ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಹುಟ್ಟು ಪಡೆಯಬೇಕಿದೆ ಬಂಡಾಯ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಂಡಾಯ ಇಂದು ಮರುಹುಟ್ಟು ಪಡೆಯಬೇಕಿದೆ. ಒಂದು ವೇಳೆ ಮರುಹುಟ್ಟು ಪಡೆಯದಿದ್ದರೆ ಇನ್ನಷ್ಟು ಗುಬ್ಬಿಗಳು ಬಂದೂಕಿನ ಗುಂಡಿಗೆ ಎದೆ ಕೊಡಬೇಕಾಗುತ್ತದೆ’ ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.

ಬರಗೂರು ಆತ್ಮೀಯ ಬಳಗ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಸಂಘ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ನಮ್ಮೊಳಗಿನ ಬರಗೂರು–ಒಂದು ಚಿಂತನೆ’ ವಿಚಾರಸಂಕಿರಣದಲ್ಲಿ ಮಾತನಾಡಿದರು.

‘ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್‌ ಅವರ ಸಾವು ಸಂಭವಿಸಲು ನಮ್ಮಲ್ಲಿ ಜನರ ನೋವಿಗೆ ಮಿಡಿಯುವ ಪ್ರಾಣಮಿತ್ರ ಇಲ್ಲದಾಗಿರುವ ಸ್ಥಿತಿಯೇ ಪರೋಕ್ಷ ಕಾರಣ. ಬಂದೂಕಿನ ಬಾಯಿಯಲ್ಲಿ ಗುಬ್ಬಿ ಗೂಡು ಕಟ್ಟಿದೆಯೇ ಅಂಥ ಪ್ರಶ್ನಿಸಿಕೊಂಡರೆ, ಇಂದು ನಾವು ಇರುವ ಸ್ಥಿತಿ ಮತ್ತು ಸಂದರ್ಭ ಅದಕ್ಕೆ ತಕ್ಷಣ ತಾನಾಗೇ ಇಲ್ಲ ಎನ್ನುವ ಉತ್ತರ ಕೊಡುತ್ತದೆ’ ಎಂದು ವಿಷಾದಿಸಿದರು.

‘ಗೋವಿನ ಹೆಸರಿನಲ್ಲಿ ಜನರನ್ನು ಕೊಲ್ಲಲಾಗುತ್ತದೆ. ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಜನರ ಬದುಕು ಇದೆ. ಇದರ ಬಗ್ಗೆ ಯಾರಾದಾರೂ ಮಾತನಾಡಿದರೆ ಕೊಲ್ಲುತ್ತೇವೆ ಎನ್ನುತ್ತಾರೆ. ನನ್ನ ಮೇಲೂ ನ್ಯಾಯಾಲಯದಲ್ಲೂ ಮೊಕದ್ದಮೆಗಳಿವೆ. ನನ್ನ ಹಾಗೆಯೇ ಬಂಡಾಯದ ಸ್ನೇಹಿತರ ಮೇಲೂ ಮೊಕದ್ದಮೆಗಳಿವೆ. ಮಾತನಾಡುವವರ ಬಾಯಿಯನ್ನು ಮುಚ್ಚುವ ತಂತ್ರಗಾರಿಕೆಯಾನ್ನಾಗಿ ಮೊಕದ್ದಮೆ ಹೂಡಲಾಗುತ್ತಿದೆ’ ಎಂದು ದೂರಿದರು.

ಸಂಸದ ಎಂ.ವೀರಪ್ಪ ಮೊಯಿಲಿ ಮಾತನಾಡಿ, ‘ದೇಶದ ಸಂಸ್ಕೃತಿ ಎಂದಾಗ ಅದನ್ನು ಹಿಂದೂ ಅಥವಾ ವೈದಿಕ ಸಂಸ್ಕೃತಿ ಎಂದೂ ಬಿಂಬಿಸಲಾಗುತ್ತದೆ. ಹೀಗೆ ಮಾಡುವುದು ಸಂಸ್ಕೃತಿ ಕುಬ್ಜಗೊಳಿಸಿದಂತಾಗುತ್ತದೆ. ಏಕ ಸಂಸ್ಕೃತಿ ಕೃತಕವಾಗಿ ಹುಟ್ಟಿದ್ದಾಗಿದೆ. ಬಹುಸಂಸ್ಕೃತಿಯೇ ನಮ್ಮ ದೇಶದ ನಿಜವಾದ ಸಂಸ್ಕೃತಿ. ಇದರ ಪುನರುತ್ಥಾನವಾಗಬೇಕು’ ಎಂದರು.

ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ನಮ್ಮ ಸಾಮಾಜಿಕ ಸಂಸ್ಕೃತಿಯೊಳಗೆ ಬೆವರು, ಬುದ್ಧಿ ಹಾಗೂ ಶ್ರಮ ಈ ಮೂರು ನೆಲೆಗಳಿವೆ. ಬಲದ ಸಂಸ್ಕೃತಿ ಯಾವಾಗಲೂ ಕುರ್ಚಿಗೆ ಆಸೆಪಟ್ಟು, ಅಧಿಕಾರ ಬಯಸುತ್ತದೆ. ಬುದ್ಧಿ ತಾನು ಎಲ್ಲವನ್ನೂ ನಿಯಂತ್ರಿಸಬೇಕೆಂದು ಭಾವಿಸಿ, ಶತಮಾನಗಳಿಂದಲೂ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ನಿಯಂತ್ರಿಸುತ್ತಲೇ ಬಂದಿದೆ' ಎಂದರು.

ವಿಚಾರ ಸಂಕಿರಣದಲ್ಲಿ ಮಂಡನೆಯಾದ ವಿಷಯ ಕ್ರೋಡೀಕರಿಸಿ, ಬರಗೂರು ಬದುಕು ಮತ್ತು ಸಾಹಿತ್ಯ ಬರಹ ಕೃತಿ ತರಲು ಪರಿಷತ್‌ ಉದ್ದೇಶಿಸಿದೆ.

-ಮನುಬಳಿಗಾರ, ಕಸಾಪ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT