ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿವರ್ತನಾ ಯಾತ್ರೆ: ಪ್ರಮುಖರ ಸಮಿತಿ ಸಭೆ ಇಂದು

ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮ ಸಾಧ್ಯತೆ
Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಿದ್ಧತೆ ಕುರಿತು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಮತ್ತು ಶುಕ್ರವಾರ ಮಹತ್ವದ ಸಭೆಗಳನ್ನು ನಡೆಸಲಿದ್ದಾರೆ.

ಪಕ್ಷದ ಕಚೇರಿಯಲ್ಲಿ ಗುರುವಾರ (ಅ.26) ನಡೆಯಲಿರುವ ಪ್ರಮುಖರ ಸಮಿತಿ ಸಭೆಯಲ್ಲಿ ಜಾವಡೇಕರ್, ಚುನಾವಣಾ ಸಹ ಉಸ್ತುವಾರಿ ಹಾಗೂ ಕೇಂದ್ರ ಸಚಿವ ಪೀಯೂಷ್ ಗೋಯಲ್, ರಾಜ್ಯ ಉಸ್ತುವಾರಿ ಮುರುಳೀಧರರಾವ್ ಭಾಗಿಯಾಗಲಿದ್ದಾರೆ.

‘70ಕ್ಕೂ ಹೆಚ್ಚು ದಿನ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಎಲ್ಲ ನಾಯಕರೂ ಪಾಲ್ಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ‍ಐದಾರು ಪ್ರಮುಖರು ಇರುವ ತಂಡ ರಚಿಸಿ, ಒಂದೊಂದು ವಾರ ಒಂದೊಂದು ತಂಡ ಯಾತ್ರೆಯಲ್ಲಿ ಭಾಗವಹಿಸಬೇಕು ಎಂಬ ಚಿಂತನೆ ನಡೆದಿದೆ. ತಂಡದಲ್ಲಿ ಯಾರು ಇರಬೇಕು ಎಂಬ ಪಟ್ಟಿಯನ್ನು ಪ್ರಮುಖರ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸರಣಿ ಸಭೆ: ಯಾತ್ರೆ ಯಶಸ್ವಿಗೊಳಿಸುವ ಕುರಿತು ಜಾವಡೇಕರ್ ಶುಕ್ರವಾರ(ಅ.27) ಇಡೀ ದಿನ ಸರಣಿ ಸಭೆ ನಡೆಸಲಿದ್ದಾರೆ. ಸಾಂಪ್ರದಾಯಿಕ, ಅಸಾಂಪ್ರದಾಯಿಕ ಪ್ರಚಾರ ತಂಡ ಹಾಗೂ ಬೂತ್ ಮಟ್ಟದ ಸಮಿತಿಯ ಪ್ರತ್ಯೇಕ ಸಭೆಗಳು ನಡೆಯಲಿವೆ. ಇದಲ್ಲದೇ ವಿಭಾಗಾವಾರು ಪ್ರಮುಖರ ಜತೆಯೂ ಅವರು ಸಭೆ ನಡೆಸಲಿದ್ದಾರೆ.

ಅಭ್ಯರ್ಥಿ ಆಯ್ಕೆ?: ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ವಿಧಾನಪರಿಷತ್ತಿನ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಮುಖರ ಸಮಿತಿ ಸಭೆಯಲ್ಲಿ ಅಂತಿಮ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

15 ದಿನಗಳ ಹಿಂದೆ ನಡೆದ ಸಭೆಯಲ್ಲಿ ಈ ಕುರಿತು ಪ್ರಸ್ತಾಪವಾಗಿತ್ತು. ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಘಟಕಗಳಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸುವಂತೆ ಜಾವಡೇಕರ್ ಸೂಚಿಸಿದ್ದರು. ಎಲ್ಲ ಕ್ಷೇತ್ರಗಳಿಂದ ವರದಿ ಬಂದಿದ್ದು, ಪ್ರಮುಖರ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ಪ್ರತಿನಿಧಿಸುವ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸದಸ್ಯರಾದ ರಾಮಚಂದ್ರಗೌಡ, ಗಣೇಶ ಕಾರ್ಣಿಕ್, ಅಮರನಾಥ ಪಾಟೀಲ ಹಾಗೂ ಜೆಡಿಎಸ್‌ ಪ್ರತಿನಿಧಿಸುವ ರಮೇಶಬಾಬು, ಉಪ ಸಭಾಪತಿ ಮರಿತಿಬ್ಬೇಗೌಡ ಅವಧಿ ಜೂನ್‌ ಗೆ ಮುಕ್ತಾಯವಾಗಲಿದೆ.

ಕಾರ್ಣಿಕ್, ಪಾಟೀಲ ಅವರಿಗೆ ಟಿಕೆಟ್ ಖಾತ್ರಿಯಾಗಿದೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT