ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸೇರಲು ₹1 ಕೋಟಿ ಆಮಿಷ

ಬಿಜೆಪಿ ವಿರುದ್ಧ ಪಟೇಲ್‌ ಮುಖಂಡ ನರೇಂದ್ರ ಆರೋಪ
Last Updated 23 ಅಕ್ಟೋಬರ್ 2017, 20:03 IST
ಅಕ್ಷರ ಗಾತ್ರ

ಅಹಮದಾಬಾದ್‌: ಬಿಜೆಪಿಗೆ ಸೇರುವುದಕ್ಕಾಗಿ ತಮಗೆ ₹1 ಕೋಟಿ ಆಮಿಷ ಒಡ್ಡಲಾಗಿತ್ತು ಎಂದು ಹಾರ್ದಿಕ್‌ ಪಟೇಲ್‌ ನೇತೃತ್ವದ ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿಯ (ಪಿಎಎಎಸ್‌) ಮುಖಂಡ ನರೇಂದ್ರ ಪಟೇಲ್‌ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.

ನರೇಂದ್ರ ಅವರ ಆರೋಪದ ಬೆನ್ನಿಗೇ, ಪಿಎಎಎಸ್‌ನ ಇನ್ನೊಬ್ಬ ಮುಖಂಡ ಕೆಲವು ತಿಂಗಳ ಹಿಂದೆ ಬಿಜೆಪಿ ಸೇರಿದ್ದ ನಿಖಿಲ್‌ ಸಾವನಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಾಟೀದಾರ್‌ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ನೀಡಿದ್ದ ಭರವಸೆಯನ್ನು ಬಿಜೆಪಿ ಈಡೇರಿಸಿಲ್ಲ. ಹಾಗಾಗಿ ಪಕ್ಷ ಬಿಡುತ್ತಿರುವುದಾಗಿ ಸಾವನಿ ಹೇಳಿದ್ದಾರೆ.

ನರೇಂದ್ರ ಪಟೇಲ್‌ ಅವರ ಬಿಜೆಪಿ ಸೇರ್ಪಡೆ ಮತ್ತು ಬಳಿಕ ಅವರು ಮಾಡಿರುವ ಆರೋಪ ಹೆಚ್ಚು ನಾಟಕೀಯವಾಗಿ ನಡೆದಿದೆ. ಗುಜರಾತ್‌ ರಾಜ್ಯ ಬಿಜೆಪಿ ಅಧ್ಯಕ್ಷ ಜೀತೂ ವಘಾನಿ ಅವರ ಸಮ್ಮುಖದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ್ದ ನರೇಂದ್ರ ಅವರು ಬಿಜೆಪಿ ಸೇರುವುದಾಗಿ ಭಾನುವಾರ ಸಂಜೆ ಘೋಷಿಸಿದ್ದರು. ಆದರೆ ಕೆಲವೇ ತಾಸುಗಳ ಬಳಿಕ ರಾತ್ರಿ 10.30ಕ್ಕೆ ಮಾಧ್ಯಮಗೋಷ್ಠಿ ನಡೆಸಿದ ಅವರು, ಬಿಜೆಪಿ ಸೇರುವುದಕ್ಕಾಗಿ ತಮಗೆ ₹1 ಕೋಟಿಯ ಆಮಿಷ ಒಡ್ಡಲಾಗಿತ್ತು. ಆದರೆ ತಮ್ಮ ಸಮುದಾಯಕ್ಕೆ ಮೋಸ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಇದೆಲ್ಲ ಕಾಂಗ್ರೆಸ್‌ ಕುಮ್ಮಕ್ಕಿನಲ್ಲಿ ನಡೆಯುತ್ತಿರುವ ನಾಟಕ ಎಂದು ಬಿಜೆಪಿ ಹೇಳಿದೆ. ‘ಆರೋಪಗಳೆಲ್ಲವೂ ಸುಳ್ಳು. ಕಾಂಗ್ರೆಸ್‌ ಒತ್ತಾಸೆಯಲ್ಲಿ ನರೇಂದ್ರ ಅವರು ನಾಟಕ ಆಡುತ್ತಿದ್ದಾರೆ. ಬಿಜೆಪಿ ಸೇರುವುದಕ್ಕೆ ಅವರಾಗಿಯೇ ಬಂದಿದ್ದರು. ತಾಸುಗಳ ಬಳಿಕ ನಿರ್ಧಾರ ಬದಲಿಸಿದರು. ಎಲ್ಲವೂ ಪೂರ್ವಯೋಜಿತ ಎಂಬುದು ಇದರಿಂದಲೇ ತಿಳಿಯುತ್ತದೆ’ ಎಂದು ಗುಜರಾತ್‌ ಬಿಜೆಪಿ ವಕ್ತಾರ ಭರತ್‌ ಪಾಂಡ್ಯ ಹೇಳಿದ್ದಾರೆ.

ನರೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ  ₹10 ಲಕ್ಷ ಪ್ರದರ್ಶಿಸಿದ್ದರು. ಪಿಎಎಎಸ್‌ನ ಮಾಜಿ ಮುಖಂಡ ಮತ್ತು ಕಳೆದ ಶನಿವಾರ ಬಿಜೆಪಿ ಸೇರಿದ್ದ ವರುಣ್‌ ಪಟೇಲ್‌ ಅವರು ಈ ಮೊತ್ತವನ್ನು ತಮಗೆ ನೀಡಿದ್ದಾರೆ. ಈ ಒಪ್ಪಂದ ಕುದುರಿಸಿದವರು ವರುಣ್‌ ಎಂದು ನರೇಂದ್ರ ಅವರು ಆಪಾದಿಸಿದ್ದಾರೆ.

‘ಬಿಜೆಪಿ ಸೇರಿದರೆ ನನಗೆ ₹1 ಕೋಟಿ ನೀಡುವುದಾಗಿ ವರುಣ್‌ ಹೇಳಿದ್ದರು. ವಘಾನಿ ಅವರನ್ನು ಅವರ ಮನೆಯಲ್ಲಿ ಭೇಟಿಯಾದ ಬಳಿಕ ನನ್ನನ್ನು ಬಿಜೆಪಿ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ನನಗೆ ಮುಂಗಡವಾಗಿ ವರುಣ್‌ ಅವರು ₹10 ಲಕ್ಷ ಕೊಟ್ಟರು. ಸೋಮವಾರ ನಡೆಯಲಿರುವ ಬಿಜೆಪಿ ಕಾರ್ಯಕ್ರಮದಲ್ಲಿ ಉಳಿದ ₹90 ಲಕ್ಷ ನೀಡುವುದಾಗಿ ಅವರು ಹೇಳಿದ್ದರು’ ಎಂದು ನರೇಂದ್ರ ಅವರು ವಿವರಿಸಿದ್ದಾರೆ.

ಪರಸ್ಪರ ಆರೋಪ: ಪಿಎಎಎಸ್‌ನ ಮುಖಂಡರಾದ ವರುಣ್‌ ಪಟೇಲ್‌ ಮತ್ತು ರೇಷ್ಮಾ ಪಟೇಲ್‌ ಅವರು ಕಳೆದ ಶನಿವಾರ ಬಿಜೆಪಿ ಸೇರಿದ್ದರು. ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಹಾರ್ದಿಪ್‌ ಪಟೇಲ್‌ ಅವರು ‘ಕಾಂಗ್ರೆಸ್‌ ಏಜೆಂಟ್‌’. ಹಾಗಾಗಿ ಅವರು ರಾಜ್ಯದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಆದರೆ, ಪಟೇಲ್‌ ಹೋರಾಟವನ್ನು ಮುರಿಯಲು ಬಿಜೆಪಿ ಯತ್ನಿಸುತ್ತಿದೆ. ಅದಕ್ಕಾಗಿ ಪಿಎಎಎಸ್‌ನ ಮುಖಂಡರಿಗೆ ಹಣದ ಆಮಿಷ ಒಡ್ಡಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಸಾವನಿ ಆರೋಪಿಸಿದ್ದಾರೆ. ವರುಣ್‌ ಮತ್ತು ರೇಷ್ಮಾ ಅವರು ಪಿಎಎಎಸ್‌ನ ಪ್ರಮುಖ ಮುಖಂಡರಾಗಿದ್ದರು. ಪಿಎಎಎಸ್‌ನಲ್ಲಿದ್ದಾಗ ಅವರು ಬಿಜೆಪಿಯ ಕಟು ಟೀಕಾಕಾರರಾಗಿದ್ದರು.

ಪಟೇಲ್‌ ಕೇಂದ್ರಿತ ರಾಜಕಾರಣ: ಬಿಜೆಪಿಯ ಸಂಸದೀಯ ಮಂಡಳಿ ಸಭೆಯಲ್ಲಿ ರೇಷ್ಮಾ ಮತ್ತು ವರುಣ್‌ ಅವರು ಬಿಜೆಪಿಗೆ ಸೇರಿದ್ದಾರೆ. ಈ ಸಭೆಯಲ್ಲಿ ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌, ರಾಜ್ಯ ಘಟಕದ ಅಧ್ಯಕ್ಷ ಜೀತೂ ವಘಾನಿ ಅವರಲ್ಲದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರೂ ಇದ್ದರು.

ಕಾಂಗ್ರೆಸ್‌ ಸೇರುವಂತೆ ಪಿಎಎಎಸ್‌ ನಾಯಕ ಹಾರ್ದಿಕ್‌ ಪಟೇಲ್‌ ಅವರಿಗೆ ಗುಜರಾತ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಭರತ್‌ಸಿಂಹ ಸೋಲಂಕಿ ಕಳೆದ ವಾರ ಆಹ್ವಾನ ನೀಡಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚುವರಿಯಾಗಿ ಶೇ 20ರಷ್ಟು ಮೀಸಲಾತಿ ನೀಡುವುದಾಗಿ ಅವರು ಭರವಸೆ ನೀಡಿದ್ದರು.

ಡಿಸೆಂಬರ್‌ 18ರೊಳಗೆ ರಾಜ್ಯದಲ್ಲಿ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಹೇಳಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಚುನಾವಣೆ ಘೋಷಣೆಗೆ ಮುನ್ನವೇ ಜಿದ್ದಾಜಿದ್ದಿ ನಡೆಯುತ್ತಿದೆ.

* ಬಿಜೆಪಿಯ ಬಣ್ಣ ಬಯಲು ಮಾಡುವುದಕ್ಕಾಗಿಯೇ ನಾನು ಆ ಪಕ್ಷಕ್ಕೆ ಸೇರಿದ್ದೆ. ನನ್ನ ಸಮುದಾಯಕ್ಕೆ ವಂಚನೆ ಮಾಡುವುದು ನನಗೆ ಸಾಧ್ಯವಿಲ್ಲ. ನನ್ನನ್ನು ಖರೀದಿಸಲು ಮತ್ತು ಪಾಟೀದಾರ್ ಸಮುದಾಯದೆಡೆಗಿನ ನನ್ನ ಬದ್ಧತೆಯನ್ನು ಬದಲಿಸಲು ಬಿಜೆಪಿಗೆ ಸಾಧ್ಯವಿಲ್ಲ
-ನರೇಂದ್ರ ಪಟೇಲ್‌, ಪಿಎಎಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT