ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಸಾನದತ್ತ ಜ್ಞಾನ ಭಂಡಾರ..!

ವಿವಿಧ ಭಾಷೆಗಳ 24856 ಪುಸ್ತಕಗಳು ಲಭ್ಯವಿಲ್ಲಿ; ಮಳೆ ನೀರಿಗೆ ಒದ್ದೆ
Last Updated 26 ಅಕ್ಟೋಬರ್ 2017, 11:29 IST
ಅಕ್ಷರ ಗಾತ್ರ

*ಬಾಬುಗೌಡ ರೋಡಗಿ

ತಿಕೋಟಾ (ವಿಜಯಪುರ): ಈ ಭಾಗದ ಅಸಂಖ್ಯಾತ ಜನ ಸಮೂಹಕ್ಕೆ ಜ್ಞಾನ ದೀವಿಗೆಯಾಗಿದ್ದ, ಶತಮಾನದ ಐತಿಹ್ಯ ಹೊಂದಿರುವ ಗ್ರಾಮದ ಸಾರ್ವಜನಿಕ ಗ್ರಂಥಾಲಯ ಅವಸಾನದತ್ತ ಸಾಗಿದೆ.

ಚಾವಣಿಯ ತಗಡು ತೂತು ಬಿದ್ದಿದೆ. ಮಳೆ ಬಂದ ಸಂದರ್ಭ ನೀರು ಸೋರಿದ್ದರಿಂದ ಒಳಗಿದ್ದ ಅಪಾರ ಸಂಖ್ಯೆಯ ಪುಸ್ತಕಗಳು ಹಾಳಾಗಿವೆ. ಕಟ್ಟಡದ ಸುತ್ತಲೂ ಕಸದ ರಾಶಿ ಬಿದ್ದಿದೆ. ಎಲ್ಲೆಡೆ ಹುಲ್ಲು ಬೆಳೆದಿದ್ದರಿಂದ ಹುಳು ಹುಪ್ಪಡಿಗಳ ತಾಣವಾಗಿ ಮಾರ್ಪಟ್ಟಿದೆ. ಪಕ್ಕದಲ್ಲೇ ಮದ್ಯದ ಪ್ಯಾಕೇಟ್‌ ರಾಶಿ ರಾಶಿ ಬಿದ್ದಿದ್ದು, ಜ್ಞಾನದ ಕಣಜ ಇದೀಗ ಅಕ್ರಮ ತಾಣವಾಗಿದೆ.

7000ಕ್ಕೂ ಅಧಿಕ ಹೊಸ ಪುಸ್ತಕಗಳು ಗ್ರಂಥಾಲಯಕ್ಕೆ ಆರೇಳು ತಿಂಗಳ ಹಿಂದೆ ಸರಬರಾಜಾಗಿದ್ದರೂ, ಇಂದಿಗೂ ಒಂದೇ ಒಂದು ಪುಸ್ತಕ ಹೊರ ತೆಗೆದಿಲ್ಲ. ಚೀಲದಲ್ಲೇ ಭದ್ರವಾಗಿವೆ. ಗ್ರಂಥ ಪಾಲಕರನ್ನು ಈ ಕುರಿತಂತೆ ಪ್ರಶ್ನಿಸಿದರೆ ಪುಸ್ತಕ ಜೋಡಿಸಿಡಲು ರ‍್ಯಾಕ್‌ ಸೌಲಭ್ಯವೇ ಇಲ್ಲ ಎನ್ನುತ್ತಾರೆ ಎಂದು ಗ್ರಾಮದ ಶಿಕ್ಷಕ ಜಿ.ಎಸ್‌.ಭೂಸಗೊಂಡ ‘ಪ್ರಜಾವಾಣಿ’ ಬಳಿ ವಿಷಾದ ವ್ಯಕ್ತಪಡಿಸಿದರು.

‘ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ ಆಸಕ್ತರಿಗೆ, ವಿದ್ಯಾವಂತರಿಗೆ ಗ್ರಂಥಾಲಯ ಜ್ಞಾನ ಧಾರೆ ಎರೆದಿದೆ. ನಿರುದ್ಯೋಗಿಗಳು ಇಲ್ಲಿ ಅಭ್ಯಾಸ ನಡೆಸಿ ಸರ್ಕಾರಿ ನೌಕರಿ ಗಿಟ್ಟಿಸಿದ್ದಾರೆ. ಇಂತಹ ಅಸಂಖ್ಯಾತರಲ್ಲಿ ನಾನೂ ಒಬ್ಬ. ಆದರೆ ಇದೀಗ ಗ್ರಂಥಾಲಯದ ವಾತಾವರಣ ಗಮನಿಸಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಮದ್ಯದ ಬಾಟಲ್‌, ಕಸದ ರಾಶಿ, ಒತ್ತುವರಿ, ಚಹಾ ಅಂಗಡಿ, ಪಾನ್‌ಶಾಪ್‌, ಮಾಂಸದ ಅಂಗಡಿಗಳು ಇಲ್ಲಿ ಕಾರ್ಯಾಚರಿಸುತ್ತಿರುವುದು ಅಕ್ಷರಶಃ ನೋವಿನ ಸಂಗತಿ’ ಎಂದು ಹೇಳಿದರು.

‘ಗ್ರಾಮದಲ್ಲಿ ಛತ್ರಿಯ ಕುಟುಂಬದವರು ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭಿಸಿದ್ದ ಬಾಲಚಂದ್ರ ವಾಚನಾಲಯ (ಇಂದಿನ ಸಾರ್ವಜನಿಕರ ಗ್ರಂಥಾಲಯ) ಹಲವರ ಬಾಳಿಗೆ ಬೆಳಕಾಗಿದೆ. ಖಾಸಗಿ ಒಡೆತನದಲ್ಲಿದ್ದ ಗ್ರಂಥಾಲಯವನ್ನು ಸರ್ಕಾರ 1978ರಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಗ್ರಂಥಾಲಯ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡಿದೆ’ ಎಂದು ಗ್ರಂಥಾಲಯದ ನಿರ್ವಹಣೆಯ ಹೊಣೆ ಹೊತ್ತಿರುವ ದಶರಥಸಿಂಗ್ ದಂಡೇಕರ

‘ದಾಖಲೆಗಳ ಪ್ರಕಾರ ಗ್ರಂಥಾಲಯದಲ್ಲಿ ಕನ್ನಡ, ಇಂಗ್ಲಿಷ್‌, ಉರ್ದು, ಮರಾಠಿ ಭಾಷೆಗಳ 24,856 ಪುಸ್ತಕಗಳಿವೆ. ನಿತ್ಯ ಆರು ಕನ್ನಡ, ಒಂದು ಇಂಗ್ಲಿಷ್‌ ಪತ್ರಿಕೆ ಸೇರಿದಂತೆ ವಾರಪತ್ರಿಕೆ, ಮಾಸಿಕ, ತ್ರೈಮಾಸಿಕ ಪತ್ರಿಕೆ ಬರುತ್ತಿವೆ. ಆದರೆ ಗ್ರಂಥಾಲಯದ ದುಃಸ್ಥಿತಿ ಕಂಡು ಇಲ್ಲಿಗೆ ಬರುವ ಓದುಗರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ’ ಎಂದು ತಿಳಿಸಿದರು.

‘2015–16ರಲ್ಲಿ ಆವರಣ ಗೋಡೆ ನಿರ್ಮಾಣಕ್ಕೆ ₹ 3 ಲಕ್ಷ ಅನುದಾನ ಮಂಜೂರಾಗಿತ್ತು. ಆದರೆ ಅದನ್ನು ಯಾವುದಕ್ಕೆ ಬಳಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈ ಕುರಿತು ಜಿಲ್ಲಾ ಗ್ರಂಥಾಲಯ ಅಧಿಕಾರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಹಲ ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ದೊರಕದಾಗಿದೆ’ ಎಂದು ಹೇಳಿದರು.

***
ಗ್ರಂಥಾಲಯದ ಆವರಣದಲ್ಲಿ ಗೂಡಂಗಡಿಗಳು ನಿರ್ಮಾಣಗೊಂಡಿವೆ. ಕಸದ ರಾಶಿ ಗಮನಕ್ಕೆ ಬಂದಿಲ್ಲ. ₹ 3 ಲಕ್ಷದ ಅನುದಾನ ಮಂಜೂರಾಗಿರುವ ಮಾಹಿತಿ ಲಭ್ಯವಿಲ್ಲ
ಸಿದ್ದಯ್ಯ ಗದ್ಗಿಮಠ, ಪಿಡಿಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT