ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಕರ್ಯ ವಂಚಿತರ ಕತ್ತಲ ಬದುಕು

Last Updated 20 ಅಕ್ಟೋಬರ್ 2017, 7:37 IST
ಅಕ್ಷರ ಗಾತ್ರ

ಬಂಗಾರಪೇಟೆ: ನಾಲ್ಕು ದಶಕಗಳಿಂದ ಗುಡಿಸಿಲಲ್ಲೇ ವಾಸ. ಮಳೆಗೆ ನೆನೆಯುವ ಅನಿವಾರ್ಯ ಸ್ಥಿತಿ. ಪಟ್ಟಣದಲ್ಲಿದ್ದರೂ ಕತ್ತಲಲ್ಲೇ ಜೀವನ– ಇದು ಪಟ್ಟಣದ 16ನೇ ವಾರ್ಡ್‌ನ ಟ್ಯಾಂಕ್ ರಸ್ತೆಯ ಗುಡಿಸಿಲು ವಾಸಿಗಳ ದುಸ್ಥಿತಿಯ ಜೀವನ.

ಪಟ್ಟಣದ ಕಾರಹಳ್ಳಿ ವೃತ್ತದಿಂದ ಕೆರೆಕೋಡಿ ವಾರ್ಡ್‌ಗೆ ಹೋಗುವ ಮಾರ್ಗದ ಕೆರೆ ಕಟ್ಟೆ ಅಂಚಿನಲ್ಲೆ ಇವರ ವಾಸ. ಸುಮಾರು 15 ಗುಡಿಸಿಲುಗಳಲ್ಲಿ 60 ಜನ ವಾಸವಿದ್ದಾರೆ. ಮೂಲ ಸೌಕರ್ಯದಿಂದ ವಂಚಿತರಾಗಿರುವ ಇವರು, ಸುಮಾರು 40 ವರ್ಷದಿಂದ ಇದೇ ಜಾಗದಲ್ಲಿದ್ದರೂ, ನಿವೇಶನದ ಭಾಗ್ಯ ಮಾತ್ರ ಇನ್ನೂ ದೊರೆತಿಲ್ಲ.

ಪಟ್ಟಣದಲ್ಲಿ ಪ್ರತಿವರ್ಷ ಸಡಗರದಿಂದ ದೀಪಗಳ ಹಬ್ಬದ ಆಚರಣೆ ನಡೆಯುತ್ತದೆ. ಆದರೆ ಈ ಕುಟುಂಬಗಳು 4 ದಶಕಗಳಿಂದ ಬೆಳಕನ್ನೇ ಕಂಡಿಲ್ಲ. ವರ್ಷಕ್ಕೆ ಮುನ್ನ ಇಲ್ಲಿದ್ದ ಎರಡು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಅಂದಿನಿಂದ ಬೀದಿ ದೀಪಗಳು ಇಲ್ಲದೆ ರಾತ್ರಿಯಿಡೀ ಕತ್ತಲಲ್ಲೇ ಕಾಲ ಕಳೆಯುವ ಪರಿಸ್ಥಿತಿ ಒದಗಿದೆ.

ಕೂಲಿ ಮಾಡಿದರೆ ಮಾತ್ರ ತುತ್ತಿನ ಚೀಲ ತುಂಬಿಸಿಕೊಳ್ಳುವ ಸ್ಥಿತಿ. ಬಡವರಿಗಾಗಿ ಸರ್ಕಾರ ಅಕ್ಕಿಭಾಗ್ಯ, ವಸತಿ ಭಾಗ್ಯ ಸೇರಿದಂತೆ ಹಲ ಯೋಜನೆಗಳು ಜಾರಿಮಾಡಿದೆ. ಅದ್ಯಾವುದೂ ಇವರ ಪಾಲಿಗೆ ಇಲ್ಲದಿರುವುದು ವಿಪರ್ಯಾಸವೇ ಸರಿ.

ಎಲ್ಲ ಕುಟುಂಬದ ಸದಸ್ಯರ ಬಳಿ ಆಧಾರ್ ಕಾರ್ಡ್, 18 ವರ್ಷ ತುಂಬಿದವರ ಬಳಿ ಚುನಾವಣೆ ಗುರುತಿನ ಚೀಟಿ ಇದೆ. ಆದರೆ 5 ಕುಟುಂಬಕ್ಕೆ ಮಾತ್ರ ಪಡಿತರ ದಕ್ಕಿದೆ. ಉಳಿದವರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದು, ಇದುವರೆಗೂ ನೀಡಿಲ್ಲ ಎನ್ನುತ್ತಾರೆ ನಿವಾಸಿ ವೆಂಕಟೇಶಪ್ಪ.

ಶೌಚಾಲಯ ವ್ಯವಸ್ಥೆ ಇಲ್ಲ. ಮಹಿಳೆಯರು ನಿತ್ಯಕರ್ಮ ಮುಗಿಸಲು ಪಡುವ ವೇದನೆ ಹೇಳತೀರದು. ಮಕ್ಕಳಿಗೆ ಕೆರೆ ಕಟ್ಟೆ ಮೇಲಿನ ಜಾಗವೇ ಶೌಚಾಲಯ. ಕೋಲಾರ ಬಹಿರ್ದೆಸೆ ಮುಕ್ತ ಜಿಲ್ಲೆ ಎನ್ನುವ ಹೆಗ್ಗಳಿಕೆ ಪಡೆದಿದೆ. ಮನೆ ಮಠ ಇಲ್ಲದೆ ಇಂತಹ ನೂರಾರು ಕುಟುಂಬಗಳ ಅನುಕೂಲಕ್ಕೆ ಏನು ಕ್ರಮ ಕೈಗೊಂಡಿದೆ ಎನ್ನವುದು ಅವರ ಪ್ರಶ್ನೆ.

ನಿವೇಶನಕ್ಕಾಗಿ ಎರಡೂವರೆ ದಶಕದಿಂದ ಜನಪ್ರತಿನಿಧಿಗಳಿಗೆ ಮೊರೆಯಿಡಲಾಗಿದೆ. ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ವಸತಿ ಯೋಜನೆಯಡಿ ಅನುಕೂಲ ಇರುವವರಿಗೆ ಮನೆ ನೀಡುತ್ತಿರುವ ಪುರಸಭೆ ನಮ್ಮಂಥ ನಿರ್ಗತಿಕರನ್ನು ಗುರುತಿಸುತ್ತಿಲ್ಲ ಏಕೆ ಎಂದು ನಿವಾಸಿ ಕುಳ್ಳಮ್ಮ ಬೇಸರ ವ್ಯಕ್ತಪಡಿಸುತ್ತಾರೆ.

ಪಟ್ಟಣದ ಈ ಗುಡಿಸಿಲುವಾಸಿಗಳ ಚಿತ್ರಣ ಒಂದು ಉದಾಹರಣೆಯಷ್ಟೆ. ರಾಮಕೃಷ್ಣ ಹೆಗಡೆ ಕಾಲೋನಿ, ಕುಂಬಾರಪಾಳ್ಯ, ಸಿ.ರಹೀಂ ಬಡಾವಣೆ, ಸಂಜಯಗಾಂದಿ ನಗರ, ಸಿದ್ಧಾರ್ಥ ನಗರ ಸೇರಿದಂತೆ ಪಟ್ಟಣದ ನೂರಾರು ಕುಟುಂಬಗಳ ಸ್ಥಿತಿ ಅವರಿಗಿಂತ ಭಿನ್ನವಾಗಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT