ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ ಲದ್ದೆಯ ಸೋಮಯ್ಯನ ಒಂದು ವಚನ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಚನಕಾರರಲ್ಲಿ ಕೆಲವರಿದ್ದಾರೆ ಅವರು ಒರಟು ನೇರ ನಿಷ್ಠುರ ಮಾತಿಗೆ ಹೆಸರಾದವರು. ಇವರಲ್ಲಿ ಅಗ್ರಮಾನ್ಯ ವಚನಕಾರ ಅಂಬಿಗರ ಚೌಡಯ್ಯ. ಇವನ ಪ್ರಕಾರ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡ ಮೇಲೆ ಅದಕ್ಕೆ ಕಾಯ ವಾಚ ಮನಸ ಬದ್ಧ ನಡೆನುಡಿ ಉಳ್ಳವರಾಗಿರಬೇಕು, ಇದಕ್ಕೆ ತಪ್ಪಿ ನಡೆವ ವಂಚಕರನ್ನು ಊಸರವಳ್ಳಿಗಳನ್ನು ಇವನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಾನೆ. ಇಂಥವರಿಗೆ ಉತ್ತಯ್ಯಗಳ ಎಡದ ಎಕ್ಕಡ ತೆಗೆದುಕೊಂಡು ತಲೆಯ ಮೇಲೆ ಲಟಲಟನೆ ಹೊಡೆಯುವಂತೆ ಹೇಳುತ್ತಾನೆ. ಉತ್ತಯ್ಯ ಒಬ್ಬ ಬಾಗಿಲು ಕಾಯುವ ಕಾಯಕದ ಶಿವಶರಣ. ಸತ್ಯಶುದ್ಧ ಕಾಯಕ ಜೀವಿ. ಇಂಥ ಶರಣನನ್ನು ನಡೆನುಡಿ ಶೀಲ ತಪ್ಪಿದ ಶರಣರಿಗೆ ಬೈಯ್ಯಲು ಒಂದು ಪ್ರಮಾಣು ದಂಡವಾಗಿ ಬಳಸಿದ್ದಾನೆ. ಚೌಡಯ್ಯನ ನೈತಿಕ ಸಿಟ್ಟು ಒರಟುತನದಲ್ಲಿ ಪ್ರಕಟವಾದರೂ ಅದರ ಉದ್ದೇಶ ಸತ್ಯಶುದ್ಧಕಾಯಕದ ಪ್ರತಿಪಾದನೆ. ಈ ವಿಚಾರದಲ್ಲಿ ಅವನು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಇದೇ ರೀತಿಯ ಇನ್ನೊಬ್ಬ ವಚನಕಾರನಿದ್ದಾನೆ, ಅವನ ಹೆಸರು ಲದ್ದೆಯ ಸೋಮಯ್ಯ. ಇವನು ಬರೆದ ವಚನಗಳೆಷ್ಟೋ ತಿಳಿಯದು. ಆದರೆ ಸಿಕ್ಕಿರುವುದು ಒಂದೇ ಒಂದು ವಚನ. ಆ ವಚನ ಇಂತಿದೆ:
ಆವಕಾಯಕವಾದರೂ ಸ್ವಕಾಯಕವ ಮಾಡಿ
ಗುರುಲಿಂಗಜಂಗಮದ ಮುಂದಿಟ್ಟು
ಒಕ್ಕುದ ಹಾರೈಸಿ, ಮಿಕ್ಕುದ ಕೈಗೊಂಡು
ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು
ಜೀವ ಹೋದಡೆ ಸಾಯಿ ಇದಕ್ಕೆ ದೇವರ ಹಂಗೇಕೆ
ಭಾಪು ಲದ್ದೆಯ ಸೋಮಾ
ಅನ್ನ ಬೆಂದಿದೆಯೋ ಇಲ್ಲವೋ ಎಂದು ನೋಡುವುದಕ್ಕೆ ಪಾತ್ರೆಯಲ್ಲಿ ಬೇಯುತ್ತಿರುವ ಅಗುಳನ್ನೆಲ್ಲ ಹಿಸುಕಿ ನೋಡಬೇಕಾಗಿಲ್ಲ. ಒಂದೆರಡು ಅಗುಳು ಸಾಕ. ಅಂತೆ ಈ ವಚನ, ಲದ್ದೆಯ ಸೋಮನ ಇಡೀ ಜೀವನ ಧೋರಣೆಯನ್ನು ಸಾರುವ ವಚನವಿದು. ಅಷ್ಟೇ ಅಲ್ಲ ವಚನಧರ್ಮ ಸಾರವನ್ನು ಶರಣ ಸೋಮ ಗ್ರಹಿಸಿರುವ ಪರಿಯನ್ನೂ ಇದು ಹೇಳುತ್ತಿದೆ. ಆವಕಾಯಕ-ಸ್ವಕಾಯಕ ಎಂಬ ಪದಗಳು ಕಾಯಕದ ಆಯ್ಕೆಯ ಸ್ವಾತಂತ್ರ್ಯವನ್ನು ಹೇಳುತ್ತಿದ್ದರೆ ಕಾಯಕದ ಸತ್ಯಶುದ್ಧ ಶೀಲದ ಬಗ್ಗೆ ಮುಂದಿನ ಗುರುಲಿಂಗಜಂಗಮದ ಮುಂದಿಡುವ ಕ್ರಿಯೆ ಸಾರುತ್ತಿದೆ. ಸ್ವಾತಂತ್ರ್ಯವೆಂಬುದು ಸ್ವಚ್ಛಂದವಲ್ಲ ಸಮಾಜಬದ್ಧ ನಡೆ. ಕಾಯಕ ಸತ್ಯ ಶುದ್ಧವೆನ್ನಿಸಿಕೊಳ್ಳುವುದು ಸ್ವಇಚ್ಛೆಯಿಂದ ಮಾಡಿದಾಗ ಮಾತ್ರವಲ್ಲ ಸಮಾಜ ಹಿತವನ್ನು ಪರಿಗಣಿಸಿದ ಇಚ್ಛೆಯಿಂದ ಮಾಡಿದಾಗ. ಹಾಗೂ ಮಾಡಿದ ಕಾಯಕದ ಫಲ ಸ್ವೀಕರಣೆ-ವಿತರಣೆಯಲ್ಲಿ ಸಾಫಲ್ಯತೆ ಪಡೆಯಬೇಕು. ಇದು ಕಾಯಕ ಜೀವಿಯ ಜೀವನ ಗತಿ. ಇದು ಲಿಂಗಾಯತ ಧರ್ಮದ ಬದುಕಿನ ಅಧ್ಯಾತ್ಮ. ಇದರೊಳಗೆ ಶರಣ ಲದ್ದೆಯ ಸೋಮನ ಜೀವನ ದರ್ಶನ ಎಲ್ಲ ಶರಣರೂ ಸಾರುವ ಕಾಯಕ ದಾಸೋಹ ತತ್ವಕ್ಕೆ ಸಂಬಂಧಿಸಿದ್ದೇ ಇದೆ. ಆದರೆ ಸೋಮನ ವಿಶೇಷತೆ ಇರುವುದು ವಚನದ ಕೊನೆಯ ಮೂರು ಸಾಲುಗಳಲ್ಲಿ : ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕೆ ದೇವರ ಹಂಗೇಕೆ? ಈ ಸಾಲುಗಳು ಭೌತಿಕ ಬದುಕಿನ ಕಟು ವಾಸ್ತವವನ್ನು ಮುಚ್ಚುಮರೆ ಇಲ್ಲದೆ ಬಿಚ್ಚಿಟ್ಟ ನಿಷ್ಠುರ ನಿಜಗತಿಯ ನುಡಿಪರಶುಗಳು. ಇದು ವಚನ ಧರ್ಮ ಸಾರ. ಬದುಕಿನ ಕಠೋರ ವಾಸ್ತವವನ್ನು ಅನ್ಯಶಕ್ತಿಗಳ ಅವಲಂಬನೆಯ ಹಂಗಿಗೆ ಒಳಗಾಗದೆ ಇತರ ಜೀವರಾಶಿಗಳಂತೆ ಮಾನವನೂ ಎದುರಿಸಬೇಕಾಗಿರುವ ಅನಿವಾರ್ಯ ಸತ್ಯವನ್ನು ದಿಟ್ಟ ನುಡಿಗಳಲ್ಲಿ ಬಿಚ್ಚಿಟ್ಟಿದ್ದಾನೆ ಲದ್ದೆಯ ಸೋಮಯ್ಯ. ತಾವುಗೈದ ಪಾಪಕರ್ಮಕ್ಕೆ ದೈವದ ಮೊರೆ ಹೋಗಿ ಅವನಿಗೆ ತಮ್ಮ ಪಾಪದ ಪಾಲನ್ನು ಒಪ್ಪಿಸಿ ಪಾಪಮುಕ್ತರಾದೆವೆಂದು ಮತ್ತೆ ಅದೇ ಪಾಪಕೃತ್ಯಕ್ಕೆ ತೊಡಗುವ ದುರಾಸೆಯ ಜನರ ಮೌಢ್ಯಕ್ಕೆ ಬೀಸಿದ ಚಾಟಿ ಈ ವಚನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT