ಸ್ತನಕ್ಯಾನ್ಸರ್ ನಿಮಗಿಷ್ಟು ತಿಳಿದಿರಲಿ...

7

ಸ್ತನಕ್ಯಾನ್ಸರ್ ನಿಮಗಿಷ್ಟು ತಿಳಿದಿರಲಿ...

Published:
Updated:
ಸ್ತನಕ್ಯಾನ್ಸರ್ ನಿಮಗಿಷ್ಟು ತಿಳಿದಿರಲಿ...

ಆಸ್ಪತ್ರೆಯ ನನ್ನ ಕೊಠಡಿಯಲ್ಲಿ ಕುಳಿತಿದ್ದೆ. ನನ್ನ ಸಹಾಯಕಿ ಬಂದು, 'ಮೇಡಂ ನಿಮ್ಮನ್ನು ನೋಡಲು ಮಹಿಳೆಯೊಬ್ಬರು ಬಂದಿದ್ದಾರೆ' ಎಂದಾಗ ಒಳಗೆ ಕಳುಹಿಸಲು ಹೇಳಿದ್ದೆ. ಆದರೆ ಒಳಗೆ ಬಂದ ಆ ಮಹಿಳೆ ಯಾರೆಂದು ನನಗೆ ಪಕ್ಕನೆ ಗೊತ್ತಾಗಲಿಲ್ಲ. ಆಕೆಯೇ ತನ್ನ ಪರಿಚಯ ಹೇಳಿದ್ದಳು. ಸುಮಾರು ಹತ್ತು ವರ್ಷಗಳ ಹಿಂದೆ ನಾನು ಆಕೆಗೆ ಸ್ತನದ ಗಂಟಿನ ಸೂಜಿಪರೀಕ್ಷೆ ಮಾಡಿದ್ದೆನೆಂದೂ, ಅದು ಕ್ಯಾನ್ಸರ್ ಗಡ್ಡೆಯ ಗುಣಲಕ್ಷಣಗಳನ್ನು ಹೊಂದಿದೆಯೆಂಬ ವರದಿಯನ್ನು ಕೊಟ್ಟಿದ್ದೆನೆಂದೂ ತಿಳಿಸಿದಳು.

ನಂತರ ಆಕೆ ಬೆಂಗಳೂರಿನ ಕ್ಯಾನ್ಸರ್ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಔಷಧೋಪಚಾರ ಪಡೆದದ್ದಾಗಿಯೂ, ಇದೀಗ ಸಂಪೂರ್ಣ ಆರೋಗ್ಯಕರ ಜೀವನ ಸಾಗಿಸುತ್ತಿರುವುದಾಗಿಯೂ ತಿಳಿಸಿದಳು. ಈ ಕಡೆ ಯಾವುದೋ ಕೆಲಸದ ನಿಮಿತ್ತ ಬಂದವಳಿಗೆ ನನ್ನ ನೆನಪಾಗಿ ನನ್ನನ್ನು ನೋಡಲು ಬಂದಿದ್ದಳಷ್ಟೆ.

ಹೌದು, ಪ್ರಾಥಮಿಕ ಹಂತಗಳಲ್ಲಿಯೇ ಸ್ತನಕ್ಯಾನ್ಸರ್ ಅನ್ನು ಪತ್ತೆ ಮಾಡಿದರೆ ಅದನ್ನು ಸಂಪೂರ್ಣ ಗುಣಪಡಿಸಬಹುದು ಎಂಬುವುದಕ್ಕೆ ಇದೊಂದು ಜೀವಂತ ಉದಾಹರಣೆ ಎಂದರೆ ತಪ್ಪಾಗಲಾರದು.

ಯಾವುದೇ ಕ್ಯಾನ್ಸರ್‌ನಂತೆ ಸ್ತನಕ್ಯಾನ್ಸರ್‌ನ ಚಿಕಿತ್ಸೆಯೂ ಸಹ ಪ್ರಾಥಮಿಕ ಹಂತಗಳಲ್ಲಿ ಸುಲಭ, ಸರಳ ಹಾಗೂ ಕಡಿಮೆ ವೆಚ್ಚದ್ದಾಗಿರುತ್ತದೆ. ಆದರೆ, ಪ್ರಾಥಮಿಕ ಹಂತಗಳಲ್ಲಿ ಇದನ್ನು ಪತ್ತೆ ಹಚ್ಚುವುದು ಹೇಗೆ? ಈ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲೆಂದೇ ಪ್ರತಿ ವರ್ಷವೂ ಅಕ್ಟೋಬರ್ ತಿಂಗಳನ್ನು ಸ್ತನಕ್ಯಾನ್ಸರ್ ಜಾಗೃತಿ ಮಾಸವೆಂದು ಆಚರಿಸಲಾಗುತ್ತದೆ.

ಪ್ರತಿ ವರ್ಷವೂ ವಿಶ್ವದಾದ್ಯಂತ 138ದಶಲಕ್ಷ ಮಹಿಳೆಯರು ಸ್ತನಕ್ಯಾನ್ಸರ್‌ನಿಂದ ಬಳಲುವುದನ್ನು ಹೊಸದಾಗಿ ಪತ್ತೆ ಹಚ್ಚಲಾಗುತ್ತಿದ್ದರೆ, ಸುಮಾರು ನಾಲ್ಕು ಲಕ್ಷದ ಐವತ್ತೆಂಟು ಸಾವಿರ ಸ್ತನಕ್ಯಾನ್ಸರ್‌ನಿಂದ ಬಳಲುವ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಇದು ಮಹಿಳೆಯರನ್ನು ಕಾಡುವ ಮುಖ್ಯ ಕ್ಯಾನ್ಸರ್ ಎಂದೇ ಹೇಳಬಹುದು.

ಸ್ತನಕ್ಯಾನ್ಸರ್‌ಗೆ ಕಾರಣಗಳೇನು?‌

ಸ್ತನಕ್ಯಾನ್ಸರ್‌ಗೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲ. ಆದರೆ ಕೆಲವು ಅಂಶಗಳನ್ನು ಅಪಾಯಕರ ಅಂಶಗಳೆಂದು ಆರೋಗ್ಯತಜ್ಞರು ಗುರುತಿಸಿದ್ದಾರೆ. ಅವೆಂದರೆ ಅನುವಂಶೀಯತೆ (ವಂಶವಾಹಿಗಳು), ಭೌಗೋಳಿಕ ಅಂಶಗಳು, ಬೊಜ್ಜು, ಆಹಾರದಲ್ಲಿ ಅಧಿಕ ಕೊಬ್ಬಿನಾಂಶದ ಸೇವನೆ, ಅಧಿಕ ಮದ್ಯಪಾನ, ಶರೀರದಲ್ಲಿನ ಹಾರ್ಮೋನುಗಳಲ್ಲಿನ ಏರುಪೇರು ಮುಂತಾದವುಗಳು. 

ಪ್ರಾಥಮಿಕ ಹಂತಗಳಲ್ಲಿಯೇ ಸ್ತನಕ್ಯಾನ್ಸರ್ ಅನ್ನು ಪತ್ತೆ ಮಾಡುವುದು ಹೇಗೆ?

ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್ ಹಾಗೂ ಮ್ಯಾಮೋಗ್ರ್ಯಾಫಿ ಪರೀಕ್ಷೆಗಳು ಸ್ತನಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತಗಳಲ್ಲಿಯೇ ಪತ್ತೆ ಹಚ್ಚುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ.

ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಶನ್: ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬ ಮಹಿಳೆಯೂ ಸ್ವತಃ ತನ್ನ ಸ್ತನಗಳನ್ನು ತಿಂಗಳಿಗೊಮ್ಮೆ ಪರೀಕ್ಷಿಸಿಕೊಳ್ಳಬೇಕು. ಇದನ್ನು ಪ್ರತಿ ತಿಂಗಳ ಋತುಸ್ರಾವದ ನಂತರ ಮಾಡಿಕೊಳ್ಳುವುದು ಸೂಕ್ತ.

ಸ್ತನಗಳ ಸ್ವ ಪರೀಕ್ಷೆಯನ್ನು ಎರಡು ಭಾಗಗಳಲ್ಲಿ ಮಾಡಿಕೊಳ್ಳಬೇಕು.

ಮೊದಲ ಭಾಗ: ಕನ್ನಡಿಯ ಮುಂದೆ ಮೂರು ಭಂಗಿಗಳಲ್ಲಿ ನಿಂತು ಸ್ತನಗಳನ್ನು ಪರೀಕ್ಷಿಸಿಕೊಳ್ಳಬೇಕು. ಮೊದಲನೆಯದಾಗಿ ನೇರವಾಗಿ ಕೈಗಳನ್ನು ದೇಹದ ಪಕ್ಕದಲ್ಲಿರಿಸಿ, ಎರಡನೆಯದಾಗಿ ಕೈಗಳನ್ನು ಭುಜಗಳ ಮೇಲೆ ಚಾಚಿ, ದೇಹವನ್ನು ಸ್ವಲ್ಪ ಮುಂದಕ್ಕೆ ಭಾಗಿಸಿ, ಕಡೆಯದಾಗಿ ಎರಡೂ ಕೈಗಳನ್ನು ಸೊಂಟದ ಮೇಲಿರಿಸಿ ದೇಹವನ್ನು ಸ್ವಲ್ಪ ಮುಂದಕ್ಕೆ ಭಾಗಿಸಿ ನಿಂತು ಕೆಲವು ಅಂಶಗಳಿಗಾಗಿ ಎರಡೂ ಸ್ತನಗಳನ್ನು ಗಮನಿಸಬೇಕು. ಅವೆಂದರೆ, ಬಲ ಹಾಗೂ ಎಡ ಸ್ತನಗಳ ಗಾತ್ರದಲ್ಲಿ ವ್ಯತ್ಯಾಸ, ಸ್ತನದ ಮೇಲಿನ ಚರ್ಮದ ಮೇಲೆ ಅಸಹಜ ಕೆಂಪಾಗುವಿಕೆ, ಸ್ತನದ ಚರ್ಮವು ತೀರ ಒಣಗಿದಂತಾಗಿರುವುದು, ಸ್ತನದ ಚರ್ಮವು ಒಳಕ್ಕೆ ಎಳೆದುಕೊಂಡಂತಾಗಿರುವುದು, ಚರ್ಮದ ಮೇಲಿನ ಅಸಹಜ ಉಬ್ಬಿದ ರಕ್ತನಾಳಗಳಿರುವುದು. ಸ್ತನಗಳ ತೊಟ್ಟುಗಳ ಗಾತ್ರದಲ್ಲಿ ವ್ಯತ್ಯಾಸ, ತೊಟ್ಟುಗಳು ಒಳಕ್ಕೆ ಎಳೆದುಕೊಂಡಂತಾಗಿರುವುದು, ಸ್ತನಗಳ ತೊಟ್ಟಿನಿಂದ ದ್ರವದಂತಹ ವಸ್ತು ಅಥವಾ ರಕ್ತ ಸ್ರವಿಸುವಿಕೆ. ಈ ರೀತಿಯ ಅಸಹಜ ಲಕ್ಷಣಗಳನ್ನು ಗಮನಿಸಿದರೆ ಕೂಡಲೇ ವೈದ್ಯರ ಸಲಹೆಯನ್ನು ಪಡೆಯಬೇಕು.

ಎರಡನೆಯ ಭಾಗ: ಮಹಿಳೆಯು ಸಮತಟ್ಟಾದ ಹಾಸಿನ ಮೇಲೆ ಮಲಗಿಕೊಳ್ಳಬೇಕು. ಮೊದಲು ದೇಹವನ್ನು ಸ್ವಲ್ಪ ಎಡಕ್ಕೆ ಹೊರಳಿಸಬೇಕು. ಈಗ ಬಲಗೈಯನ್ನು ತಲೆಯ ಹಿಂಭಾಗಕ್ಕೆ ಒಯ್ಯಬೇಕು. ಬಲಭಾಗದ ಸೊಂಟ ಮತ್ತು ಭುಜದ ಕೆಳಗೆ ಸಣ್ಣ ದಿಂಬನ್ನು ಇಟ್ಟು, ಬಲ ಸ್ತನವು ದೇಹದ ಮೇಲೆ ಮೇಲ್ಮುಖವಾಗಿರುವಂತಿರಬೇಕು. ಈಗ ಎಡ ಅಂಗೈಯ ಮಧ್ಯದ ಮೂರು ಬೆರಳುಗಳನ್ನು ಜೊತೆಯಾಗಿ ಹಿಡಿದು ಬಲ ಸ್ತನವನ್ನು ಮುಟ್ಟಿ ಪರೀಕ್ಷಿಸಿಕೊಳ್ಳಬೇಕು. ಮೊದಲು ಬಲ ಸ್ತನದ ಬಲ ಭಾಗದಿಂದ ಮುಟ್ಟಿಕೊಳ್ಳಲು ಪ್ರಾರಂಭಿಸಬೇಕು. ಸ್ತನದ ಪ್ರತಿಯೊಂದು ಅಂಗುಲವನ್ನೂ ಎಡ ಅಂಗೈನ ಸಹಾಯದಿಂದ ವೃತ್ತಾಕಾರವಾಗಿ ನಿಧಾನವಾಗಿ ಒತ್ತಿ ಮುಟ್ಟುತ್ತಾ ಪರೀಕ್ಷಿಸಿಕೊಳ್ಳಬೇಕು.

ಈಗ ದೇಹವನ್ನು ಸ್ವಲ್ಪ ಬಲಕ್ಕೆ ತಿರುಗಿಸಿ, ಇದೇ ರೀತಿ ಎಡ ಸ್ತನವನ್ನೂ ಪರೀಕ್ಷಿಸಿಕೊಳ್ಳಬೇಕು. ಹೀಗೆ ಮುಟ್ಟಿ ಪರೀಕ್ಷಿಸಿಕೊಳ್ಳುವಾಗ ಗಡ್ಡೆ ಅಥವಾ ಗಂಟು ಎನಿಸಿದರೆ ಕೂಡಲೇ ನಿಮ್ಮ ಹತ್ತಿರದ ಶಸ್ತ್ರಚಿಕಿತ್ಸಾ ತಜ್ಞರ ಸಲಹೆಯನ್ನು ಪಡೆಯಬೇಕು.

ಮ್ಯಾಮೋಗ್ರ್ಯಾಫಿ ಪರೀಕ್ಷೆ

ನಲವತ್ತು ವರ್ಷ ಮೇಲ್ಪಟ್ಟ ಎಲ್ಲ ಮಹಿಳೆಯರೂ ಕಡ್ಡಾಯವಾಗಿ ವರ್ಷಕ್ಕೊಂದು ಬಾರಿ ಮ್ಯಾಮೋಗ್ರ್ಯಾಫಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಮ್ಯಾಮೋಗ್ರ್ಯಾಫಿ ಎಂಬ ತಪಾಸಣೆಯಲ್ಲಿ ವಿಕಿರಣಗಳ ನೆರವಿನಿಂದ ಸ್ತನಗಳಲ್ಲಿ ಇರಬಹುದಾದ ಅತಿ ಚಿಕ್ಕ ಗಡ್ಡೆಗಳನ್ನೂ ಪತ್ತೆ ಹಚ್ಚಬಹುದು. ಮಹಿಳೆಯ ಸ್ತನಗಳನ್ನು ಪರೀಕ್ಷಿಸಿದಾಗ ಪತ್ತೆಯಾಗದಂತಹ ಅತಿ ಸಣ್ಣ ಗಡ್ಡೆಗಳೂ ಮ್ಯಾಮೋಗ್ರ್ಯಾಫಿ ಪರೀಕ್ಷೆಯಿಂದ ತಿಳಿಯಲು ಸಾಧ್ಯ. ಕ್ಯಾನ್ಸರ್‌ನ ಆರಂಭದಲ್ಲಿ ಸ್ತನಗಳ ಅಂಗಾಂಶಗಳಲ್ಲಿ ಆಗಬಹುದಾದ ಸೂಕ್ಷ್ಮ ಬದಲಾವಣೆಗಳೂ ಮ್ಯಾಮೋಗ್ರ್ಯಾಫಿ ಪರೀಕ್ಷೆಯಲ್ಲಿ ಪತ್ತೆಯಾಗುತ್ತವೆ.

ಹೀಗೆ ಪ್ರಾರಂಭಿಕ ಹಂತಗಳಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆಯಾದರೆ ಅದನ್ನು ಸುಲಭವಾಗಿ ಗುಣ ಮಾಡಬಹುದು. ಗಡ್ಡೆಯ ಗಾತ್ರ /ಬಗೆ ಮತ್ತಿತರ ಅಂಶಗಳನ್ನು ಆಧರಿಸಿ ಸಣ್ಣ ಶಸ್ತ್ರಚಿಕಿತ್ಸೆ ಅಥವಾ ಕೇವಲ ಔಷಧೋಪಚಾರದಿಂದ (ಕಿಮೋಥೆರಪಿ) ಈ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ.

**

ಗಮನದಲ್ಲಿಡಿ

* ಸ್ತನದಲ್ಲಿ ಕಂಡು ಬರುವ ಎಲ್ಲ ಗಡ್ಡೆಗಳೂ ಕ್ಯಾನ್ಸರ್ ಗಡ್ಡೆಗಳಾಗಿರುವುದಿಲ್ಲ. ಮ್ಯಾಮೋಗ್ರ್ಯಾಫಿ ಅಥವಾ ಗಡ್ಡೆಯ ಸೂಜಿ ಪರೀಕ್ಷೆಯಿಂದ (ಫೈನ್ ನೀಡಲ್ ಆಸ್ಪಿರೇಶನ್ ಸೈಟಾಲಜಿ) ಅಥವಾ ಬಯಾಪ್ಸಿ ಪರೀಕ್ಷೆಯಿಂದ (ಗಡ್ಡೆಯ ಅಂಗಾಂಶದ ಸಣ್ಣ ತುಣುಕನ್ನು ತೆಗೆದು ತಪಾಸಣೆ ಮಾಡುವುದು) ಗಡ್ಡೆಯು ಕ್ಯಾನ್ಸರ್ ಗಡ್ಡೆಯೋ ಅಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯ.

* ಸ್ತನ್ಯಪಾನ ಮಾಡಿಸಿದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಂಭವ ಕಡಿಮೆ.

* ಕುಟುಂಬದಲ್ಲಿ ನಿಮ್ಮ ತಾಯಿ, ಅಕ್ಕ ಅಥವಾ ತಂಗಿ ಸ್ತನ ಕ್ಯಾನ್ಸರ್‌ನಿಂದ ಬಳಲಿದ್ದರೆ, ನೀವು ಮೂವತ್ತು ವರ್ಷ ತುಂಬುತ್ತಲೇ ವರ್ಷಕ್ಕೊಮ್ಮೆ ಮ್ಯಾಮೋಗ್ರ್ಯಾಫಿ ಪರೀಕ್ಷೆಗೆ ಒಳಪಡುವುದು ಸೂಕ್ತ.

* ಸ್ತನ ಕ್ಯಾನ್ಸರ್ ಪುರುಷರಲ್ಲಿಯೂ ಕಂಡುಬರಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry