ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಹಬ್ಬ ಅಂಧತ್ವ ತಾರದಿರಲಿ; ಕಣ್ಣಿನ ಕಾಳಜಿ ಇರಲಿ

ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಹಕರಿಸಲು ಸಾರ್ವಜನಿಕರಿಗೆ ಬಿಬಿಎಂಪಿ ಮನವಿ l ಸುರಕ್ಷತಾ ಕ್ರಮ ಕೈಗೊಳ್ಳುವಂತೆ ತಜ್ಞರ ಸಲಹೆ
Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬಕ್ಕೆ ಪಟಾಕಿಗಳನ್ನು ಸಿಡಿಸಲು ಹೋಗಿ ಸುಟ್ಟಗಾಯ ಆಗುವ, ಕೆಲವರು ದೃಷ್ಟಿಹೀನರಾಗುವ, ಅತಿಯಾದ ಶಬ್ದದಿಂದ ಶ್ರವಣ ಸಾಮರ್ಥ್ಯ ಕಳೆದುಕೊಳ್ಳುವ ಪ್ರಸಂಗಗಳು ಪ್ರತಿವರ್ಷ ಮರುಕಳಿಸುತ್ತವೆ. ಕೆಲವು ಅಂಶಗಳನ್ನು ಪಾಲಿಸುವುದರಿಂದ ಇಂತಹ ಅವಘಡಗಳನ್ನು ತಡೆಯಬಹುದು ಎನ್ನುತ್ತಾರೆ ತಜ್ಞರು.

‘ಪಟಾಕಿಗಳಿಂದ ಸಿಡಿದ ಕಿಡಿ ಕಣ್ಣಿನಗುಡ್ಡೆ, ರೆಪ್ಪೆಗಳಿಗೆ ತಗುಲಿ ಸುಟ್ಟಗಾಯ ಆಗಬಹುದು. ಪಟಾಕಿಗಳು ಸೂಸುವ ಹೊಗೆಯಿಂದ ಕಣ್ಣುಗಳು ತೇವಾಂಶ ಕಳೆದುಕೊಳ್ಳಬಹುದು. ಇದರಿಂದ ಕಣ್ಣುರಿ ಉಂಟಾಗುವ ಜತೆಗೆ ಹುಣ್ಣಗಳಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಿಂಟೊ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಡಾ.ಶಶಿಧರ್‌.

‘ಪಟಾಕಿಯಿಂದ ದೇಹದ ಭಾಗಗಳಿಗೆ ಹಾನಿಯಾದಾಗ, ಸ್ವಂತ ಚಿಕಿತ್ಸೆ ಮಾಡಿಕೊಳ್ಳಲು ಹೋಗಬಾರದು. ಇದರಿಂದ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು’ ಎನ್ನುತ್ತಾರೆ ಅವರು.

‘15 ವರ್ಷದೊಳಗಿನ ಮಕ್ಕಳು ಪಟಾಕಿಗಳಿಂದ ಹೆಚ್ಚು ಹಾನಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಅವರಿಗೆ ಅಪಾಯಕಾರಿ ಪಟಾಕಿಗಳನ್ನು ಕೊಡಬಾರದು. ಕೃಷ್ಣಚಕ್ರ, ಸುರ್‌ ಸುರ್‌ ಬತ್ತಿಗಳನ್ನು ನೀಡಬೇಕು’ ಎಂದು ಅವರು ತಿಳಿಸಿದರು.

ಹಬ್ಬದ ಪ್ರಯುಕ್ತ ನೇತ್ರಧಾಮ ಕಣ್ಣಿನ ಆಸ್ಪತ್ರೆ, ನಾರಾಯಣ ನೇತ್ರಾಲಯ, ಶಂಕರ ಕಣ್ಣಿನ ಆಸ್ಪತ್ರೆಗಳಲ್ಲಿ ಕಣ್ಣಿನ ತುರ್ತು ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದೆ.

***
ಶೇ 50ರಷ್ಟು ಕುಸಿತ
‘ನಗರದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ, ಸರಕು ಮತ್ತು ಸೇವಾ ತೆರಿಗೆಯ(ಜಿಎಸ್‌ಟಿ) ಜಾರಿ ಮತ್ತು ಮಾಲಿನ್ಯದ ಕುರಿತು ಜನರಲ್ಲಿ ಹೆಚ್ಚುತ್ತಿರುವ ಅರಿವಿನಿಂದಾಗಿ ಈ ವರ್ಷದ ಪಟಾಕಿ ವ್ಯಾಪಾರ ಶೇ 50ರಷ್ಟು ಕುಸಿದಿದೆ’ ಎಂದು ಪಟಾಕಿ ವ್ಯಾಪಾರಿಗಳು ಅನಿಸಿಕೆ ಹಂಚಿಕೊಂಡರು.

‘ಮಳೆಯಿಂದಾಗಿ ಜನ ಮನೆಯಿಂದ ಮಾರುಕಟ್ಟೆಗೆ ಬರಲು ಹಿಂಜರಿಯುತ್ತಿದ್ದಾರೆ. ಅಲ್ಲದೆ, ಕೆಲ ಅಂಗಡಿಗಳ ಮುಂದಿನ ರಸ್ತೆಗಳು ಕೊಚ್ಚೆಯಿಂದ ಕೂಡಿವೆ. ಇಲ್ಲಿಗೆ ಮೆಟ್ರೊ ರೈಲು ಸಾರಿಗೆ ವ್ಯವಸ್ಥೆ ಇದೆ. ಆದರೆ, ಪಟಾಕಿಗಳನ್ನು ಮೆಟ್ರೊ ರೈಲಿನಲ್ಲಿ ತೆಗೆದುಕೊಂಡು ಹೋಗಲು ಬಿಡುತ್ತಿಲ್ಲ. ಇದರಿಂದ ವ್ಯಾಪಾರ ಕುಸಿದಿದೆ’ ಎನ್ನುತ್ತಾರೆ ಅಕ್ಕಿಪೇಟೆಯ ಪಟಾಕಿ ವ್ಯಾಪಾರಿ ಲಲಿತ್‌.

ಜಿಎಸ್‌ಟಿ ಪರಿಣಾಮ: ‘ಪಟಾಕಿಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಪಟಾಕಿಗಳ ದರ ಕಳೆದ ವರ್ಷಕ್ಕಿಂತ ಶೇ 30ರಷ್ಟು ಹೆಚ್ಚಿದೆ. ಹೀಗಾಗಿ ಜನರು ಪಟಾಕಿಗಳನ್ನು ಖರೀದಿಸಲು ಮುಂದಾಗುತ್ತಿಲ್ಲ’ ಎಂದು ವ್ಯಾಪಾರಿ ಸುಭಾಷ್‌ ತಿಳಿಸಿದರು.

‘ಪ್ರತಿವರ್ಷ ಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಶೇ 60ರಷ್ಟು ಪಟಾಕಿಗಳು ಮಾರಾಟ ಆಗಿದ್ದವು. ಆದರೆ, ಈ ವರ್ಷ ಶೇ 20ರಷ್ಟು ಮಾತ್ರ ಮಾರಾಟವಾಗಿದೆ’ ಎಂದು ಚಾಮರಾಜಪೇಟೆಯ ರವಿ ಹೇಳಿದರು.

‘ಪಟಾಕಿಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಕೆಲ ಶಾಲಾ–ಕಾಲೇಜುಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರು ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೊದಲು ₹4,000 ಮೊತ್ತದ ಪಟಾಕಿ ಕೊಳ್ಳುತ್ತಿದ್ದವರು, ಈಗ ₹1,000 ಮೊತ್ತದ ಪಟಾಕಿಗಳನ್ನು ಮಾತ್ರ ಖರೀದಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

***
ಕಸ ಉತ್ಪತ್ತಿ ಕಡಿಮೆ ಮಾಡಿ
ಬೆಂಗಳೂರು:
‘ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹೊಡೆಯುವುದರಿಂದ ಪರಿಸರದ ಮಾಲಿನ್ಯ ಉಂಟಾಗುವ ಜತೆಗೆ ಅನೇಕ ವಿಪತ್ತುಗಳಿಗೂ ಕಾರಣವಾಗುತ್ತದೆ. ಕಡಿಮೆ ಪಟಾಕಿ ಹೊಡೆಯುವ ಮೂಲಕ ಕಸ ಉತ್ಪತ್ತಿಯನ್ನು ಕಡಿಮೆ ಮಾಡಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮನವಿ ಮಾಡಿದರು.

‘ಸಾರ್ವಜನಿಕರು ದೀಪಾವಳಿ ಆಚರಿಸುವುದರೊಂದಿಗೆ ಪರಿಸರ ಮಾಲಿನ್ಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿಗಳನ್ನು ಸಿಡಿಸಿದಾಗ ಅದರಿಂದ ಅಪಾಯಕಾರಿ ಅನಿಲ ಉತ್ಪತ್ತಿಯಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ಸಾರ್ವಜನಿಕರು ಆದಷ್ಟು ಕಡಿಮೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಬೇಕು’ ಎಂದಿದ್ದಾರೆ.

‘ವ್ಯಾಪಾರಿಗಳು ಹಬ್ಬದ ದಿನಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವುದು, ಪಟಾಕಿಗಳ ಮಾರಾಟ ಮಳಿಗೆಗಳನ್ನು ಇಡುವುದು, ಮಾರಾಟ ಮಾಡಿದ ಬಳಿಕ ಉಳಿದ ವಸ್ತುಗಳನ್ನು ರಸ್ತೆಯ ಮೇಲೆ ಬಿಸಾಡುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ’ ಎಂದರು.

‘ಪಟಾಕಿ ತ್ಯಾಜ್ಯ ರಸ್ತೆ, ಚರಂಡಿಗಳಲ್ಲಿ ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿಯಲು ಅಡಚಣೆ ಉಂಟಾಗುತ್ತದೆ. ಕಸದ ಸಮರ್ಪಕ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ವಾರ್ಡ್‍ಗಳಲ್ಲಿ ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ನಡೆಸುವಂತೆ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

ವೈದ್ಯರ ನಿಯೋಜನೆ: ‘ಪಾಲಿಕೆಯ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ ಹಾಗೂ ಪಾಲಿಕೆ ಎಲ್ಲ ಆಸ್ಪತ್ರೆಗಳಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಲು ವೈದ್ಯರನ್ನು ನಿಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.

ದೂರುಗಳಿಗೆ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 080-22660000 / 22221188.

***
ಸುಬ್ಬರಾಜು ಸಲಹೆ
ಬೆಂಗಳೂರು
: ಪರಿಸರಕ್ಕೆ ಮಾರಕವಾಗಿರುವ ಹಾನಿಕಾರಕ ಪಟಾಕಿಯಿಂದ ವಿದ್ಯಾರ್ಥಿಗಳು ದೂರವಿರುವುದು ಒಳಿತು ಎಂದು ಎಸ್.ವಿ.ಎನ್ ಶಾಲೆಯ ಅಧ್ಯಕ್ಷ ಸುಬ್ಬರಾಜು ಸಲಹೆ ನೀಡಿದರು.

ಕೆ.ಆರ್‌.ಪುರ ಸಮೀಪದ ಹೆಣ್ಣೂರಿನ ಎಸ್.ವಿ.ಎನ್ ಆಂಗ್ಲಪ್ರೌಢಶಾಲೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ರ ಆಯೋಜಿಸಿದ್ದ ಪರಿಸರ ಸ್ನೇಹಿ ಮಣ್ಣಿನ ದೀಪ ಬೆಳಗುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನನಿಬಿಡ ಪ್ರದೇಶ ಹಾಗೂ ರಸ್ತೆ ಬದಿಗಳಲ್ಲಿ ಪಟಾಕಿ ಹೊಡೆಯುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತದೆ. ವಾಯುಮಾಲಿನ್ಯ ಉಂಟಾಗು
ವುದರಿಂದ ಹವಾಮಾನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರು.

ಪ್ರತಿ ಹಬ್ಬವೂ ಮಕ್ಕಳಲ್ಲಿ ಲವಲವಿಕೆ ಮೂಡಿಸುತ್ತವೆ. ಜೀವನದ ಉತ್ಸುಕತೆಗೆ ಹಬ್ಬಗಳ ಆಚರಣೆ ಪ್ರೇರಕ. ನಾಲ್ಕು ಗೋಡೆಗಳ ನಡುವೆ ಪಾಠ ಕಲಿಯುವ ಮಕ್ಕಳಿಗೆ ಎಲ್ಲರೊಡನೆ ಬೆರೆತು ಮುಕ್ತ ಜೀವನ ನಡೆಸುವುದನ್ನು ಕಲಿಸುತ್ತದೆ. ಪಾಠದ ಜತೆಗೆ, ಕ್ರೀಡೆ, ಸಾಂಪ್ರದಾಯಿಕ ಹಬ್ಬಗಳ ಆಚರಣೆ ಮತ್ತಷ್ಟು ಜ್ಞಾನ ಒದಗಿಸಲಿದೆ ಎಂದರು.

***
ಚೀನಾ ಪಟಾಕಿ ಮಾರಬೇಡಿ..!
ಬೆಂಗಳೂರು:
‘ಚೀನಾ ಪಟಾಕಿ ಮಾರಾಟ ಮಾಡಬೇಡಿ. ಹುಷಾರಾಗಿರಿ’ ಎಂದು ಹೈಕೋರ್ಟ್ ಪಟಾಕಿ ಮಾರಾಟಗಾರರಿಗೆ ಸೋಮವಾರ ಕಿವಿಮಾತು ಹೇಳಿತು.

‘ಪಟಾಕಿ ಮಾರಾಟಕ್ಕೆ ಪರವಾನಗಿ ನೀಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶನ ನೀಡಬೇಕು’ ಎಂದು ಕೋರಿ ವಿವೇಕನಗರದ ಮನೋಹರಲಾಲ್‌ ಸಹಿತ ಎಂಟು ಜನರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ವಕೀಲ ಟಿ.ಎಲ್‌.ಕಿರಣ್ ಕುಮಾರ್, ‘ಈಗಾಗಲೇ ಆನ್‌ಲೈನ್‌ನಲ್ಲಿ ಮಾರಾಟಗಾರರಿಗೆ ಪರವಾನಗಿ ನೀಡಲು ಅರ್ಜಿ ಆಹ್ವಾನಿಸಿ ಲಾಟರಿ ಮೂಲಕ ಆಯ್ಕೆ ನಡೆಸಲಾಗಿದೆ. ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 69 ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು. ಇದಕ್ಕೆ ಪ್ರತಿಕ್ರಿ
ಯಿಸಿದ ನ್ಯಾಯಮೂರ್ತಿಗಳು, ‘ಅವಕಾಶ ಇದ್ದರೆ ಇವರ ಅರ್ಜಿಯನ್ನೂ ಪರಿಗಣಿಸಿ’ಎಂದು ನಿರ್ದೇಶಿಸಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.

***
ಸಂಚಾರ ದಟ್ಟಣೆ
ಬೆಂಗಳೂರು
: ದೀಪಾವಳಿ ಹಬ್ಬದ ಪ್ರಯುಕ್ತ ಸರ್ಕಾರಿ ಕಚೇರಿ ಹಾಗೂ ಕೆಲ ಖಾಸಗಿ ಕಚೇರಿಗಳಿಗೆ ಅ. 18ರಿಂದ ಸರಣಿ ರಜೆ ಇದ್ದು, ಹಬ್ಬದ ಆಚರಣೆಗಾಗಿ ಮಂಗಳವಾರ ನಗರದಿಂದ ಬೇರೆ ಊರು ಹಾಗೂ ರಾಜ್ಯಕ್ಕೆ ಹೋಗುವರ ಸಂಖ್ಯೆ ಹೆಚ್ಚಿತ್ತು. ಅದರಿಂದಾಗಿ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು.

ಬೆಳಿಗ್ಗೆಯಿಂದಲೇ ಸಾರ್ವಜನಿಕರು, ಬಸ್‌ ಹಾಗೂ ರೈಲು ನಿಲ್ದಾಣಗಳಿಗೆ ಹೊರಟಿದ್ದರು. ಮೆಜೆಸ್ಟಿಕ್‌, ಮಲ್ಲೇಶ್ವರ, ಚಿಕ್ಕಪೇಟೆ, ಕೋರಮಂಗಲ, ಹಳೇ ಮದ್ರಾಸ್‌ ರಸ್ತೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಿತ್ತು.

ಮೆಜೆಸ್ಟಿಕ್‌ ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಿತ್ತು. ಪ್ರತಿಯೊಬ್ಬರು ಊರಿಗೆ ಹೋಗುವ ಅವಸರದಲ್ಲಿದ್ದರು. ಕೆಲವರು ರಸ್ತೆಯಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ಓಡಿಸಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ಅಂಥ ವಾಹನಗಳ ಹಿಂದೆ, ಉಳಿದ ವಾಹನಗಳೆಲ್ಲ ಸಾಲುಗಟ್ಟಿ ನಿಲ್ಲುವಂತಾಯಿತು.

ಸಂಜೆ ಹಾಗೂ ರಾತ್ರಿ ವೇಳೆ ಸಂಚಾರ ದಟ್ಟಣೆ ಜಾಸ್ತಿ ಇತ್ತು. ಮೆಜೆಸ್ಟಿಕ್‌ ಸುತ್ತಮುತ್ತ ಒಂದು ಕಿ.ಮೀ ಕ್ರಮಿಸಲು 20 ನಿಮಿಷ ಬೇಕಾಯಿತು.

ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಮೈಸೂರು ರಸ್ತೆಯ ಸ್ಯಾಟ್‌ಲೈಟ್‌, ವಿಜಯನಗರ, ಯಶವಂತಪುರ ನಿಲ್ದಾಣಗಳಿಂದ ಬಸ್‌ಗಳು ಹೊರಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಹಲವರು ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಂದಿದ್ದರಿಂದ ಸಮಸ್ಯೆಯಾಯಿತು. ಅವರೆಲ್ಲ ಖಾಸಗಿ ವಾಹನಗಳ ಮೂಲಕ ಸ್ಯಾಟ್‌ಲೈಟ್‌, ವಿಜಯನಗರ, ಯಶವಂತಪುರ ನಿಲ್ದಾಣಗಳಿಗೆ ಹೋದರು.

ಬಹುಪಾಲು ಮಂದಿ ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಬಂದಿದ್ದರು. ಇದು ಸಹ ದಟ್ಟಣೆಗೆ ಕಾರಣವಾಯಿತು.

***
ಪಟಾಕಿ ಸಿಡಿಸುವಾಗ ಹೀಗೆ ಮಾಡಿ

* ಹತ್ತಿಯ ಬಟ್ಟೆಗಳನ್ನು ಧರಿಸಿ
* ಕಣ್ಣಿಗೆ ಸುರಕ್ಷಾ ಕನ್ನಡಕ ಮತ್ತು ಕಿವಿಯಲ್ಲಿ ಹತ್ತಿ ಇರಲಿ
* ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಜತೆಯಲ್ಲಿರಬೇಕು
* ಮೈದಾನದಲ್ಲಿ ಪಟಾಕಿ ಸಿಡಿಸಿ
* ಉದ್ದದ ಕೋಲಿಗೆ ಊದುಗಡ್ಡಿ ಕಟ್ಟಿ ಪಟಾಕಿ ಹಚ್ಚಿ
* ನೀರು ತುಂಬಿದ ಬಕೇಟ್‌ ಹತ್ತಿರದಲ್ಲಿ ಇರಲಿ

ಹೀಗೆ ಮಾಡಬೇಡಿ

* ಗ್ಯಾಸ್‌, ಸ್ಟವ್‌, ವಿದ್ಯುತ್‌ ಉಪಕರಣಗಳು ಇರುವ ಜಾಗದಲ್ಲಿ ಪಟಾಕಿ ಹಚ್ಚಬಾರದರು
* ಪಟಾಕಿಯನ್ನು ಕೈಯಲ್ಲಿ ಹಿಡಿದುಕೊಂಡು ಹಚ್ಚುವ ಸಾಹಸ ಮಾಡಬಾರದು
* ಸಿಡಿಯದ ಪಟಾಕಿಯನ್ನು ಪರೀಕ್ಷಿಸಬೇಡಿ
* ಜನಸಂದಣಿ ಇರುವ ಕಡೆ ಪಟಾಕಿ ಹಚ್ಚಬೇಡಿ
* ಬಾಟಲಿ ಮತ್ತು ಖಾಲಿ ಡಬ್ಬದಲ್ಲಿ ಸಿಡಿಸಬೇಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT