ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ದ್ವಿಚಕ್ರ ವಾಹನ ಉದ್ಯಮ

100 ಸಿಸಿ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಏಕ ಆಸನಕ್ಕೆ ಅವಕಾಶ
Last Updated 26 ಅಕ್ಟೋಬರ್ 2017, 10:05 IST
ಅಕ್ಷರ ಗಾತ್ರ

ಕೊಪ್ಪಳ: 100 ಸಿಸಿಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳನ್ನು ಒಂದೇ ಆಸನ ಇದ್ದಲ್ಲಿ ಮಾತ್ರ ನೋಂದಣಿ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಉದ್ಯಮದ ಮೇಲೆ ನೇರ ಪರಿಣಾಮ ಬೀರಿದೆ.

ಇರುವ ಸಂಗ್ರಹವನ್ನು ಖಾಲಿ ಮಾಡುವಂತೆಯೂ ಇಲ್ಲ. ಉತ್ಪಾದಕ ಕಂಪೆನಿಗಳ ನಿರ್ಧಾರವೂ ಇನ್ನೂ ಬಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯ ಪ್ರಸಾರವಾಗುತ್ತಿದ್ದಂತೆಯೇ ಗ್ರಾಹಕರು ಕೂಡಾ ಶೋರೂಂಗಳಿಂದ ದೂರ ಇದ್ದಾರೆ.

ನಗರದಲ್ಲಿ ಹೀರೋ, ಹೊಂಡಾ, ಯಮಹಾ, ಟಿವಿಎಸ್‌, ಸುಜುಕಿ ಮತ್ತು ಬಜಾಜ್‌ ಕಂಪೆನಿಗಳ ಶೋರೂಂಗಳು ಇವೆ. ಈ ಪೈಕಿ ಯಮಹಾ ಮತ್ತು ಹೊಂಡಾ ಕಂಪೆನಿಗಳ ವಹಿವಾಟಿಗೆ ಯಾವುದೇ ಧಕ್ಕೆ ಆಗಿಲ್ಲ. ಏಕೆಂದರೆ ಇಲ್ಲಿ ಎಲ್ಲವೂ 110 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ವಾಹನಗಳನ್ನಷ್ಟೇ ಮಾರಾಟ ಮಾಡಲಾಗುತ್ತಿದೆ. ದೊಡ್ಡ ಹೊಡೆತ ಬಿದ್ದದ್ದು ಟಿವಿಎಸ್‌ ಮೊಪೆಡ್‌ ಮತ್ತು ಮಹಿಳೆಯರು ಚಲಾಯಿಸುವ ಸ್ಕೂಟರ್‌ಗಳ ಮೇಲೆ.

ವಿವಿಧ ಕಂಪೆನಿಗಳ ಮಾರಾಟ ಪ್ರತಿನಿಧಿಗಳು ಹೇಳುವ ಪ್ರಕಾರ 'ಪ್ರತಿ ಶೋರೂಂನಲ್ಲಿ ಏನಿಲ್ಲವೆಂದರೂ ಪ್ರತಿ ತಿಂಗಳಿಗೆ 200ರಿಂದ 250 ದ್ವಿಚಕ್ರ ವಾಹನಗಳು ಮಾರಾಟವಾಗುತ್ತವೆ. ಹಬ್ಬದ ಸೀಸನ್‌ನಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು ಇರುತ್ತದೆ. ಇದರಲ್ಲಿ ಬಹುಪಾಲು 100 ಸಿಸಿ ಒಳಗಿನ ವಾಹನಗಳು. ಈಗ ಹೊಸ ಆದೇಶ ಏಕಾಏಕಿ ಈ ಮಾರುಕಟ್ಟೆಯ ಮೇಲೆ ಹೊಡೆತ ಕೊಟ್ಟಿದೆ' ಎನ್ನುತ್ತಾರೆ.

ನಗರದ ಹೊರವಲಯದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಆವರಣದಲ್ಲಿ ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ತೀವ್ರ ಕುಸಿದಿದೆ. ಯುವಜನರು, ಕಾಲೇಜು ವಿದ್ಯಾರ್ಥಿಗಳು ಬಳಸುವ 125 ಸಿಸಿಗಿಂತ ಅಧಿಕ ಸಾಮರ್ಥ್ಯದ ಬೆರಳೆಣಿಕೆಯಷ್ಟು ಬೈಕ್‌ಗಳು ನೋಂದಣಿಯಾಗುತ್ತಿದ್ದವು. ನೋಂದಣಿ ಪ್ರಮಾಣ ಇಳಿಕೆಯಿಂದಾಗಿ ಪ್ರತಿ ವಾಹನದಿಂದ ಬರುತ್ತಿದ್ದ ಶೇ 8ರಿಂದ 10ರಷ್ಟು ರಸ್ತೆ ತೆರಿಗೆ ಮೊತ್ತವೂ ಇಳಿಮುಖವಾಗಿದೆ ಎಂದು ಕಚೇರಿ ಮೂಲಗಳು ಹೇಳಿವೆ.

'ಸರ್ಕಾರದ ಹೊಸ ಆದೇಶದಿಂದ ನೂರು ಸಿಸಿ ಒಳಗಿನ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದೇವೆ. ಸಹಜವಾಗಿ ಮಾರುಕಟ್ಟೆ ಮೇಲೆ ಪರಿಣಾಮ ಆಗಿದೆ. ಗ್ರಾಹಕರಿಗೆ ತಿಳಿಹೇಳುತ್ತಿದ್ದೇವೆ. ಈಗಾಗಲೇ ಬುಕ್ಕಿಂಗ್‌ ಮಾಡಿದವರು ಖರೀದಿ ಪ್ರಕ್ರಿಯೆಯನ್ನು ಮುಂದೂಡಿದ್ದಾರೆ' ಎಂದು ವಿಜಯಾ ಹೀರೋ ವ್ಯವಸ್ಥಾಪಕ ಲಕ್ಷ್ಮಣ್‌ ಹೇಳಿದರು.

ದ್ವಿಚಕ್ರ ವಾಹನ ಇಂದಿನ ಅಗತ್ಯ. ಎಲ್ಲರಿಗೂ ಬೇಕು. ಈ ಆದೇಶದಿಂದ ಎಲ್ಲ ಗ್ರಾಹಕರಿಗೂ ಸಮಸ್ಯೆ ಆಗಿದೆ ಎಂದರು ಲಕ್ಷ್ಮಣ್‌.

ಹೊಂಡಾಕ್ಕೆ ನಿಶ್ಚಿಂತೆ: 'ನಮ್ಮ ಕಂಪೆನಿಯಲ್ಲಿ ದ್ವಿಚಕ್ರ ವಾಹನಗಳ ಎಂಜಿನ್‌ ಸಾಮರ್ಥ್ಯ 110 ಸಿಸಿಯಿಂದಲೇ ಆರಂಭವಾಗುತ್ತದೆ. ಹೊಂಡಾ ಕಂಪೆನಿ ಜಾಗತಿಕಮಟ್ಟದಲ್ಲಿ ಮಾರುಕಟ್ಟೆ ಹೊಂದಿದೆ. ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ವಾಹನಗಳನ್ನು ಉತ್ಪಾದಿಸುತ್ತಿದೆ. ಬಹುಶಃ ಈ ಸ್ಥಿತಿಯ ಬಗ್ಗೆ ಕಂಪೆನಿ ಬಹಳ ಹಿಂದೆಯೇ ಆಲೋಚಿಸಿದಂತಿದೆ.

ನಮ್ಮ ಮಾರಾಟ ಪ್ರಮಾಣದ ಮೇಲೆ ಯಾವುದೇ ಪರಿಣಾಮ ಆಗಿಲ್ಲ' ಎಂದು ಹೊಂಡಾ ಕಂಪೆನಿಯ ಡೀಲರ್‌, ತಾಲೇಡಾ ಮೋಟಾರ್ಸ್‌ ಮಾಲೀಕ ಜಿತೇಂದ್ರ ಕುಮಾರ್‌ ತಾಲೇಡಾ ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಬಹುಬೇಡಿಕೆ ಇರುವ ಟಿವಿಎಸ್‌ ಮೊಪೆಡ್‌ ಕೂಡಾ ಮಾರಾಟವಾಗದ ಸಂಕಟಕ್ಕೆ ಸಿಲುಕಿದೆ. ಅಗ್ಗದ ದರದಲ್ಲಿ ರೈತಾಪಿ ಜನರ ಮನೆಮಾತಾಗಿದ್ದ ವಾಹನ ಮೂಲೆಗುಂಪಾಗುವ ಭೀತಿ ಎದುರಿಸುತ್ತಿದೆ.

***

ಜನ ಏನಂತಾರೆ?

ದ್ವಿಚಕ್ರ ವಾಹನ ಅಪಘಾತಗಳಲ್ಲಿ ಹಿಂಬದಿ ಸವಾರರು ಮೃತಪಟ್ಟ ಉದಾಹರಣೆಗಳು ಹೆಚ್ಚು ಇದ್ದ ಕಾರಣ 100 ಸಿಸಿಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ವಾಹನಗಳಲ್ಲಿ ಏಕ ಆಸನಕ್ಕೆ ಅವಕಾಶ ನೀಡಿರುವುದು ಅವೈಜ್ಞಾನಿಕ ಎಂದು ಹೇಳಿದರು ವಾಹನ ಸವಾರ ರಮೇಶ್‌.

ಅಪಘಾತವೆಂದರೆ ಯಾವ ವಾಹನವಾದರೂ ಅಷ್ಟೇ. ಯಾರು ಗಾಯಗೊಳ್ಳುತ್ತಾರೆ, ಸಾಯುತ್ತಾರೆ ಎಂದು ಊಹಿಸಲಾಗದು. ಅದನ್ನು 100 ಸಿಸಿ ವಾಹನಗಳಿಗಷ್ಟೇ ಸೀಮಿತಗೊಳಿಸಿದ್ದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು ಅವರು.

100 ಸಿಸಿ ಎಂಜಿನ್‌ ವಾಹನಗಳು ಬೆಲೆಯಲ್ಲಿ ಸ್ವಲ್ಪ ಅಗ್ಗ ಮತ್ತು ತೂಕದಲ್ಲಿ ಲಘು, ನಿರ್ವಹಣಾ ವೆಚ್ಚ ಕಡಿಮೆ, ಉತ್ತಮ ಮೈಲೇಜ್‌ ಕಾರಣಕ್ಕೆ ಜನಸಾಮಾನ್ಯರು ಅವುಗಳನ್ನು ಆದ್ಯತೆ ಮೇಲೆ ಕೊಳ್ಳುತ್ತಾರೆ. ಅದಕ್ಕೂ ಆಸನ ಮಿತಿ ಹೇರಿದರೆ ಹೇಗೆ ಎಂದು ಪ್ರಶ್ನಿಸಿದರು ಹುಲುಗಪ್ಪ.

ವಾಹನವನ್ನು ಎಚ್ಚರಿಕೆಯಿಂದ ಮಿತವೇಗದಲ್ಲಿ ಓಡಿಸಿದರೆ ಏನೂ ಸಮಸ್ಯೆ ಇರುವುದಿಲ್ಲ. ಎಂಜಿನ್‌ಗೆ ಇಬ್ಬರು ಸವಾರರನ್ನು ಒಯ್ಯುವ ಸಾಮರ್ಥ್ಯ ಇದೆ. ಸವಾರನಲ್ಲಿ ಎಚ್ಚರಿಕೆ ಮುಖ್ಯ. ಅದರ ಬದಲು ಆಸನ ಸಾಮರ್ಥ್ಯವನ್ನೇ ಕಡಿತಗೊಳಿಸಿದರೆ ಇಂಧನ ಅಪವ್ಯಯಕ್ಕೆ ದಾರಿಯಾಗುತ್ತದೆ ಎನ್ನುತ್ತಾರೆ ಮೆಕ್ಯಾನಿಕ್‌ ಮೆಹಬೂಬ್‌

***

ಇನ್ನು ಮೂರು ದಿನಗಳಲ್ಲಿ 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ಸ್ಥಗಿತಗೊಳಿಸುತ್ತೇವೆ. ಈಗಾಗಲೇ ಶೋರೂಂಗಳಿಗೂ ಸೂಚನೆ ನೀಡಿದ್ದೇವೆ.
ನೂರ್‌ ಮಹಮದ್‌ ಪಾಷಾ,ಪ್ರಾದೇಶಿಕ ಸಾರಿಗೆ ಅಧಿಕಾರಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT