ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹದ ಕೆರೆಗೆ ಕಾರಂಜಿ ಸೊಬಗು

Last Updated 23 ಅಕ್ಟೋಬರ್ 2017, 6:40 IST
ಅಕ್ಷರ ಗಾತ್ರ

ಗದಗ: ಐತಿಹಾಸಿಕ ಭೀಷ್ಮಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸ ಲಾಗಿದೆ. ಅದಕ್ಕೆ ಹೊಂದಿಕೊಂಡಿರುವ ಸಿಂಹದ ಕೆರೆಯಲ್ಲಿ ಕಾರಂಜಿ ಅಳವಡಿಸಲಾಗಿದೆ. ಕಳೆದ ಒಂದು ವಾರದಿಂದ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಕಾರಂಜಿಯಿಂದ ಕೆರೆಯ ಮೆರುಗು ಹೆಚ್ಚಿದೆ.

ಹಿಂದೆ ಸಿಂಹದ ಕೆರೆಗೆ ಸುತ್ತಮುತ್ತಲಿನ ಪ್ರದೇಶಗಳ ಚರಂಡಿ ನೀರು ಬಂದು ಸೇರುತ್ತಿತ್ತು. ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಜೆ.ಟಿ. ಎಂಜಿನಿಯರಿಂಗ್‌ ಕಾಲೇಜಿನಿಂದ ತೋಟಗಾರಿಕೆ ಇಲಾಖೆಯ ಕಚೇರಿವರೆಗೆ ಪೈಪ್‌ಲೈನ್‌ ಅಳವಡಿಸಿ ಚರಂಡಿ ನೀರು ಬೇರೆ ಕಡೆ ಹರಿದು ಹೋಗುವಂತೆ ಮಾಡಿದರು.

ಕೆರೆಯಲ್ಲಿನ ಕೊಳಚೆ ನೀರು ಖಾಲಿ ಮಾಡಿ, ಹೂಳೆತ್ತಲಾಗಿದೆ. ಖಾಲಿಯಾಗಿದ್ದ ಸಿಂಹದ ಕೆರೆಗೆ ಎರಡು ತಿಂಗಳ ಹಿಂದೆ ಸಿಂಗಟಾಲೂರು ಏತ ನೀರಾವರಿ ಕಾಲುವೆ ಮೂಲಕ ತುಂಗಭದ್ರಾ ನೀರು ಬಿಡಲಾಯಿತು. ಸದ್ಯ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ. ಅಧಿಕಾರಿಗಳ ಶ್ರಮದಿಂದ ಒಂದೇ ವರ್ಷದಲ್ಲಿ ಸಿಂಹದ ಕೆರೆಯ ಚಿತ್ರಣವೇ ಬದಲಾಯಿತು. ಇಲ್ಲಿಗೆ ಬರುವ ನೂರಾರು ಜನರು ಕೆಲ ಹೊತ್ತು ಕಾರಂಜಿಯ ಸೊಬಗನ್ನು ವೀಕ್ಷಿಸಿ ಖುಷಿಪಡುತ್ತಿದ್ದಾರೆ.

₹10 ಲಕ್ಷ ಅನುದಾನದಲ್ಲಿ ಕಾರಂಜಿ ಅಳವಡಿಕೆ: ಸಿಂಹದ ಕೆರೆಯ ಸೌಂದರ್ಯ ಹೆಚ್ಚಿಸಲು ನಗರಸಭೆಯಿಂದ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನ ಸ್ಯಾಂಕಿ ಕೆರೆ ಮಾದರಿಯಲ್ಲಿ ಸಿಂಹದ ಕೆರೆಯ ಮಧ್ಯ ಭಾಗದಲ್ಲಿ ಕಾರಂಜಿ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ. ನಗರಸಭೆ ಎಸ್‍.ಎಫ್.ಸಿಯ ₹10 ಲಕ್ಷ ಅನುದಾನದಲ್ಲಿ ಅತ್ಯಾಧುನಿಕ ಕಾರಂಜಿ ಅಳವಡಿಕೆ ಕಾರ್ಯ ನಡೆದಿದೆ. ಕೆರೆಯ ಮಧ್ಯದಲ್ಲಿ ಪ್ಲ್ಯಾಟ್ ಫಾರ್ಮ್ ನಿರ್ಮಿಸಲಾಗಿದೆ. ಅದರ ಮೇಲೆ ಸದ್ಯ ₹6 ಲಕ್ಷ ವೆಚ್ಚದಲ್ಲಿ 5 ಎಚ್‌ಪಿ ಸಾಮರ್ಥ್ಯದ ಐದು ಮೋಟರ್‌ಗಳನ್ನು ಅಳವಡಿಸಲಾಗಿದೆ. ಸುಮಾರು 70 ಅಡಿ ಎತ್ತರಕ್ಕೆ ಕಾರಂಜಿ ನೀರು ಚಿಮ್ಮುತ್ತದೆ.

‘ಕಳೆದ ಒಂದು ವಾರದಿಂದ ಕಾರಂಜಿಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಕಾರಂಜಿಯ ತಾಂತ್ರಿಕ ಪರೀಕ್ಷೆ ಯಶಸ್ವಿಯಾಗಿದೆ. ಜತೆಗೆ ಕಾರಂಜಿ ಪ್ಲ್ಯಾಟ್ ಫಾರ್ಮ್ ಸುತ್ತ ಸ್ಟೀಲ್ ಗ್ರಿಲ್ ಅಳವಡಿಕೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿದೆ’ ಎಂದು ನಗರಸಭೆ ಅಧಿಕಾರಿಯೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದರು.

‘ಭೀಷ್ಮಕೆರೆಯ ಆವರಣದಲ್ಲಿರುವ ಬಸವಣ್ಣನ ಪುತ್ಥಳಿ ಬಳಿ 100 ಅಡಿ ಎತ್ತರದ ಹೈ ಮಾಸ್ಟ್ ವಿದ್ಯುತ್ ಕಂಬ, ₹4.74 ಲಕ್ಷ ಅನುದಾನದಲ್ಲಿ ಕೆರೆ ಸುತ್ತ ವಿದ್ಯುತ್‌ ಅಳವಡಿಕೆ ಕಾರ್ಯಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಪಕ್ಕದಲ್ಲೇ ಇರುವ ಸಿಂಹದ ಕೆರೆಯಲ್ಲಿ ಕಾರಂಜಿ ಅಳವಡಿಸಲಾಗಿದೆ’ ಎಂದು ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT