ಅಂದು ಪದಾರ್ಪಣೆ; ಇಂದು ಉಪನಾಯಕ ಈ ಕನ್ನಡಿಗ

ಮಂಗಳವಾರ, ಜೂನ್ 25, 2019
25 °C
ಏಷ್ಯಾ ಕಪ್ ವಿಜೇತ ಭಾರತ ತಂಡದ ಉಪನಾಯಕ ಸುನಿಲ್ ಮನದಿಂಗಿತ

ಅಂದು ಪದಾರ್ಪಣೆ; ಇಂದು ಉಪನಾಯಕ ಈ ಕನ್ನಡಿಗ

Published:
Updated:
ಅಂದು ಪದಾರ್ಪಣೆ; ಇಂದು ಉಪನಾಯಕ ಈ ಕನ್ನಡಿಗ

ಬೆಂಗಳೂರು: ‘ನಾನು ನಿಜಕ್ಕೂ ಅದೃಷ್ಟಶಾಲಿ. 2007ರಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೆ. ಆಗಲೂ ಪ್ರಶಸ್ತಿ ಗೆದ್ದಿದ್ದೆವು. ಈಗ ಉಪನಾಯಕನಾಗಿದ್ದೇನೆ. ಎರಡೂ ನನ್ನ ಜೀವನದ ಅಮೂಲ್ಯ ಸಾಧನೆಗಳು’–

ಭಾನುವಾರ ಢಾಕಾದಲ್ಲಿ ಏಷ್ಯಾಕಪ್ ಹಾಕಿ ಟೂರ್ನಿ ಪ್ರಶಸ್ತಿ ಗೆದ್ದ ಭಾರತ ತಂಡದ ಆಟಗಾರ, ಕನ್ನಡಿಗ  ಎಸ್‌.ವಿ. ಸುನಿಲ್ ಅವರ ಸಂತಸದ ನುಡಿಗಳಿವು. ಸೋಮವಾರ ಭಾರತಕ್ಕೆ ಮರಳಿರುವ ಅವರು ‘ಪ್ರಜಾವಾಣಿ’ಯೊಂದಿಗೆ ಮಾತ ನಾಡಿದರು.

*ಎರಡು ಪ್ರಶಸ್ತಿ ವಿಜಯಗಳ ಬಗ್ಗೆ...

ಈ ರೀತಿ ಎರಡು ಬಾರಿ ಏಷ್ಯಾ ಕಪ್ ವಿಜಯದಲ್ಲಿ ಭಾಗಿಯಾದ ಆರನೇ ಆಟಗಾರ ನಾನು ಎಂಬುವುದೇ ಹೆಮ್ಮೆಯ ವಿಷಯ. ಈ ಬಾರಿ ತಂಡ ದಲ್ಲಿದ್ದ ಯುವ ಆಟಗಾರರು ಪ್ರತಿಭಾನ್ವಿತರಾಗಿದ್ದಾರೆ. ಚೆನ್ನಾಗಿ ಆಡಿದರು. ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ ಇದು. ಹತ್ತು ವರ್ಷಗಳ ನಂತರ ಭಾರತ ತಂಡ ಮತ್ತೊಮ್ಮೆ ಪ್ರಶಸ್ತಿ ಗೆದ್ದಿದೆ.

*ಟೂರ್ನಿಯ ಎಲ್ಲ ಪಂದ್ಯಗಳಲ್ಲಿಯೂ ಸಾಧಿಸಿದ ಗೆಲುವಿನ ಹಿಂದಿನ ಗುಟ್ಟು ಏನು?

ಅಂತಹ ವಿಶೇಷವಾದದ್ದೇನೂ ಇಲ್ಲ.  ಆಟದ ಮೂಲಕೌಶಲಗ ಳನ್ನು ಅತ್ಯಂತ ಸಮರ್ಥವಾಗಿ ಬಳಸಿ ಕೊಂಡು  ಆಡಿದ್ದು ಫಲ ನೀಡಿತು. ಎಲ್ಲ ಆಟಗಾರರಿಗೂ ಒಳ್ಳೆಯ ದೈಹಿಕ ಕ್ಷಮತೆ ಇದೆ. ಫೀಲ್ಡ್‌ ಮತ್ತು ಪೆನಾಲ್ಟಿ ಕಾರ್ನರ್‌ಗಳಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದೇವೆ.

*ಭಾರತದ ಹಾಕಿ ಕ್ರೀಡೆಯ ಬೆಳ ವಣಿಗೆ ಮೇಲೆ ಈ ಜಯವು ಯಾವ ರೀತಿ ಪರಿಣಾಮ ಬೀರಲಿದೆ?

ಮುಂಬರಲಿರುವ ವಿಶ್ವ ಹಾಕಿ ಲೀಗ್ ಫೈನಲ್ ಟೂರ್ನಿಯು ಭುವನೇಶ್ವರದಲ್ಲಿ ನಡೆಯಲಿದೆ. ಅದರ ಪೂರ್ವ ಸಿದ್ಧತೆಗೆ ಏಷ್ಯಾ ಕಪ್ ಟೂರ್ನಿ ಉತ್ತಮ ಅವಕಾಶ ನೀಡಿತು. ಸಾಕಷ್ಟು ಕಲಿತಿದ್ದೇವೆ. ತಪ್ಪು ಗಳನ್ನು ತಿದ್ದಿಕೊಂಡಿದ್ದೇವೆ.

*ಕೋಚ್ ಶೋರ್ಡ್ ಮ್ಯಾರಿಜ್ ಅವರ ಬಗ್ಗೆ...

ಎರಡು–ಮೂರು ವಾರಗಳ ಹಿಂದಷ್ಟೆ ಅವರು ತಂಡಕ್ಕೆ ಕೋಚ್ ಆಗಿ ನೇಮಕವಾದರು. ಆಟದ ಯೋಜನೆ ಮತ್ತು ಶೈಲಿಗಳನ್ನು ಮೊದಲಿನಂತೆಯೇ ಉಳಿಸಿ, ಸಣ್ಣ ಪುಟ್ಟ ಲೋಪಗಳನ್ನು ತಿದ್ದಿದರು. ಎಲ್ಲರಿಗೂ ಉತ್ತಮ ಸಲಹೆಗಳನ್ನು ನೀಡಿದರು. ಆತ್ಮವಿಶ್ವಾಸದಿಂದ ಆಡಲು ಸಹಕರಿಸಿದರು.

ಸರ್ಕಾರ ಅಭಿನಂದಿಸಿಲ್ಲ: ಬೇಸರ

‘ಪ್ರಶಸ್ತಿ ಗೆದ್ದಿರುವ ತಂಡದಲ್ಲಿ ಕರ್ನಾಟಕದಿಂದ ಇಬ್ಬರು ಆಡಿದ್ದೇವೆ. ಆದರೆ ಇದುವರೆಗೂ ಕರ್ನಾಟಕ ಸರ್ಕಾರದಿಂದ ನನಗೆ ಒಂದು ಅಭಿನಂದನೆಯ ಕರೆಯೂ ಬಂದಿಲ್ಲ’ ಎಂದು ಎಸ್‌.ವಿ. ಸುನಿಲ್ ಬೇಸರ ವ್ಯಕ್ತಪಡಿಸಿದರು.

‘ ರಾಜ್ಯದ ಕ್ರೀಡಾ ಸಚಿವರನ್ನು (ಪ್ರಮೋದ್ ಮಧ್ವರಾಜ್) ಹಲವು ಸಲ ಭೇಟಿಯಾಗಿದ್ದೇನೆ. ಉತ್ತಮವಾಗಿ ಸ್ಪಂದಿಸಿದ್ದಾರೆ. ಕ್ರೀಡೆಯ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇದೆ. ಅವರ ಬಗ್ಗೆ ನನಗೆ ಗೌರವ ಇದೆ. ಆದರೂ ಇಲಾಖೆಯಿಂದ ಅಥವಾ ಸರ್ಕಾರದ ಪ್ರತಿನಿಧಿಗಳಿಂದ ಅಭಿನಂದನೆ ಬಂದಿಲ್ಲ. ಹರಿಯಾಣ, ಪಂಜಾಬ್ ರಾಜ್ಯಗಳಲ್ಲಿ ಅಲ್ಲಿಯ ಆಟಗಾರರಿಗೆ ಸಿಗುವ ಮಾನ್ಯತೆ ಮತ್ತು ಗೌರವ ನಮ್ಮಲ್ಲಿಯೂ ಸಿಗುವಂತಾಗಬೇಕು’ ಎಂದರು. ‘ನಮ್ಮ ರಾಜ್ಯದಲ್ಲಿ ಹಾಕಿ ಕ್ರೀಡೆಗೆ ಇತ್ತೀಚೆಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅದರ ಬಗ್ಗೆ ನಮಗೆ ಸಂತಸವಿದೆ’ ಎಂದರು ಸುನಿಲ್‌.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry