ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಮಳೆಯಿಂದ ಶಿಂಷೆಗೆ ಜೀವ ಕಳೆ

Last Updated 20 ಅಕ್ಟೋಬರ್ 2017, 8:45 IST
ಅಕ್ಷರ ಗಾತ್ರ

ಮದ್ದೂರು: 12 ವರ್ಷಗಳ ಬಳಿಕ ತಾಲ್ಲೂಕಿನ ಜೀವನದಿ ಶಿಂಷಾ ಒಡಲಿಗೆ ಜೀವ ಕಳೆ ಬಂದಿದೆ. ಮಳೆರಾಯನ ಮುನಿಸಿನಿಂದಾಗಿ ಬತ್ತಿದ್ದ ನದಿಯ ಒಡಲು, ಈಚೆಗೆ ಸುರಿದ ಸತತ ಮಳೆಯಿಂದಾಗಿ ತುಂಬಿದೆ. ಭೋರ್ಗರೆಯುತ್ತ ಹರಿಯುತ್ತ ರೈತರ ಖುಷಿ ಹೆಚ್ಚಿಸಿದೆ.

ತುಮಕೂರು ತಾಲ್ಲೂಕಿನ ಕುಣಿಗಲ್‌ ತಾಲ್ಲೂಕಿನ ದೇವರಾಯನದುರ್ಗ ಗಿರಿ ಪ್ರದೇಶದಲ್ಲಿ ಹುಟ್ಟುವ ಶಿಂಷೆ 282 ಕಿ.ಮೀ ಹರಿಯುತ್ತಾಳೆ. ಕುಣಿಗಲ್‌ ಮೂಲಕ ತಾಲ್ಲೂಕು ಪ್ರವೇಶಿಸುವ ಈ ನದಿ ಮುತ್ತತ್ತಿ ಬಳಿ ಕಾವೇರಿ ನದಿಗೆ ಸೇರುತ್ತದೆ.

ಕುಣಿಗಲ್‌ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆ ಸುರಿದಿರುವುದರಿಂದ ನಿತ್ಯ 1,500 ಕ್ಯೂಸೆಕ್‌ ಗಳಷ್ಟು ನೀರು ಬರುತ್ತಿದೆ. ಇದರಿಂದ ಇಗ್ಗಲೂರು ಜಲಾಶಯ ಸೇರಿದಂತೆ ಈ ವ್ಯಾಪ್ತಿಯ 15 ಕ್ಕೂ ಹೆಚ್ಚು ಚೆಕ್‌ ಡ್ಯಾಂಗಳು ಭರ್ತಿಯಾಗಿರುವುದು ರೈತರ ಸಂತಸದ ಎಲ್ಲೆ ಮೀರಿಸಿದೆ. ಇದಲ್ಲದೇ ಗಾಣಾಳು ಬಳಿ ಇರುವ ‘ಬೆಂಕಿ ಜಲಪಾತ’ವೂ ಮೈದುಂಬಿದೆ.

ಈ ನದಿ ವ್ಯಾಪ್ತಿಯಲ್ಲಿ 18 ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗತ್ತು. ಆದರೆ, ಅವುಗಳಲ್ಲಿ ಕೆಲವು ಹಾಳಾಗಿದ್ದು, ಇನ್ನಷ್ಟು ಚಾಲನೆಯಲ್ಲಿವೆ.
ಇದೀಗ ಯಥೇಚ್ಛ ನೀರಿನ ಲಭ್ಯತೆಯಿಂದಾಗಿ ಈ ಯೋಜನೆಗಳಿಗೆ ಚಾಲನೆ ದೊರಕಿದೆ. ಈ ಮೂಲಕ ತಾಲ್ಲೂಕಿನ ಹಲವು ಕೆರೆಗಳು ಭರ್ತಿಯಾಗುತ್ತಿವೆ.

ಚಿಕ್ಕರಸಿನಕೆರೆ ಏತ ಪುನಶ್ಚೇತನಕ್ಕಾಗಿ ₹ 17 ಕೋಟಿ ಬಿಡುಗಡೆಗೊಂಡಿದೆ. ಅಣ್ಣೂರು ಹಾಗೂ ಕದಲೂರು ಏತ ಪುನಶ್ಚೇತನಕ್ಕಾಗಿ ತಲಾ ₹ 3 ಕೋಟಿ ಬಿಡುಗಡೆಗೊಂಡಿದ್ದು, ಸದ್ಯದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ.

‘ನದಿಯಿಂದ ಕೆಸ್ತೂರು ವ್ಯಾಪ್ತಿಯ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹ 45 ಕೋಟಿ, ಕೆ.ಹೊನ್ನಲಗೆರೆ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹ 77 ಕೋಟಿ ಸರ್ಕಾರದಿಂದ ಬಿಡುಗಡೆಗೊಂಡು ಟೆಂಡರ್‌ ಹಂತದಲ್ಲಿದೆ. ಈ ಎರಡು ಯೋಜನೆಗಳು ಅನುಷ್ಠಾನಗೊಂಡರೆ ತಾಲ್ಲೂಕಿನ ಬಹುತೇಕ ಕೆರೆಗಳು ತುಂಬಲಿವೆ.

ಈ ಮೂಲಕ ಅಂತರ್ಜಲ ಪ್ರಮಾಣವೂ ಹೆಚ್ಚಲಿದೆ. ಇದಲ್ಲದೇ ಕೆಸ್ತೂರು, ಬೆಸಗರಹಳ್ಳಿ, ಮಠದದೊಡ್ಡಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ಚಾಲ್ತಿಯಲ್ಲಿದ್ದು, ಜನರ ಕುಡಿಯುವ ನೀರಿನ ಬವಣೆಯೂ ಪೂರ್ಣವಾಗಿ ನೀಗಲಿದೆ’ ಎನ್ನುತ್ತಾರೆ ಮುಖಂಡ ಬ್ಯಾಡರಹಳ್ಳಿ ಶಿವಕುಮಾರ್‌.

ಮಲಿನ ನೀರು: ಶಿಂಷಾ ನದಿ ತುಂಬಿದ ಬೆನ್ನ ಹಿಂದೆಯೇ ನದಿಯ ಮಾಲಿನ್ಯವೂ ಹೆಚ್ಚಿದೆ. ಪಟ್ಟಣದ ಒಳಚರಂಡಿ ನೀರನ್ನು ನದಿಗೆ ಸಂಪರ್ಕಿಸಿರುವ ಪರಿಣಾಮ ನದಿ ಮಲಿನಗೊಳ್ಳುತ್ತಿದೆ. ನದಿ ಒಡಲು ಸೇರುತ್ತಿರುವ ಮಲಿನ ನೀರು ತಡೆಗಾಗಿ 2ನೇ ಹಂತದ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಈ ಘಟಕ ಸ್ಥಾಪನೆಗೊಂಡರೆ ಕೊಳಚೆ ನೀರು ಶುದ್ಧೀಕರಿಸಿ ನದಿಗೆ ಬಿಡದೇ, ಆ ನೀರನ್ನು ರೈತರ ಜಮೀನುಗಳಿಗೆ ಹರಿಸಲು ಯೋಜಿಸಲಾಗಿದೆ ಎನ್ನುತ್ತಾರೆ ಶಾಸಕ ಡಿ.ಸಿ.ತಮ್ಮಣ್ಣ. ಮರಳು ಗಣಿಗಾರಿಕೆಗೆ ಬ್ರೇಕ್‌: ನದಿ ತುಂಬಿ ಹರಿಯುತ್ತಿರುವುದರಿಂದ ಅಕ್ರಮ ಮರಳು ಗಣಿಗಾರಿಕೆಗೆ ಬ್ರೇಕ್‌ ಬಿದ್ದಿದೆ.

ಹತ್ತಾರು ವರ್ಷಗಳಿಂದ ನೀರಿಲ್ಲದ ನದಿಯಲ್ಲಿ ಅಕ್ರಮವಾಗಿ ಮರಳು ಬಗೆದ ಪರಿಣಾಮ ನದಿ ದಂಡೆಗಳು ಕೊಚ್ಚಿ ಹೋಗಿದ್ದು ನದಿಯ ಹರವು ವಿಸ್ತಾರಗೊಂಡಿದೆ. ಕಂದಕಗಳು ಸೃಷ್ಟಿಯಾಗಿವೆ. ‘ನಮ್ಮೂರ ಹೊಳೆ ತುಂಬಿ 12 ವರ್ಷಕ್ಕೂ ಹೆಚ್ಚು ಕಾಲವಾಗಿತ್ತು. ದೇವರ ಕೃಪೆಯಿಂದ ಮಳೆ ಬಂದು ನದಿ ತುಂಬಿರುವುದನ್ನು ನೋಡಿ ಖುಷಿಯಾಗುತ್ತಿದೆ’ ಎಂದು ವೈದ್ಯನಾಥಪುರ ಗ್ರಾಮದ ವಿ.ಟಿ.ಶಿವರಾಜು ಸಂತಸ ವ್ಯಕ್ತಪಡಿಸಿದರು. ಒಟ್ಟಾರೆ ಬತ್ತಿದ್ದ ಶಿಂಷೆಯ ಒಡಲು ತುಂಬಿ ತೊನೆಯುತ್ತಿರುವುದು ಈ ಭಾಗದ ಜನ ಜಾನುವಾರು, ಜೀವ ಸಂಕುಲಕ್ಕೆ ಹೊಸ ಚೈತನ್ಯ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT