ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು‘ ಹೋದರೆ ಹೋದೇನು

Last Updated 23 ಅಕ್ಟೋಬರ್ 2017, 20:16 IST
ಅಕ್ಷರ ಗಾತ್ರ

ಮಕ್ಕಳಿಗೆ ಆಧ್ಯಾತ್ಮಿಕ ಪಾಠ ನಡೆಯುತ್ತಿತ್ತು. ಬೋಧಕರು ಮಕ್ಕಳೇ, ಸ್ವರ್ಗಕ್ಕೆ ಹೋಗಬೇಕಾದರೆ ನಾವೇನು ಮಾಡಬೇಕು ಎಂದು ಮಕ್ಕಳನ್ನು ಪ್ರಶ್ನಿಸಿದರು. ಮಕ್ಕಳು ಒಬ್ಬೊಬ್ಬರಾಗಿ, ನಾವು ಪರರಿಗೆ ಸಹಾಯ ಮಾಡಬೇಕು, ಆಪ್ಪ-ಅಮ್ಮನಿಗೆ ವಿಧೇಯರಾಗಿ ಅವರು ಹೇಳಿದ ಕೆಲಸವನ್ನು ಮಾಡಬೇಕು, ಯಾವಾಗಲೂ ಸತ್ಯವನ್ನೇ ನುಡಿಯಬೇಕು, ಕೆಟ್ಟ ಮಾತನ್ನು ಆಡಬಾರದು, ಎಂದು ಉತ್ತರವಿತ್ತರು. ಕೊನೆಗೆ ತುಂಟ ಬಾಲಕನೊಬ್ಬ, ಸ್ವಾಮಿ, ಸ್ವರ್ಗಕ್ಕೆ ಹೋಗಬೇಕಾದರೆ ಮೊದಲು ನಾವು ಸಾಯಬೇಕು ಎಂದು ಉತ್ತರಿಸಿದನು.

ಹಲವು ಬಾರಿ ಬುದ್ಧಿವಂತರಿಗೆ, ಜ್ಞಾನಿಗಳಿಗೆ, ಪಂಡಿತರಿಗೆ ತಿಳಿಯದ ಸತ್ಯವು ಪುಟಾಣಿಗಳಿಗೆ ತಿಳಿದಿರುತ್ತದೆ. ಈ ಕಾರಣಕ್ಕಾಗಿಯೇ ಯೇಸುಸ್ವಾಮಿ ಪಿತದೇವರನ್ನು ಸ್ತುತಿಸಿದ್ದರು: ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಪುಟ್ಟ ಮಕ್ಕಳಲ್ಲಿ ನಾನು ಎಂಬ ಅಹಂಕಾರವಿರುವುದಿಲ್ಲ. ಮನಸ್ಸಲ್ಲಿ ಒಂದು ಯೋಚನೆಯಿದ್ದು, ಮಾತಿನಲ್ಲಿ ಬೇರೆಯೇ ವಿಷಯವನ್ನು ಹೇಳುವ ಕೃತ್ರಿಮತೆ ಇರುವುದಿಲ್ಲ.

ಮನುಷ್ಯ ಬೆಳೆಯುತ್ತಾ ಹೋದಂತೆ ಅವನ ಅಹಂ ಬೆಳೆಯುತ್ತದೆ. ಪುಟ್ಟ ಮಕ್ಕಳು ತಂದೆ-ತಾಯಿ, ಹಿರಿಯರ ಪಾದ ಮುಟ್ಟಿ ಸಲೀಸಾಗಿ ನಮಸ್ಕರಿಸುತ್ತಾರೆ. ಅವರ ಮನದಲ್ಲಿರುವ ಭಾವ ಹಿರಿಯರನ್ನು ಗೌರವಿಸುವುದು. ಅದೇ ಮಕ್ಕಳು ಬೆಳೆದು ತರುಣಾವಸ್ಥೆಗೆ ತಲುಪಿದಾಗ, ಹಾಯ್, ಬಾಯ್ ಎಂದು ದೂರದಿಂದಲೇ ಕೈಯಾಡಿಸುವುದನ್ನು ಮಾಡುತ್ತಾರೆ. ತಗ್ಗಿ ಬಗ್ಗಿ ನಮಸ್ಕರಿಸಲು ಅಹಂ ಅವರನ್ನು ತಡೆಯುತ್ತದೆ.

ಗುರುಗಳಾದ ವ್ಯಾಸರಾಜರು ಕನಕದಾಸರಲ್ಲಿ, ನೀನು ಸ್ವರ್ಗಕ್ಕೆ ಹೋಗುವೆಯಾ? ಎಂದು ಪ್ರಶ್ನಿಸಿದಾಗ ಅವರು ನಾನು ಹೋದರೆ ಹೋದೇನು ಎಂದು ನೀಡಿದ ಉತ್ತರವು ಮಕ್ಕಳ ಮನಸ್ಥಿತಿಯನ್ನು ಚಿತ್ರಿಸುತ್ತದೆ. ಯಾರು ಶ್ರೇಷ್ಠರು? ಎಂಬ ಪ್ರಶ್ನೆಗೆ ಯೇಸುಸ್ವಾಮಿ ಒಂದು ಪುಟ್ಟ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ತಮ್ಮ ಮುಂದೆ ನಿಲ್ಲಿಸಿ, ನೀವು ಪರಿವರ್ತನೆ ಹೊಂದಿ ಪುಟ್ಟ ಮಕ್ಕಳಂತೆ ಆಗದಿದ್ದರೆ ಸ್ವರ್ಗ ಸಾಮ್ರಾಜ್ಯವನ್ನು ಸೇರಲಾರಿರಿ. ಈ ಮಗುವಿನಂತೆ ನಮೃ ಭಾವವುಳ್ಳವನೇ ಸ್ವರ್ಗ ಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ಶ್ರೇಷ್ಠನು ಎಂದು ಉತ್ತರಿಸಿದರು.

ಅಹಂಕಾರವನ್ನು ತ್ಯಜಿಸಿ ಪುಟ್ಟ ಮಕ್ಕಳಂತೆ ಆಗುವ ಪ್ರಯತ್ನವು ಜೀವನ ಪರ್ಯಂತ ನಡೆಯಬೇಕು. ಅಂತೆಯೇ, ದೇವರ ಪ್ರತಿರೂಪಿಗಳಾದ ಮಕ್ಕಳನ್ನು ಗೌರವಿಸುವ ಹೃದಯ ವೈಶ್ಯಾಲ್ಯತೆಯನ್ನೂ ಬೆಳೆಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT