ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರಗೊಂಡ ‘ಕಾವೇರಿ ತಾಲ್ಲೂಕು’ ಕೂಗು

Last Updated 23 ಅಕ್ಟೋಬರ್ 2017, 7:25 IST
ಅಕ್ಷರ ಗಾತ್ರ

ಕುಶಾಲನಗರ: ಕೊಡಗು ಜಿಲ್ಲೆಯಲ್ಲಿ ಶೀಘ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ಹೋಬಳಿ ಕೇಂದ್ರಗಳಲ್ಲಿ ಒಂದಾಗಿರುವ ಕುಶಾಲನಗರ ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ನೂತನ ಕಾವೇರಿ ತಾಲ್ಲೂಕು ರಚನೆ ಮಾಡಬೇಕೆಂಬ ಬಹುದಿನಗಳ ಬೇಡಿಕೆ ಕೂಗು ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಸರ್ಕಾರ ಘೋಷಣೆ ಮಾಡಿರುವ 50 ನೂತನ ತಾಲ್ಲೂಕುಗಳ ಪಟ್ಟಿಯಲ್ಲಿ ‘ಕಾವೇರಿ ತಾಲ್ಲೂಕು’ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿದೆ. 10 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘ– ಸಂಸ್ಥೆಗಳು, ರಾಜಕೀಯ ಮುಖಂಡರು ರಾಜಕೀಯ ರಹಿತವಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ತಾಲ್ಲೂಕು ಕೇಂದ್ರದ ಕನಸು ನನಸಾಗುವುದೇ ಎಂಬ ಮಾತುಗಳು ಈಗ ವ್ಯಕ್ತವಾಗುತ್ತಿವೆ.

ವರ್ಷದಿಂದ ವರ್ಷಕ್ಕೆ ಕುಶಾಲನಗರ ಪಟ್ಟಣವು ವೇಗವಾಗಿ ಬೆಳವಣಿಗೆ ಹೊಂದುವ ಮೂಲಕ ಗಮನ ಸೆಳೆಯುತ್ತಿದೆ. ಸುಮಾರು 80 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಅಲ್ಲದೇ ಪ್ರಸ್ತಾವಿತ ತಾಲ್ಲೂಕು ವ್ಯಾಪ್ತಿಯಲ್ಲಿ 1.10 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಕುಶಾಲನಗರ ಪಟ್ಟಣವನ್ನು ಕೇಂದ್ರವಾಗಿರಿಸಿಕೊಂಡು ಪಿರಿಯಾಪಟ್ಟಣ ತಾಲ್ಲೂಕಿನ ಹರ್ನಹಳ್ಳಿ ಹೋಬಳಿ ಸೇರಿಸಿಕೊಂಡು ಕಾವೇರಿ ತಾಲ್ಲೂಕನ್ನಾಗಿ ಮಾಡಬೇಕು ಎಂಬುದು ಮಾಜಿ ಮುಖ್ಯಮಂತ್ರಿ ದಿವಂಗತ ಆರ್. ಗುಂಡೂರಾವ್ ಅವರ ಕನಸೂ ಆಗಿತ್ತು.

ತಾಲ್ಲೂಕು ಮಾಡಬೇಕು ಎಂಬ ಹಕ್ಕೊತ್ತಾಯಕ್ಕಾಗಿ 17 ವರ್ಷಗಳ ಹಿಂದೆ 2001ರಲ್ಲಿ ವಿ.ಪಿ. ಶಶಿಧರ್ ನೇತೃತ್ವದಲ್ಲಿ ಕಾವೇರಿ ತಾಲ್ಲೂಕು ಹೋರಾಟ ಸಮಿತಿ ಆಸ್ತಿತ್ವಕ್ಕೆ ಬಂದಿತು. ನಂತರ, ಕುಶಾಲನಗರ ಹೋಬಳಿ, ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿಯು ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಕಾವೇರಿ ತಾಲ್ಲೂಕಿಗಾಗಿ ಬಂದ್, ಪ್ರತಿಭಟನೆ, ಅಂಚೆ ಚಳವಳಿ, ರಸ್ತೆತಡೆ, ಉಪವಾಸ ಸತ್ಯಗ್ರಹ, ಬೆಂಗಳೂರು ಚಲೊ... ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ನಿರಂತರ ಹೋರಾಟ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಯಿತು. ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಮನವಿ ಸಲ್ಲಿಸಲಾಗಿತ್ತು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಜಗದೀಶ ಶೆಟ್ಟರ್ ಅವಧಿಯಲ್ಲೂ ಒತ್ತಾಯಿಸಿದ್ದರು. ಇಷ್ಟೆಲ್ಲಾ ಹೋರಾಟ ನಡೆಸಿದ್ದರೂ ತಾಲ್ಲೂಕು ರಚನೆಗೆ ಸರ್ಕಾರ ಮೀನಮೇಷ ಏಣಿಸುತ್ತಿದೆ ಎಂಬ ಆರೋಪ ಬಲವಾಗಿದೆ. ಕಾವೇರಿ ತಾಲ್ಲೂಕು ಹೋರಾಟ ಸಮಿತಿ ಅ.30ರಂದು ಕುಶಾಲನಗರ ಪಟ್ಟಣದಲ್ಲಿ ಬೃಹತ್ ರ‍್ಯಾಲಿಯನ್ನು ನಡೆಸಲು ಉದ್ದೇಶಿಸಿದೆ. ನಂತರ ಬೆಂಗಳೂರು ಚಲೊ ನಡೆಸಿ ಸರ್ಕಾರದ ಮೇಲೆ ಎಲ್ಲ ರೀತಿಯ ಒತ್ತಡ ಹಾಕಲು ತೀರ್ಮಾನಿ
ಸಲಾಗಿದೆ.

ರಘು ಹೆಬ್ಬಾಲೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT