ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 30ರಷ್ಟು ಮಧ್ಯಂತರ ಪರಿಹಾರ ನೀಡಿ

Last Updated 24 ಅಕ್ಟೋಬರ್ 2017, 6:22 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯ ಸರ್ಕಾರಿ ನೌಕರರಿಗೆ ಶೇ 30ರಷ್ಟು ಮಧ್ಯಂತರ ಪರಿಹಾರವನ್ನು ಶೀಘ್ರ ನೀಡಲು ವೇತನ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಮೂಲಕ ಮನವಿ ಸಲ್ಲಿಸಿತು.

2018ರ ಮೇ ವೇಳೆಗೆ ಈ ಸರ್ಕಾರದ ಅವಧಿ ಮುಕ್ತಾಯಗೊಳ್ಳಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದರಿಂದ ವೇತನ ಆಯೋಗದ ಶಿಫಾರಸುಗಳು ಜಾರಿಯಾಗುವ ವಿಷಯವೇ ತ್ರಿಶಂಕು ಸ್ಥಿತಿ ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ತಕ್ಷಣವೇ ಜನವರಿ 2017ರಿಂದ ಅನ್ವಯವಾಗುವಂತೆ ಮಧ್ಯಂತರ ಪರಿಹಾರ ವಿತರಿಸಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.

ರಾಜ್ಯ ಸರ್ಕಾರವು 6ನೇ ವೇತನ ಆಯೋಗವನ್ನು ರಚಿಸಿ, ನೌಕರರಿಗೆ ದೊರೆಯಬೇಕಾದ ವೇತನ ಸೌಲಭ್ಯಗಳ ಕುರಿತು 4 ತಿಂಗಳ ಒಳಗೆ ವರದಿ ನೀಡುವಂತೆ ಈ ಮೊದಲು ಆದೇಶಿಸಿತ್ತು. ನಂತರದಲ್ಲಿ 6ನೇ ವೇತನ ಆಯೋಗವು ವಿವಿಧ ಕಾರಣಗಳನ್ನೊಡ್ಡಿ ಕಾಲಾವಧಿ ವಿಸ್ತರಿಸುವಂತೆ ರಾಜ್ಯ ಸರ್ಕಾರವನ್ನು ಕೋರಿದೆ. ಅದರಂತೆ ರಾಜ್ಯ ಸರ್ಕಾರವು ಆಯೋಗದ ಕಾಲಾವಧಿಯನ್ನು ಇನ್ನೂ 4 ತಿಂಗಳು ವಿಸ್ತರಿಸಿದೆ ಎಂದು ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ಅಧಿಕಾರಿಗಳ ವೇತನ ಸಮಿತಿ 2011ರಲ್ಲಿ ರಚನೆಯಾಗಿದ್ದು, ಅದನ್ನು ಪರಿಗಣಿಸಿದರೆ ವೇತನ ಆಯೋಗವು 5 ವರ್ಷಕ್ಕೆ ಅಂದರೆ 2016ಕ್ಕೆ ರಚನೆಯಾಗಬೇಕಾಗಿತ್ತು. ಆದರೆ, ಸರ್ಕಾರ ಒಂದು ವರ್ಷ ತಡವಾಗಿ ನಿವೃತ್ತ ಐಎಎಸ್‌ ಅಧಿಕಾರಿ ನೇತೃತ್ವದಲ್ಲಿ ವೇತನ ಆಯೋಗವನ್ನು ರಚಿಸಿರುವುದರಿಂದ ವೇತನ ಪರಿಷ್ಕರಣೆ 7 ವರ್ಷ ಮೀರಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಈ ಮಧ್ಯೆ ಆಯೋಗವನ್ನು ಭೇಟಿ ಮಾಡಿ ಶೇ 30ರಷ್ಟು ಮಧ್ಯಂತರ ಪರಿಹಾರ ನೀಡಲು ಸರ್ಕಾರಕ್ಕೆ ತಕ್ಷಣವೇ ಶಿಫಾರಸು ಮಾಡುವಂತೆ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಸರ್ಕಾರದ ಗಮನ ಸೆಳೆಯಲು ಇದೇ 28ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ.ಆರ್‌.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎನ್‌.ಇ.ನಟರಾಜ, ಗೌರವಾಧ್ಯಕ್ಷ ಎನ್‌.ಜೆ.ವರದರಾಜ್‌, ಅಧ್ಯಕ್ಷ ಗೋವಿಂದಪ್ಪ ಸಾವಜ್ಜಿ, ಪದಾಧಿಕಾರಿಗಳಾದ ಸಣ್ಣಪ್ಪ, ವೀರಣ್ಣ, ಆಂಜನೇಯ, ಮೀರಾಬಾಯಿ ಅವರೂ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT