿಂಗ್‌, ಆಕಾಶ್‌ದೀಪ್‌ ಸಿಂಗ್‌, ಲಲಿತ್‌ ಉಪಾಧ್ಯಾಯ ಮತ್ತು ಚಿಂಗ್ಲೆನ್ಸನಾ ಸಿಂಗ್‌ ಅವರು ಮುಂಚೂಣಿ ವಿಭಾಗದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುತ್ತಿರುವುದು ತಂಡಕ್ಕೆ ವರವಾಗಿ ಪರಿಣಮಿಸಿದೆ.

ಹಿಂದಿನ ಪಂದ್ಯಗಳಲ್ಲಿ ಕೈಚಳಕ ತೋರಿದ್ದ ಇವರು ಮನಮೋಹಕ ಫೀಲ್ಡ್‌ ಗೋಲುಗಳನ್ನು ದಾಖಲಿಸಿ ಅಭಿಮಾನಿಗಳನ್ನು ರಂಜಿಸಿದ್ದರು.

ಮಿಡ್‌ಫೀಲ್ಡ್‌ ವಿಭಾಗದಲ್ಲಿ ತಂಡಕ್ಕೆ ಅನುಭವಿ ಸರ್ದಾರ್‌ ಸಿಂಗ್‌ ಮತ್ತು ನಾಯಕ ಮನ್‌ಪ್ರೀತ್‌ ಅವರ ಬಲ ಇದೆ.

ಬ್ಯಾಕ್‌ಲೈನ್‌ನಲ್ಲಿ ಆಡುವ ಅಮಿತ್‌ ರೋಹಿದಾಸ್‌, ಹರ್ಮನ್‌ಪ್ರೀತ್‌ ಸಿಂಗ್‌ ಮತ್ತು ದಿಪ್ಸನ್‌ ಟರ್ಕಿ ಅವರೂ ಕೊರಿಯಾ ತಂಡಕ್ಕೆ ಸವಾಲಾಗಬಲ್ಲ ಸಮರ್ಥರಾಗಿದ್ದಾರೆ.

ಆದರೆ ತಂಡ ಹಿಂದಿನ ಪಂದ್ಯಗಳಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ವಿಫಲವಾಗಿತ್ತು. ಇಂಥ ತಪ್ಪುಗಳು ಮರುಕಳಿಸದಂತೆ ತಂಡ ಎಚ್ಚರವಹಿಸಬೇಕಿದೆ.

ಭಾರತ ತಂಡ ಮೊದಲ ಮೂರು ಪಂದ್ಯಗಳಲ್ಲಿ ಜಪಾನ್‌, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ದೊಡ್ಡ ಅಂತರದಿಂದ ಗೆದ್ದಿತ್ತು. ಇದನ್ನು ಗಮನಿಸಿದರೆ ಕೊರಿಯಾ ತಂಡ ಕೂಡ ಮನ್‌ಪ್ರೀತ್‌ ಪಡೆಗೆ ಸುಲಭ ತುತ್ತಾಗುವ ಸಾಧ್ಯತೆ ಇದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ 6ನೇ ಸ್ಥಾನದಲ್ಲಿದ್ದರೆ, ಕೊರಿಯಾ 13ನೇ ಸ್ಥಾನ ಹೊಂದಿದೆ. ಇದು ಮನ್‌ಪ್ರೀತ್ ಬಳಗದ ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಸೂರಜ್‌ ಕರ್ಕೇರ ಮತ್ತು ಆಕಾಶ್‌ ಚಿಕ್ಟೆ, ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದು ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಅನುಪಸ್ಥಿತಿ ಕಾಡದಂತೆ ನೋಡಿಕೊಂಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry