ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ದಿನ ಊಟ ಬಿಟ್ಟು ಅಂಗಲಾಚಿದರೂ ಮುತ್ತು ಕಟ್ಟಿಸಿದರು!

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೆ ಆಗಿನ್ನೂ 11 ವರ್ಷ. ದೇವದಾಸಿ ಆಗಲು ಮನಸ್ಸಿರಲಿಲ್ಲ. ಆದರೆ, ನನ್ನ ಮಾತನ್ನು ಕೇಳುವವರೇ ಇರಲಿಲ್ಲ. 8 ದಿನಗಳು ಊಟ ತಿಂಡಿ ಬಿಟ್ಟು ಅಂಗಲಾಚಿದರೂ ಕಿವಿಗೊಡದೆ ಎಲ್ಲ ಸೇರಿ ಮುತ್ತು ಕಟ್ಟಿಸಿದರು’

ದೇವದಾಸಿಯಾದ ಕತೆಯನ್ನು ಮೂಡಲಗಿಯ ಗಂಗಮ್ಮ ಅವರು ಬಿಚ್ಚಿಡುವಾಗ ಅಲ್ಲಿ ಸೇರಿದ್ದ ಸಭಿಕರ ಕಣ್ಣಂಚಿನಲ್ಲಿ ನೀರ ಹನಿ ಮೂಡಿತ್ತು.

ದೇವದಾಸಿ ಪದ್ಧತಿಯ ಸಂಕಟ ಅನುಭವಿಸಿದ ಅನೇಕರು, ದೇವದಾಸಿ ತಾಯಂದಿರ ಮತ್ತು ಅವರ ಮಕ್ಕಳ ಸಮಗ್ರ ಪುನರ್ವಸತಿ ನೀತಿ ರೂಪಿಸಲು ರಾಷ್ಟ್ರೀಯ ಕಾನೂನು ಶಾಲೆಯ ತಳ ಸಮುದಾಯಗಳ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಒಡಲ ನೋವು ಹಂಚಿಕೊಂಡರು.

‘ತಂದೆ ಲಕ್ವ ಬಡಿದು ಹಾಸಿಗೆ ಹಿಡಿದಿದ್ದರಿಂದ 11ನೇ ವರ್ಷಕ್ಕೆ ಕುಟುಂಬದ ಜವಾಬ್ದಾರಿ ನನ್ನ ಹೆಗಲೇರಿತು. ಇಬ್ಬರು ತಂಗಿಯರು, ಒಬ್ಬ ತಮ್ಮ ಹಾಗೂ ತಾಯಿಯನ್ನು ಸಾಕಲು ಅನಿವಾರ್ಯವಾಗಿ ಈ ದಾರಿ ಹಿಡಿಯಬೇಕಾಯಿತು. ತಂಗಿಯಂದಿರಿಗೆ ಮದುವೆ ಮಾಡಿಸಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರಿಗೆ ತಂದೆ ಯಾರೆಂದೇ ತಿಳಿದಿಲ್ಲ’ ಎಂದರು.

‘ನನಗಿಂತಲೂ ಕಷ್ಟ ಎದುರಿಸಿದ ಅನೇಕ ತಾಯಂದಿರು ಇಲ್ಲಿದ್ದಾರೆ. ಕೆಲವರಿಗೆ ಸಂಕಟ ಹೇಳಿಕೊಳ್ಳಲು ಮನಸ್ಸಿಲ್ಲ. ನನ್ನ ನಿವೇದನೆ ಇಷ್ಟೇ. ನಾವೇಕೆ ದೇವದಾಸಿಯರಾದೆವು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಸರ್ಕಾರ ಏಕೆ ನಮಗೆ ಹೊಲ ನೀಡಬೇಕು, ಮನೆ ಕಟ್ಟಿಕೊಡಬೇಕು, ನಮ್ಮ ಮಕ್ಕಳ ಶಿಕ್ಷಣಕ್ಕೆ ಸೌಲಭ್ಯ ಒದಗಿಸಬೇಕು ಎಂಬುದು ಆಗ ಮನದಟ್ಟಾಗುತ್ತದೆ’ ಎಂದರು.

’ಸರ್ವಸ್ವವನ್ನೂ ಕಿತ್ತುಕೊಂಡು ನಮ್ಮನ್ನು ಭಿಕ್ಷುಕರನ್ನಾಗಿ ಮಾಡಲಾಗಿದೆ’ ಎಂದು ಕೊಪ್ಪಳದ ದ್ಯಾಮವ್ಯ ಅಳಲು ತೋಡಿಕೊಂಡರು.

‘ನನಗೆ ಮುತ್ತುಕಟ್ಟುವುದು ಎಂದರೆ ಏನೆಂದೇ ತಿಳಿದಿರಲಿಲ್ಲ. ತಿಳಿದಿರುತ್ತಿದ್ದರೆ, ನಾನು ಖಂಡಿತಾ ಒಪ್ಪುತ್ತಿರಲಿಲ್ಲ. ನಮ್ಮ ಮಕ್ಕಳಾದರೂ ಸುಖವಾಗಿ ಬದುಕುವ ವಾತಾವರಣವನ್ನು ಸರ್ಕಾರ ಕಲ್ಪಿಸಬೇಕು’ ಎಂದು ಕೃಷ್ಣಾಬಾಯಿ ಒತ್ತಾಯಿಸಿದರು.

ಕುಷ್ಠಗಿಯ ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪಡಿಯಮ್ಮ, ‘ನಮ್ಮವರು ಕಾಯಿಲೆ ಬಂದು ಸತ್ತರೆ ಮಕ್ಕಳು ಅನಾಥವಾಗುತ್ತಾರೆ. ನಮ್ಮ ಜಿಲ್ಲೆಯಲ್ಲೇ ಇಂತಹ 104 ಮಕ್ಕಳಿದ್ದಾರೆ. ಅವರು ಎಲ್ಲಿಗೆ ಹೋಗಬೇಕು. ಅವರನ್ನು ಸಾಕುವವರು ಯಾರು’ ಎಂದು ಪ್ರಶ್ನಿಸಿದರು.

‘ದೇವದಾಸಿ ಪದ್ಧತಿ ನಿರ್ಮೂಲನೆ ಕಾಯ್ದೆ ಜಾರಿ ಆಗಿ 30 ವರ್ಷಗಳ ಮೇಲಾಯಿತು. ಮುತ್ತು ಕಟ್ಟಿಸಿಕೊಂಡವರಲ್ಲಿ 18 ವರ್ಷದೊಳಗಿನವರು ಇದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸೌಖ್ಯ ಸಂಸ್ಥೆಯ ಭಾಗ್ಯಲಕ್ಷ್ಮೀ, ‘ಬಳ್ಳಾರಿ ಜಿಲ್ಲೆಯಲ್ಲಿ 10,500ಕ್ಕೂ ಅಧಿಕ ದೇವದಾಸಿಯರಿದ್ದಾರೆ. ಅನೇಕ ತಾಯಂದಿರು ರಕ್ತಹೀನತೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಿಗೆ ದುಡಿದು ಉಣ್ಣುವುದಕ್ಕೆ ವರ್ಷಪೂರ್ತಿ ಕೆಲಸವೂ ಸಿಗುತ್ತಿಲ್ಲ. ಇಂತಹವರಿಗೆ ನರೇಗಾ ಯೋಜನೆ ಅಡಿ ವರ್ಷದಲ್ಲಿ ಕನಿಷ್ಠ 300 ದಿನಗಳಾದರೂ ಕೆಲಸ ನೀಡಬೇಕು’ ಎಂದು ಸಲಹೆ ನೀಡಿದರು.

ಅಥಣಿಯ ವಿಮೋಚನಾ ಸಂಸ್ಥೆಯ ಅಧ್ಯಕ್ಷ ಬಿ.ಎಲ್‌.ಪಾಟೀಲ, ‘1982ರ ದೇವದಾಸಿ ಪದ್ಧತಿ ನಿರ್ಮೂಲನಾ ಕಾಯ್ದೆ ಹಲ್ಲಿಲ್ಲದ ಹಾವು. ಹೆಣ್ಣುಮಕ್ಕಳನ್ನು ಬಲವಂತವಾಗಿ ಈ ಪದ್ಧತಿಗೆ ದೂಡಿದ ಯಾರೊಬ್ಬರಿಗೂ ಈ ಕಾಯ್ದೆ ಅಡಿ ಶಿಕ್ಷೆಯಾಗಿಲ್ಲ. ಈ ಕಾಯ್ದೆಯನ್ನು ಬಲಪಡಿಸಬೇಕು’ ಎಂದು ಒತ್ತಾಯಿಸಿದರು.

‘ದೇವದಾಸಿಯರಿಗೆ 2 ಎಕರೆ ಭೂಮಿ’

‘ದೇವದಾಸಿ ಪದ್ಧತಿಯಿಂದ ಹೊರಬಂದವರಿಗೆ ತಲಾ ಎರಡು ಎಕರೆ ಭೂಮಿ ಹಂಚಿಕೆ ಮಾಡಲಿದ್ದೇವೆ. ಖಾಸಗಿಯವರಿಂದ ಜಮೀನು ಖರೀದಿಸಲು ₹ 50 ಕೋಟಿ ಮೀಸಲಿಟ್ಟಿದ್ದೇವೆ’ ಎಂದು ಸಮಾಜಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.

‘ಈ ಪದ್ಧತಿ ತ್ಯಜಿಸಿದವರು ಮದುವೆಯಾದರೆ, ಅವರಿಗೆ ₹ 2 ಲಕ್ಷ ನೀಡಲಾಗುವುದು. ದೇವದಾಸಿಯರ ಮಕ್ಕಳು ಎಂಜಿನಿಯರಿಂಗ್‌ ಅಥವಾ ವೈದ್ಯಕೀಯ ಶಿಕ್ಷಣ ಪಡೆದರೆ, ಅದರ ಶುಲ್ಕವನ್ನು ಇಲಾಖೆ ಭರಿಸಲಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ತಾಯಂದಿರಿಗೆ ತಿಂಗಳಿಗೆ ₹ 2,000 ಪ್ರೋತ್ಸಾಹ ಧನ ನೀಡುತ್ತೇವೆ’ ಎಂದು ಸಚಿವರು ಪ್ರಕಟಿಸಿದರು. 

‘ಈ ಮಕ್ಕಳಿಗೆ ಸದ್ಯ ಪರಿಶಿಷ್ಟ ಜಾತಿ ಅಡಿ ಮೀಸಲಾತಿ ಸೌಲಭ್ಯ ಇದೆ. ಇವರಿಗೆ ಒಳ ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರದ ಅನುಮತಿ ಬೇಕು’ ಎಂದು ಸಚಿವರು ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದರು.

‘ದೇವದಾಸಿಯರ ಪುನರ್ವಸತಿ ಬಗ್ಗೆ  ಚರ್ಚಿಸಲು ನಗರದ ಪಂಚತಾರಾ ಹೋಟೆಲ್‌ನಲ್ಲಿ ಕಾರ್ಯಾಗಾರ ಏರ್ಪಡಿಸಬೇಕು. ಅವರನ್ನು ಎ.ಸಿ.ಕಾರಿನಲ್ಲಿ ಅಧಿಕಾರಿಗಳೇ ಇಲ್ಲಿಗೆ ಕರೆದುಕೊಂಡು ಬರಬೇಕು. ಇದರ ಖರ್ಚನ್ನು ನಾವೇ ಭರಿಸುತ್ತೇವೆ’ ಎಂದರು.

ಈ ಪದ್ಧತಿ ಇಲ್ಲಿಗೇ ನಿಲ್ಲಬೇಕು. ನಮ್ಮಂಥವರ ಮಕ್ಕಳೂ ಮೇಸ್ಟ್ರು, ಲಾಯರ್‌, ಪೊಲೀಸ್‌ ಉದ್ಯೋಗ ಮಾಡುವ ದಿನಗಳು ಬರಬೇಕು
– ಪಡಿಯಮ್ಮ, ಕುಷ್ಠಗಿಯ ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯ ಅಧ್ಯಕ್ಷೆ

ದೇವದಾಸಿಯರಿಗೆ ಸವಲತ್ತು ಕಲ್ಪಿಸಲು ಯಾರಾದರೂ ಅಧಿಕಾರಿ ಲಂಚ ಕೇಳಿದರೆ ಅವರನ್ನು ಮರಕ್ಕೆ ಕಟ್ಟಿಹಾಕಿ
–ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT