ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ

Published:
Updated:
ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ

ಭಾರತವೂ ಸೇರಿದಂತೆ ವಿಶ್ವದಾದ್ಯಂತ ಷೇರುಪೇಟೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿದೆ. ಎಲ್ಲೆಡೆ ಬಡ್ಡಿ ದರಗಳು ಅಗ್ಗವಾಗಿರುವುದರಿಂದ ನಗದು ಹರಿವಿನ ಪ್ರಮಾಣ ಸಾಕಷ್ಟು ಪ್ರಮಾಣದಲ್ಲಿ ಇದೆ. ಸಾಲ ನಿಧಿಗಳಿಂದ ಷೇರುಗಳತ್ತ ಹಣದ ಹರಿವು ಕೂಡ ಹೆಚ್ಚಿದೆ. ಅಭಿವೃದ್ಧಿ ಹೊಂದಿದ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಆರ್ಥಿಕತೆಗಳಲ್ಲಿಯೂ ಒಂದೇ ಬಗೆಯ ಆರ್ಥಿಕ ಬೆಳವಣಿಗೆ ಕಂಡು ಬರುತ್ತಿದೆ. ಇದು ಜಾಗತಿಕ ಷೇರುಪೇಟೆಗಳಲ್ಲಿ ಸುಸ್ಥಿರ ವಹಿವಾಟು ನಡೆಯಲು ನೆರವಾಗುತ್ತಿದೆ.

ಜಾಗತಿಕ ಆರ್ಥಿಕ ವೃದ್ಧಿ ದರವು (ಜಿಡಿಪಿ) 2017 ಮತ್ತು 2018ರಲ್ಲಿ ಕ್ರಮವಾಗಿ ಶೇ 3.6 ಮತ್ತು ಶೇ 3.7ರಷ್ಟು ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ. ಇದು ಈ ಹಿಂದಿನ ವರ್ಷಗಳ ಸರಾಸರಿ ಮಟ್ಟಕ್ಕಿಂತ ಹೆಚ್ಚಿಗೆ ಇದೆ.

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯಲ್ಲಿ (ಒಇಸಿಡಿ) 45 ದೇಶಗಳ ಆರ್ಥಿಕ ವೃದ್ಧಿಯೂ ಈ ವರ್ಷ ಪ್ರಗತಿಯ ಹಾದಿಯಲ್ಲಿ ಇದೆ. 2007ರ ನಂತರ ಇದೇ ಮೊದಲ ಬಾರಿಗೆ ಈ ಬೆಳವಣಿಗೆ ದಾಖಲಾಗಿದೆ. 2007 ಮತ್ತು 2017ರಲ್ಲಿ ಹೊರತುಪಡಿಸಿದರೆ ಕಳೆದ 50 ವರ್ಷಗಳಲ್ಲಿ ಎರಡು ಬಾರಿ ಮಾತ್ರ ಇಂತಹ ವಿದ್ಯಮಾನ ನಡೆದಿದೆ. 1970ರ ಮತ್ತು 1980ರ ದಶಕದಲ್ಲಿ ಇಂತಹ ಬೆಳವಣಿಗೆ ಕಂಡು ಬಂದಿತ್ತು. ಇದು ವಿಶ್ವದಾದ್ಯಂತ ಉದ್ಯಮ ವಹಿವಾಟು ವಲಯದಲ್ಲಿನ ಸಕಾರಾತ್ಮಕ ವಿದ್ಯಮಾನವಾಗಿದೆ.

ಸರಕು ಮತ್ತು ಸೇವೆಗಳನ್ನು ಒಳಗೊಂಡ ಜಾಗತಿಕ ವ್ಯಾಪಾರದ ಮೌಲ್ಯವೂ  ಹಿಂದಿನ ಮೂರು ತ್ರೈಮಾಸಿಕ ಅವಧಿಗಳಲ್ಲಿ ಇತ್ತೀಚೆಗೆ ಗಮನಾರ್ಹ ಚೇತರಿಕೆ ಕಂಡಿದೆ. ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡು ಬರುತ್ತಿರುವಂತೆ ಉದ್ದಿಮೆ ಸಂಸ್ಥೆಗಳ ವರಮಾನವೂ ವಿಶ್ವದಾದ್ಯಂತ ಏರಿಕೆ ಕಾಣುತ್ತಿದೆ.

ಈ ಜಾಗತಿಕ ಬೆಳವಣಿಗೆಯಲ್ಲಿ ಭಾರತವೂ ಪಾಲ್ಗೊಳ್ಳುವ ಅಗತ್ಯ ಎದುರಾಗಿದೆ. ಗರಿಷ್ಠ ಮುಖಬೆಲೆಯ ನೋಟು ರದ್ದತಿ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯ ಆರಂಭಿಕ ಹಂತದಲ್ಲಿನ ಅಡಚಣೆಗಳಿಂದಾಗಿ ಕಳೆದ ಒಂದು ವರ್ಷದಿಂದ ಆರ್ಥಿಕ ಬೆಳವಣಿಗೆ ದರವು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ

(ಶೇ 5.7) ಕುಸಿದಿದೆ.

ಜಿಎಸ್‌ಟಿ ಜಾರಿಯ ಆರಂಭಿಕ ಹಂತದಲ್ಲಿನ ಅಡಚಣೆಗಳು  ಕ್ರಮೇಣ ದೂರವಾಗುತ್ತಿದ್ದಂತೆ ಸರಕು ಮತ್ತು ಸೇವೆಗಳ ಬಳಕೆ ಪ್ರಮಾಣ ನಿಧಾನವಾಗಿ ಹೆಚ್ಚುತ್ತಿದೆ. ಮೂಲ ಸೌಕರ್ಯಗಳಿಗೆ ಸರ್ಕಾರ ಮಾಡುವ ವೆಚ್ಚದ ಮೊತ್ತವು ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಡಿಮೆ ಪ್ರಮಾಣದಲ್ಲಿಯೇ ಇದೆ. ಇದು ದ್ವಿತಿಯಾರ್ಧದಲ್ಲಿ ಚೇತರಿಕೆ ಕಾಣಬಹುದಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿಕೂಲತೆ ಎದುರಿಸುತ್ತಿದ್ದ ದೇಶಿ ರಫ್ತು ವಲಯದ ಸಮಸ್ಯೆಗಳೂ ನಿಧಾನವಾಗಿ ದೂರವಾಗುತ್ತಿವೆ. ರಫ್ತುದಾರರಿಗೆ ಹೂಡುವಳಿ ತೆರಿಗೆಯ (ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌) ಮರುಪಾವತಿಗೆ ಕೇಂದ್ರ ಸರ್ಕಾರವು ಚಾಲನೆ ನೀಡಿರುವುದು ಈ ವಲಯದಲ್ಲಿನ ಬೆಳವಣಿಗೆಗೆ ಪೂರಕವಾಗಿದೆ.

ಸದ್ಯಕ್ಕೆ ಬೇರೆ ಯಾವುದೇ ಸಮಸ್ಯೆಗಳು ಎದುರಾಗದಿದ್ದರೆ, ದೇಶಿ ಉದ್ದಿಮೆ ಸಂಸ್ಥೆಗಳು ಜಾಗತಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ಇನ್ನಷ್ಟು ತ್ವರಿತಗೊಳಿಸಲಿವೆ.

ಮಹೇಶ್‌ ಪಾಟೀಲ

(ಆದಿತ್ಯ ಬಿರ್ಲಾ ಸನ್‌ಲೈಫ್‌ನ ಸಹ ಸಿಐಒ)

Post Comments (+)