ಭಾನುವಾರ, ಸೆಪ್ಟೆಂಬರ್ 22, 2019
22 °C

ಇಂದಿರಾ ಕ್ಯಾಂಟೀನ್‌ಗೆ ಕಾರ್ಮಿಕರ ಸೆಸ್‌ ಬಳಕೆ?

Published:
Updated:

ಬೆಂಗಳೂರು: ರಾಜ್ಯದಾದ್ಯಂತ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಮುಂದಾಗಿರುವ ಸರ್ಕಾರ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಗೆ ಸಂಗ್ರಹಿಸಿದ ಸೆಸ್‌ ಅನ್ನು ಈ ಉದ್ದೇಶಕ್ಕೆ ಬಳಸಲು ಚಿಂತನೆ ನಡೆಸಿದೆ.

ಕಾರ್ಮಿಕರ ಕಲ್ಯಾಣ ನಿಧಿಗೆ ಸಂಗ್ರಹಿಸಿದ ಸೆಸ್‌ ಬಳಸಿ ಮೈಸೂರು ನಗರಪಾಲಿಕೆ ಮತ್ತು ಬೆಳಗಾವಿ ನಗರ ಪಾಲಿಕೆಯಲ್ಲಿ ಇಂದಿರಾ ಕ್ಯಾಂಟೀನ್‌ ನಡೆಸಿದರೆ, ಶೇ 40ರಷ್ಟು ಹಣವನ್ನು ಮರುಪಾವತಿಸುವ ಪ್ರಸ್ತಾವವನ್ನು ನಗರಾಭಿವೃದ್ಧಿ ಇಲಾಖೆ ಮುಂದಿಟ್ಟಿದೆ.

ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಸುಮಾರು ₹ 5,800 ಕೋಟಿ ಬಳಕೆಯಾಗದೆ ಉಳಿದಿದೆ. ಕಟ್ಟಡ ನಿರ್ಮಾಣ ವೆಚ್ಚದಲ್ಲಿ ಶೇ 1ರಷ್ಟನ್ನು ಕಾರ್ಮಿಕರ ಕಲ್ಯಾಣ ನಿಧಿಗೆ ಸಂಗ್ರಹಿಸಲಾಗುತ್ತಿದೆ.

ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಒಟ್ಟು 246 ಕ್ಯಾಂಟೀನ್‌ಗಳನ್ನು ತೆರೆಯಲು ನಗರಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಕ್ಯಾಂಟೀನ್‌ ಆರಂಭಿಸಲು ₹ 185 ಕೋಟಿ ವೆಚ್ಚ ಅಂದಾಜಿಸಲಾಗಿದೆ.

‘ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್‌ ಕಾಯ್ದೆ–1996’ರಲ್ಲಿ ಕಟ್ಟಡ ಕಾರ್ಮಿಕರಿಗೆ ಆಹಾರ ಒದಗಿಸಲು ಸೆಸ್‌ ಬಳಕೆ ಮಾಡಲು ಅವಕಾಶ ಇದೆ. ಹೀಗಾಗಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಈ ನಿಧಿ ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಈ ಕಾರಣಕ್ಕೆ ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ ಪ್ರಸ್ತಾವವನ್ನು ಒಪ್ಪಿಕೊಳ್ಳಲಾಗಿದೆ’ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ತಿಳಿಸಿದರು.

‘ಕಾರ್ಮಿಕರಿಗಾಗಿ ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲು ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದೂ ಬಿಸ್ವಾಸ್‌ ತಿಳಿಸಿದರು.

ರಾಜ್ಯದಲ್ಲಿ ಅಸಂಘಟಿತ ವಲಯದಲ್ಲಿರುವ 11.6 ಲಕ್ಷ ಕಾರ್ಮಿಕರು ಈ ಕಾಯ್ದೆಯಡಿ ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಬಹುತೇಕ ಕಾರ್ಮಿಕರು ಕಟ್ಟಡ ನಿರ್ಮಾಣ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು.

Post Comments (+)