ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಭೀಮಣ್ಣ ಖಂಡ್ರೆ ಆಗ್ರಹ

Last Updated 25 ಅಕ್ಟೋಬರ್ 2017, 5:48 IST
ಅಕ್ಷರ ಗಾತ್ರ

ಬೀದರ್: ‘ಅಖಿಲ ಭಾರತ ವೀರಶೈವ ಮಹಾಸಭೆಯು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಪ್ರಸ್ತಾವ ಮನ್ನಿಸಿ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಭೀಮಣ್ಣ ಖಂಡ್ರೆ ಆಗ್ರಹಿಸಿದ್ದಾರೆ. ‘ಅಖಿಲ ಭಾರತ ವೀರಶೈವ ಮಹಾಸಭಾ 113 ವರ್ಷಗಳಿಂದ ಅಸ್ತಿತ್ವದಲ್ಲಿರುವ ಸಮಾಜದ ಸಂಸ್ಥೆಯಾಗಿದೆ.

ಗುರುವಿರಕ್ತರೆಲ್ಲ ತಮ್ಮ ಮತ-ಭೇದಗಳನ್ನು ಬಿಟ್ಟು ನಾವೆಲ್ಲರೂ ಒಂದೇ ಎಂದು ಘೋಷಿಸಿದ್ದಾರೆ. ಒಗ್ಗಟ್ಟು ಇದ್ದ ಕಾರಣಕ್ಕೆ ‘ಅನುದೇವಾ ಹೊರಗಣವನು’ ಹಾಗೂ ‘ಧರ್ಮ ಕಾರಣ’ ಕೃತಿಗಳನ್ನು ಮುಟ್ಟುಗೋಲು ಹಾಕಲು ಸಾಧ್ಯವಾಗಿದೆ’ ಎಂದಿದ್ದಾರೆ.

‘ಮಾತೆ ಮಹಾದೇವಿ ಹಾಗೂ ಕೆಲವು ವಿಘಟನಾ ಶಕ್ತಿಗಳು ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಭೇದ-ಭಾವ ಹುಟ್ಟಿಸಿ ಸಮಾಜದ ದಾರಿ ತಪ್ಪಿಸಿ, ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಮಾತೆ ಮಹಾದೇವಿ, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಅದೊಂದು ವೃದ್ಧಾಶ್ರಮವಾಗಿದ್ದು, ಅದರ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರು ವೃದ್ಧಾಶ್ರಮದ ವಾರ್ಡನ್‌ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಮಾತೆ ಮಹಾದೇವಿ ಸ್ವತಃ ಎಪ್ಪತ್ತೊಂದು ವರ್ಷಗಳನ್ನು ದಾಟಿದ ವಯೋವೃದ್ಧೆ ಎನ್ನುವುದು ಎಲ್ಲರಿಗೂ ಗೊತ್ತಿದೆ’ ಎಂದು ತಿಳಿಸಿದ್ದಾರೆ.

’ಬಸವಣ್ಣನವರ ಅಂಕಿತ ನಾಮ ತಿರುಚಿ ಇಡೀ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಸುಪ್ರಿಂ ಕೋರ್ಟ್‌ ಛೀಮಾರಿ ಹಾಕಿದೆ. ಬಸವೇಶ್ವರರ ಬಗೆಗೆ ಗೌರವವಿಲ್ಲದ ಇವರಿಗೆ ವೀರಶೈವ ಮಹಾಸಭಾ ಹಾಗೂ ಧರ್ಮಗುರುಗಳ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದು ತಿಳಿಸಿದ್ದಾರೆ. ‘ವಿಭಜನೆಯಿಂದ ಸಮಾಜ ನಾಶವಾಗುತ್ತದೆ. ಆದ್ದರಿಂದ ಇಂತಹ ಜನರಿಗೆ ಬೆಂಬಲ ನೀಡುವ ವಿಷಯದಲ್ಲಿ ಎಚ್ಚರ ವಹಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT