ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರದಲ್ಲಿ ಪೋಷಕಾಂಶ ಕೊರತೆ

ರಾಷ್ಟ್ರೀಯ ಸಂಪನ್ಮೂಲಗಳ ಬ್ಯೂರೊ ನಿರ್ದೇಶಕರ ಕಳವಳ
Last Updated 19 ಅಕ್ಟೋಬರ್ 2017, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷಿ ಉತ್ಪಾದನೆ ಹೆಚ್ಚಿಸಲು ಕೆಲವೇ ಬೆಳೆಗಳನ್ನು ಮಾತ್ರ ಅವಲಂಬಿಸಿದ ಪರಿಣಾಮ, ನಾವು ಬಳಸುವ ಆಹಾರವೂ ಇಷ್ಟೇ ಬೆಳೆಗೆ ಸೀಮಿತವಾಗಿದೆ. ಇದರಿಂದ ಆಹಾರದಲ್ಲಿ ಪೌಷ್ಟಿಕಾಂಶ ಕಡಿಮೆಯಾಗಿ, ಹೆಚ್ಚಿನ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ’ ಎಂದು ರಾಷ್ಟ್ರೀಯ ಸಂಪನ್ಮೂಲಗಳ ಬ್ಯೂರೊ ನಿರ್ದೇಶಕ ಕುಲದೀಪ್‌ಸಿಂಗ್‌ ಕಳವಳ ವ್ಯಕ್ತಪಡಿಸಿದರು.

ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ‘ಸಮರ್ಥ ಬೆಳೆಗಳ 4ನೇ ವಾರ್ಷಿಕ ವಿಜ್ಞಾನಿಗಳ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು.

‘ಹೆಚ್ಚು ಬಳಕೆಯಾಗಿರದ, ವಿಶೇಷ ಪೌಷ್ಟಿಕ ಗುಣಗಳಿರುವ ವಿಶೇಷ ಬೆಳೆಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಜೈವಿಕ ವಿವಿಧತೆ ಮತ್ತು ಆಹಾರದ ವಿವಿಧತೆ ಹೊಂದಿರುವ ಬೆಳೆಗಳನ್ನು ಹೆಚ್ಚಿಸಿಕೊಂಡು ಅಪೌಷ್ಟಿಕತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದರು.

‘ಈ ವಿಶೇಷ ಬೆಳೆಗಳು ಹವಾಮಾನ ವೈಪರೀತ್ಯದಿಂದ ಉಂಟಾಗುವ ಬದಲಾವಣೆಗಳ ಪರಿಸ್ಥಿತಿಗೂ ಹೊಂದಿಕೊಂಡು ಸಮರ್ಥವಾಗಿ ಬೆಳೆಯುವ ಸಾಮರ್ಥ್ಯ ಹೊಂದಿವೆ. ಹೆಚ್ಚು ಪೋಷಕಾಂಶವುಳ್ಳ ‘ಬೀಜದ ದಂಟು’ ಬೆಳೆಯು ಬರಪರಿಸ್ಥಿತಿಯಲ್ಲಿಯೂ ಹೆಚ್ಚಿನ ಇಳುವರಿ ಕೊಡಬಲ್ಲದು. ರೈತರು ಈ ಬೆಳೆಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಉಪಯೋಗ ಪಡೆಯುವುದರಿಂದ ಅಪೌಷ್ಟಿಕತೆ ಸುಧಾರಿಸಬಹುದು’ ಎಂದು ತಿಳಿಸಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎಸ್‌.ಬಿ.ದಂಡಿನ್‌ ಮಾತನಾಡಿ, ‘ಪ್ರಕೃತಿಯಲ್ಲಿ ಹಲವಾರು ವಿಶೇಷ ಗುಣಗಳಿರುವ ಹಣ್ಣು, ತರಕಾರಿ ಹಾಗೂ ಔಷಧಿ ಬೆಳೆಗಳಿವೆ. ಇಂತಹ ಬೆಳೆಗಳ ಸಂರಕ್ಷಣೆ, ಬಳಕೆಮತ್ತು ಮಾರುಕಟ್ಟೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಚ್‌.ಶಿವಣ್ಣ ಮಾತನಾಡಿ, ‘ದೇಶದಲ್ಲಿ ಆಹಾರ ಸುಭದ್ರತೆ ಜತೆಗೆ ಪೌಷ್ಟಿಕ ಸುಭದ್ರತೆ ಸಾಧಿಸಲು
ಗಮನ ಕೊಡಬೇಕಿದೆ. ವಿಶೇಷ ಪೋಷಕಾಂಶ ಗುಣಗಳಿರುವ ಬೆಳೆಗಳನ್ನು ಗುರುತಿಸಿ, ಅವುಗಳ ಕೃಷಿ ಮತ್ತು ಮಾರುಕಟ್ಟೆಗೆ ಪೂರಕವಾಗು
ವಂತಹ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT