ಶೋಕಿ ನೋಂದಣಿ ಫಲಕಗಳಿಗೆ ಕಡಿವಾಣ

ಬುಧವಾರ, ಜೂನ್ 19, 2019
28 °C

ಶೋಕಿ ನೋಂದಣಿ ಫಲಕಗಳಿಗೆ ಕಡಿವಾಣ

Published:
Updated:
ಶೋಕಿ ನೋಂದಣಿ ಫಲಕಗಳಿಗೆ ಕಡಿವಾಣ

ಬೆಂಗಳೂರು:‌ ಶೋಕಿಗಾಗಿ ವಾಹನಗಳಲ್ಲಿ ದೋಷಪೂರಿತ ನೋಂದಣಿ ಫಲಕಗಳನ್ನು ಹೊಂದಿರುವ ವಾಹನ ಚಾಲಕರ ವಿರುದ್ಧ ಕ್ರಮ ಜರುಗಿಸಲು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ದೋಷಪೂರಿತ ಫಲಕಗಳನ್ನು ತೆರವುಗೊಳಿಸುವುದರ ಜೊತೆ ಇಂತಹ ವಾಹನ ಚಾಲಕರಿಗೆ ₹ 100 ದಂಡವನ್ನೂ ವಿಧಿಸುತ್ತಿದ್ದಾರೆ.

ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದ ಶಾಸಕ ಸುರೇಶ ಕುಮಾರ್, ಸಂಘಟನೆಯೊಂದರ ಮುಖಂಡರೊಬ್ಬರು ಕಾರಿಗೆ ದೋಷಪೂರಿತ ಫಲಕ ಅಳವಡಿಸಿದ್ದನ್ನು ಪ್ರಶ್ನಿಸಿದ್ದರು. ಅದಾದ ಬಳಿಕ ಎಚ್ಚೆತ್ತ ಸಾರಿಗೆ ಅಧಿಕಾರಿಗಳು ಅಂಥ ಫಲಕಗಳನ್ನು ತೆರವುಗೊಳಿಸಲು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಸಿಬ್ಬಂದಿ ಕೊರತೆಯಿಂದ ಅದು ಪರಿಣಾಮಕಾರಿಯಾಗಿರಲಿಲ್ಲ.

ಈಗ ಸಾರಿಗೆ ಇಲಾಖೆಯ ಸಿಬ್ಬಂದಿ ಜತೆಗೆ ಸಂಚಾರ ಪೊಲೀಸರು ಸಹ ಅಂತಹ ಫಲಕಗಳ ಪತ್ತೆಗಾಗಿ ರಸ್ತೆಗಿಳಿದಿದ್ದಾರೆ. ಪೊಲೀಸರೂ ನಗರದಲ್ಲಿ ದಿನದಲ್ಲಿ 400ರಿಂದ 600 ಫಲಕಗಳನ್ನು ತೆರವುಗೊಳಿಸಿ ಚಾಲಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

‘ದ್ವಿಚಕ್ರ ವಾಹನ, ಕಾರು, ಆಟೊ ರಿಕ್ಷಾಗಳು ಸೇರಿ ನಗರದಲ್ಲಿ 1 ಕೋಟಿಗೂ ಅಧಿಕ ವಾಹನಗಳಿವೆ. ಅವುಗಳಲ್ಲಿ ಶೇ 60ರಷ್ಟು ವಾಹನಗಳ ನೋಂದಣಿ ಫಲಕಗಳು ದೋಷಪೂರಿತವಾಗಿವೆ. ಅಂಥ ಫಲಕಗಳನ್ನು ಸಿಬ್ಬಂದಿ ಪತ್ತೆ ಹಚ್ಚುತ್ತಿದ್ದಾರೆ’ ಎಂದು ಸಂಚಾರ ಪೊಲೀಸ್‌ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದೇ 14ರಿಂದ ಕಾರ್ಯಾಚರಣೆ:

ಪೂರ್ವ ವಿಭಾಗದ ಕಬ್ಬನ್‌ ಪಾರ್ಕ್‌, ಹಲಸೂರು ಗೇಟ್‌, ಅಶೋಕನಗರ, ವಿಲ್ಸನ್‌ ಗಾರ್ಡನ್‌, ಸದಾಶಿವನಗರ, ಶಿವಾಜಿನಗರ, ಕೆ.ಆರ್‌.ಪುರ, ಬಾಣಸವಾಡಿ, ಮಡಿವಾಳ, ಎಲೆಕ್ಟ್ರಾನಿಕ್‌ ಸಿಟಿ, ಪಶ್ಚಿಮ ವಿಭಾಗದ ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಕಾಮಾಕ್ಷಿಪಾಳ್ಯ, ಮಲ್ಲೇಶ್ವರ, ರಾಜಾಜಿನಗರ, ಯಲಹಂಕ, ಹೆಬ್ಬಾಳ, ಜಯನಗರ, ಬಸವನಗುಡಿ, ಬನಶಂಕರಿ ಹಾಗೂ ಸುತ್ತಮುತ್ತ ಇದೇ 14ರಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.ಈ ಪ್ರದೇಶಗಳ ಸಂಚಾರ ಠಾಣೆಗಳ ಪೊಲೀಸರು, ಹಳೇ ಪ್ರಕರಣಗಳ ವಿಚಾರಣೆ, ವಾಹನಗಳ ದಾಖಲೆ ಪರಿಶೀಲನೆ ಜತೆಗೆ ಫಲಕಗಳ ತಪಾಸಣೆ ಮಾಡುತ್ತಿದ್ದಾರೆ.

‘ದೋಷಪೂರಿತ ಫಲಕಗಳನ್ನು ಹಾಕಿಕೊಂಡರೆ ದಂಡ ಸಂಗ್ರಹಿಸಲು ಅವಕಾಶವಿದೆ. ಕೆಲವರು  ದಂಡ ಕಟ್ಟಿದ ಬಳಿಕವೂ ಫಲಕ ತೆರವು ಮಾಡುವುದಿಲ್ಲ. ಹೀಗಾಗಿ ಸಿಬ್ಬಂದಿಯೇ ತೆರವು ಮಾಡುತ್ತಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರಿ ವಾಹನಗಳಿಗೆ ವಿನಾಯಿತಿ:

‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮತ್ತು ತುರ್ತು ವಾಹನಗಳಿಗೆ ವಿನಾಯಿತಿ ಇದೆ. ಅವುಗಳನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಪಶ್ಚಿಮ ವಿಭಾಗದ ಸಂಚಾರ ವಿಭಾಗದ ಡಿಸಿಪಿ ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಫಲಕ ತೆರವುಗೊಳಿಸಿದ ಬಳಿಕವೂ ಎರಡನೇ ಬಾರಿ ಅದೇ ತಪ್ಪು ಮಾಡಿ ಸಿಕ್ಕಿಬಿದ್ದರೆ ಅವರ ಚಾಲನಾ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡುತ್ತೇವೆ. ಸೆ. 14ರಿಂದ ಇದುವರೆಗೆ 100ಕ್ಕೂ ಹೆಚ್ಚು ಚಾಲಕರು ಎರಡನೇ ಬಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ’ ಎಂದು ತಿಳಿಸಿದರು.

ಹೀಗಿರಲಿ ನಾಮಫಲಕ:

KA 01 A 0001

(ಮುಂಬದಿ ಫಲಕ)

KA 01

A 0001

(ಹಿಂಬದಿ)

(ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1989ರ ಕಲಂ 51ರ ‍ಪ್ರಕಾರ ಫಲಕದ ಮಾದರಿ)

ಅಂಕಿ–ಅಂಶಗಳು

12,033

ತೆರವುಗೊಳಿಸಿದ ದೋಷಪೂರಿತ ಫಲಕಗಳ ಸಂಖ್ಯೆ

12.03 ಲಕ್ಷ

ಸಂಗ್ರಹಿಸಿದ ದಂಡದ ಮೊತ್ತ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry