ಸೋಮವಾರ, ಸೆಪ್ಟೆಂಬರ್ 16, 2019
29 °C

ಗೋಲುಪೆಟ್ಟಿಗೆಗೆ ‘ಧೀರ’ನ ರಕ್ಷಣೆ

Published:
Updated:
ಗೋಲುಪೆಟ್ಟಿಗೆಗೆ ‘ಧೀರ’ನ ರಕ್ಷಣೆ

ಫಿಫಾ ಜೂನಿಯರ್ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಗೋಲು ಹೊಡೆದ ಭಾರತದ ಜೀಕ್ಸನ್‌ ಸಿಂಗ್ ರಾತ್ರಿ ಬೆಳಗಾಗುವುದರೊಳಗೆ ಮನೆಮಾತಾದರು. ಆದರೆ, ಟೂರ್ನಿಯಲ್ಲಿ ಭಾರತ ತಂಡವು ಆಡಿದ್ದ ಮೂರು ಪಂದ್ಯಗಳಲ್ಲಿ ಯೂ ಬಲಿಷ್ಠ ಎದುರಾಳಿ ತಂಡಗಳ ಆಟಗಾರರ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ನಿಂತ ಗೋಲ್‌ಕೀಪರ್ ಧೀರಜ್‌ ಮೊಯರಂಗತೇಮ್ ಬಗ್ಗೆ ಎಷ್ಟು ಜನಕ್ಕೆ ಗೊತ್ತು?

ಲೀಗ್ ಹಂತದ ಮೂರು ಪಂದ್ಯಗಳಲ್ಲಿಯೂ ಭಾರತ ತಂಡವು ಸೋಲನುಭವಿಸಿತ್ತು. ಆದರೆ ಕೆಲವು ಭರವಸೆಯ ಕಿರಣಗಳು ಕೂಡ ಮೂಡಿದ್ದವು. ಅದರಲ್ಲಿ ಧೀರಜ್ ಅವರ ಗೋಲ್‌ಕೀಪಿಂಗ್ ಆಕರ್ಷಣೆಯೂ ಒಂದು.

ಫುಟ್‌ಬಾಲ್ ಪಂದ್ಯಗಳಲ್ಲಿ ಗೋಲು ಗಳಿಸುವುದು ಎಷ್ಟು ಮುಖ್ಯವೋ ಅಷ್ಟೇ ಮಹತ್ವದ್ದು ಎದುರಾಳಿಗಳ ಗೋಲು ಗಳಿಕೆಯನ್ನು ತಡೆಯುವುದು. ಆಟದಲ್ಲಿ ಗೋಲ್‌ಕೀಪರ್ ಪಾತ್ರವು ಮಹತ್ವದ್ದು.

ಮಣಿಪುರದ 16 ವರ್ಷದ ಧೀರಜ್ ಊರು ಪಂದ್ಯಗಳಲ್ಲಿ 10ಕ್ಕೂ ಹೆಚ್ಚು ಗೋಲುಗಳನ್ನು ಉಳಿಸಿದ್ದಾರೆ. ಇದರಿಂದಾಗಿ ಭಾರತ ತಂಡವು ಹೆಚ್ಚು ಅಂತರದ ಗೋಲುಗಳಿಂದ ಸೋಲುವ ಮುಖಭಂಗದಿಂದ ಪಾರಾಯಿತು.

ಶಾಲೆಯಲ್ಲಿ ಬ್ಯಾಡ್ಮಿಂಟನ್ ಆಟಗಾರ ನಾಗಿದ್ದ ಧೀರಜ್ ಸಿಂಗ್ 11ನೇ ವಯಸ್ಸಿನಲ್ಲಿ ಫುಟ್‌ಬಾಲ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ಮಣಿಪುರದ ಕಲ್ಯಾಣಿ ಫುಟ್‌ಬಾಲ್ ತಂಡಕ್ಕಾಗಿ ಆಡಿದರು. ಅಲ್ಲಿ ಅವರ ಚುರುಕಿನ ಗೋಲ್‌ಕೀಪಿಂಗ್‌ ಎಲ್ಲರ ಗಮನ ಸೆಳೆಯಿತು. ತಮ್ಮ ಎಡಬದಿಗೆ ಡೈವ್ ಮಾಡಿ ಚೆಂಡು ತಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ನವದೆಹಲಿಯ ಜವಾಹರಲಾಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಅವರು ಮೂರು ಗೋಲುಗಳನ್ನು ತಡೆದ ರೀತಿ ಅದ್ಭುತವಾಗಿತ್ತು. ಆದರೂ ಆ ಪಂದ್ಯದಲ್ಲಿ ಭಾರತ ತಂಡವು 0–3ರಿಂದ ಸೋಲನುಭವಿಸಿತು.

ಎರಡನೇ ಪಂದ್ಯದಲ್ಲಿ ಕೊಲಂಬಿಯಾ ಎದುರು ಧೀರಜ್‌ ಅವರ ಧೀರತನ ಮುಗಿಲು ಚುಂಬಿಸಿತ್ತು. ಬರೊಬ್ಬರಿ ನಾಲ್ಕು ಬಾರಿ ರಾಕೆಟ್‌ನಂತೆ ಚಿಮ್ಮಿ ಬಂದ ಚೆಂಡಿಗೆ ಎದೆಯೊಡ್ಡಿ ಗೋಲುಪೆಟ್ಟಿಗೆಯನ್ನು ರಕ್ಷಿಸಿದ್ದರು. ಆದರೆ ಆ ಪಂದ್ಯದಲ್ಲಿ ಜೀಕ್ಸನ್‌ ಸಿಂಗ್ ಗಳಿಸಿದ ಗೋಲು ದೊಡ್ಡ ಸುದ್ದಿಯಾಯಿತು. ಅದರಲ್ಲಿ ಧೀರಜ್ ಸಾಧನೆ ಮಂಕಾಯಿತು. ನಂತರ ಘಾನಾ ಎದುರಿನ ಪಂದ್ಯದಲ್ಲಿಯೂ ಧೀರಜ್ ತಮ್ಮ ಅಮೋಘ ಆಟದಿಂದ ಬೆರಗುಗೊಳಿಸಿದರು.

‘ಇದೊಂದು ಅದ್ಭುತವಾದ ಅನುಭವ. ಭಾರತದಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಅದರಲ್ಲಿ ತವರಿನ ತಂಡವನ್ನು ಪ್ರತಿನಿಧಿಸುವ ಅವಕಾಶ ನನ್ನದಾಗಿತ್ತು. ಆ ಕಾರಣವೇ ನನ್ನ ಉತ್ಸಾಹ ಮತ್ತು ಶಕ್ತಿಯನ್ನು ಇಮ್ಮಡಿಗೊಳಿಸಿತ್ತು. ಕೋಚ್ ಮ್ಯಾಟೋಸ್ ಅವರ ಸಲಹೆಗಳೂ ಉಪಯುಕ್ತವಾಗಿದ್ದವು. ತಂಡದ ಆಟಗಾರರ ಬೆಂಬಲವೂ ಉತ್ತಮವಾಗಿತ್ತು’ ಎಂದು ಧೀರಜ್ ಹೇಳುತ್ತಾರೆ.

ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸ ಮೂಡಿಸಿರುವ ಧೀರಜ್ ಸಿಂಗ್ ಸಾಧನೆಯು ಮತ್ತಷ್ಟು ಆಟಗಾರರು ಗೋಲ್‌ಕೀಪಿಂಗ್‌ನತ್ತ ಒಲವು ಬೆಳೆಸಿಕೊಳ್ಳಲು ಕಾರಣವಾಗುವುದು ಖಚಿತ.

Post Comments (+)