ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಹುಗ್ರಾಮ’ಗಳಲ್ಲಿ ಹೆಚ್ಚಿದ ನೀರಿನ ನಿರೀಕ್ಷೆ

Last Updated 20 ಅಕ್ಟೋಬರ್ 2017, 6:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಹಲವು ವರ್ಷ ಗಳ ಬಳಿಕ ಜಿಲ್ಲೆಯಲ್ಲಿ ಈ ಬಾರಿ ಭರಪೂರವಾಗಿ ಸುರಿದ ಮಳೆ ನೂರಾರು ಕೆರೆ– ಕಟ್ಟೆಗಳ ಕೋಡಿ ಹರಿಸುವ ಜತೆಗೆ ಜಲಾಶಯಗಳನ್ನು ತುಂಬಿ ತುಳುಕಿಸಿದ್ದು, ಕಳೆದ ಆರೇಳು ವರ್ಷಗಳಿಂದ ವರುಣನ ಜೂಜಾಟಕ್ಕೆ ಜರ್ಜರಿತರಾಗಿದ್ದ ರೈತಾಪಿ ವರ್ಗದ ಮೊಗದಲ್ಲಿ ಸಂತಸ ಕಳೆ ಮೂಡಿಸಿದೆ.

ಇದೇ ಹೊತ್ತಿನಲ್ಲಿ ಚಿತ್ರಾ ವತಿ ಮತ್ತು ವಂಡಮಾನ್‌ ಜಲಾ ಶಯಗಳು ‘ಭರ್ತಿ’ಯಾಗಿದ್ದು ‘ಹಿಂದುಳಿದ’ ತಾಲ್ಲೂಕಿನ ಹಣೆಪಟ್ಟಿ ಅಂಟಿಸಿ ಕೊಂಡಿರುವ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳ ಜನರಲ್ಲಿ ಬದುಕಿನ ಹೊಸ ಭರವಸೆ ಮೂಡಿಸಿದೆ. ಜಲಾಶಯದ ನೀರು ಕುಡಿಯಬೇಕೆಂಬ ಈ ಎರಡು ತಾಲ್ಲೂಕುಗಳ 190 ಗ್ರಾಮಗಳ ಜನರ ಬೇಡಿಕೆ ಈಡೇರುವಂತೆ ಕಾಣುತ್ತಿದೆ. ಶುದ್ಧ ಕುಡಿಯುವ ನೀರು ದೊರೆತೀತು ಎನ್ನುವ ಆಸೆ ಹುಟ್ಟಿಸಿದೆ.

‌ನಂದಿಬೆಟ್ಟದ ತಪ್ಪಲಲ್ಲಿ ಹುಟ್ಟಿ ನೆರೆಯ ಆಂಧ್ರದ ಬುಕ್ಕಾಪಟ್ಟಣ ಕೆರೆ ಸೇರುವ ಚಿತ್ರಾವತಿ ನೀರಿಗೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಪರಗೋಡು ಸಮೀಪ ಚಿತ್ರಾವತಿ ನದಿಗೆ ಅಡ್ಡಲಾಗಿ ಆಣೆಕಟ್ಟೆ ಕಟ್ಟಬೇಕು. ಆ ಜಲಾಶಯದಲ್ಲಿ ಸಂಗ್ರಹವಾಗುವ ನೀರನ್ನು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ 88 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಪರಿಕಲ್ಪನೆ 1999ರಲ್ಲಿ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮೊಳೆತಿತ್ತು.

ಈ ಸುದ್ದಿ ತಿಳಿಯುತ್ತಿದ್ದಂತೆ ಆಗ ಆಂಧಪ್ರದೇಶದ ಚಂದ್ರಬಾಬು ನಾಯ್ಡು, ಯರ್ರಂ ನಾಯ್ಡು, ಪೆರಿಟಾಲ ರವಿ ಮತ್ತಿತರ ರಾಜಕಾರಣಿಗಳು ಯೋಜನೆ ನಿಲ್ಲಿಸುವಂತೆ ಸಂಸತ್‌ನಲ್ಲಿ ದೊಡ್ಡ ಗಲಾಟೆ ಮಾಡಿದ್ದರು. ಬಾಗೇಪಲ್ಲಿ ಶಾಸಕರಾಗಿದ್ದ ಎನ್‌.ಸಂಪಂಗಿ ಅವರು ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರ ಮೇಲೆ ಒತ್ತಾಯ ಹೇರಿ ದೆಹಲಿಗೆ ನಿಯೋಗ ಒಯ್ದಿದ್ದರು. ನಂತರ ಕೇಂದ್ರ ಸರ್ಕಾರಕ್ಕೆ ಸಮಸ್ಯೆ ಮನವರಿಕೆ ಮಾಡಿಕೊಟ್ಟಿದ್ದರು.

ಅಲ್ಲದೆ ಕೇಂದ್ರದಿಂದ ‘ರಾಜೀವ್‌ ಗಾಂಧಿ ಕುಡಿಯುವ ನೀರು ಯೋಜನೆ’ಯಡಿ ಶಾಶ್ವತ ಶುದ್ಧ ಕುಡಿಯುವ ನೀರಿನ ಯೋಜನೆಗಾಗಿ ಅನುದಾನ ಕೂಡ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

2003ರ ಏಪ್ರಿಲ್‌ 16ರಂದು ಎಸ್‌.ಎಂ.ಕೃಷ್ಣ ಅವರು ₹ 9 ಕೋಟಿ ವೆಚ್ಚದಲ್ಲಿ ಚಿತ್ರಾವತಿಗೆ 40 ಅಡಿ ಎತ್ತರ ಆಣೆಕಟ್ಟೆ ಕಟ್ಟುವ ಯೋಜನೆಗೆ ಚಾಲನೆ ನೀಡಿದ್ದರು. 2004ರಲ್ಲಿ ಆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಅದರ ಬೆನ್ನಲೇ ಅದೇ ವರ್ಷ 577 ಎಕರೆ ವಿಸ್ತೀರ್ಣದ 3,00,263 ಲಕ್ಷ ಲೀಟರ್‌ ನೀರು ಶೇಖರಣಾ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಮೊದಲ ಬಾರಿಗೆ ಶೇಖರಣೆಯಾದ ನೀರನ್ನು ಗುಡಿಬಂಡೆ, ಬಾಗೇಪಲ್ಲಿ ಪಟ್ಟಣಗಳಿಗೆ ಹರಿಸಿದಾಗ ಆ ಜನರ ಹರ್ಷಕ್ಕೆ ಪಾರವೇ ಇರಲಿಲ್ಲ.

2013ರಲ್ಲಿ ಚಿತ್ರಾವತಿ ಜಲಾಶಯದ ನೀರನ್ನು 88 ರಿಂದ 128ಕ್ಕೆ ಗ್ರಾಮಗಳಿಗೆ ವಿಸ್ತರಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಚಾಲನೆ ನೀಡಿದ್ದರು. ಆದರೆ ಈವರೆಗೆ ಬಾಗೇಪಲ್ಲಿ ತಾಲ್ಲೂಕಿನ 73 ಮತ್ತು ಗುಡಿಬಂಡೆ ತಾಲ್ಲೂಕಿನ 55 ಗ್ರಾಮಗಳಿಗೆ ಈ ಜಲಾಶಯದ ತೊಟ್ಟು ನೀರು ಹರಿದಿಲ್ಲ.

ಕಳೆದ ಆರು ವರ್ಷಗಳ ಬಳಿಕ ಇದೀಗ ಮೊದಲ ಬಾರಿ ಚಿತ್ರಾವತಿ ಜಲಾಶಯ ಉಕ್ಕಿ ಹರಿದಿದೆ. ಅದರೊಂದಿಗೆ ಚೆಂಡೂರು, ದಪರ್ತಿ, ಹಂಪಸಂದ್ರ, ಕಾರ್ಕೂರು, ಪರಗೋಡು, ತಟ್ಟಹಳ್ಳಿ, ಶ್ರೀನಿವಾಸಪುರ ಸೇರಿದಂತೆ ನೀರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ನೂರಾರು ಗ್ರಾಮಗಳ ಜನರಲ್ಲಿ ಸಂತಸದ ಕೋಡಿ ಹರಿದಿದೆ. ಸದ್ಯ ನೀರು ಹರಿಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT