ಗ್ರಾಹಕರ ರಕ್ಷಣೆಗೆ ಹೊಸ ಕಾನೂನು: ಜಿಎಸ್‌ಟಿಯನ್ನು ಮತ್ತೆ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

ಸೋಮವಾರ, ಮೇ 20, 2019
30 °C

ಗ್ರಾಹಕರ ರಕ್ಷಣೆಗೆ ಹೊಸ ಕಾನೂನು: ಜಿಎಸ್‌ಟಿಯನ್ನು ಮತ್ತೆ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

Published:
Updated:
ಗ್ರಾಹಕರ ರಕ್ಷಣೆಗೆ ಹೊಸ ಕಾನೂನು: ಜಿಎಸ್‌ಟಿಯನ್ನು ಮತ್ತೆ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ದಾರಿತಪ್ಪಿಸುವ ಜಾಹೀರಾತುಗಳಿಗೆ ನಿಯಂತ್ರಣ ಹೇರಲು ಮತ್ತು ಜನರ ಕುಂದುಕೊರತೆಗಳನ್ನು ಕಡಿಮೆ ವೆಚ್ಚದಲ್ಲಿ ಹಾಗೂ ಕಾಲಮಿತಿಯೊಳಗೆ ಬಗೆಹರಿಸುವುದಕ್ಕಾಗಿ ಹೊಸ ಗ್ರಾಹಕ ರಕ್ಷಣೆ ಕಾನೂನನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಿಎಸ್‌ಟಿಯನ್ನು ಮತ್ತೆ ಸಮರ್ಥಿಸಿಕೊಂಡ ಅವರು, ಹೊಸ ಜಿಎಸ್‌ಟಿ ಕಾನೂನು ದೀರ್ಘ ಅವಧಿಯಲ್ಲಿ ಗ್ರಾಹಕರಿಗೆ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.

‘ದೇಶದ ಅಗತ್ಯ ಮತ್ತು ಇಲ್ಲಿನ ವ್ಯಾಪಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಗ್ರಾಹಕ ರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸುವ ಸಿದ್ಧತೆಯಲ್ಲಿದ್ದೇವೆ. ಪ್ರಸ್ತಾವಿತ ಕಾಯ್ದೆ ಗ್ರಾಹಕರನ್ನು ಸಶಕ್ತಗೊಳಿಸಲು ಹೆಚ್ಚು ಒತ್ತು ನೀಡಲಿದೆ’ ಎಂದು ಹೇಳಿದರು.‌

‘ದಾರಿತಪ್ಪಿಸುವ ಜಾಹೀರಾತುಗಳ ವಿರುದ್ಧ ಕಠಿಣ ನಿಯಮಗಳನ್ನು ಪ್ರಸ್ತಾಪಿಸಲಾಗಿದೆ. ತ್ವರಿತ ಪರಿಹಾರಾತ್ಮಕ ಕ್ರಮಗಳಿಗಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು. ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸುವ ಅಧಿಕಾರವನ್ನು ಇದು ಹೊಂದಿರಲಿದೆ’ ಎಂದು ಪ್ರಧಾನಿ ಹೇಳಿದರು.

1986ರ ಗ್ರಾಹಕ ರಕ್ಷಣೆ ಕಾಯ್ದೆಯ ಸ್ಥಾನದಲ್ಲಿ ಹೊಸ ಕಾಯ್ದೆಯನ್ನು ತರಲಾಗುತ್ತಿದೆ.  ಗ್ರಾಹಕರ ರಕ್ಷಣೆಗಾಗಿ 2015ರಲ್ಲಿ ವಿಶ್ವಸಂಸ್ಥೆ ಹೊರಡಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನೂ ಪ್ರಸ್ತಾವಿತ ಕಾನೂನು ಒಳಗೊಂಡಿರಲಿದೆ.

‘ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಆದ್ಯತೆ. ನವ ಭಾರತಕ್ಕಾಗಿ ನಾವು ಕೈಗೊಂಡಿರುವ ನಿರ್ಣಯದಲ್ಲೂ ಈ ಅಂಶ ಪ್ರತಿಫಲಿಸಿದೆ. ನವ ಭಾರತವು ಅತ್ಯುತ್ತಮ ಗ್ರಾಹಕ ಕ್ರಮಗಳು ಮತ್ತು ಗ್ರಾಹಕರ ಏಳಿಗೆಯನ್ನು ಕಾಣಲಿದೆ’ ಅವರು ಪ್ರತಿಪಾದಿಸಿದರು.

ಉಳಿತಾಯ: ಸರ್ಕಾರ ಮೂರು ವರ್ಷಗಳಲ್ಲಿ ಜಾರಿಗೆ ತಂದಿರುವ ರಿಯಲ್‌ ಎಸ್ಟೇಟ್‌ ಕಾನೂನು, ಭಾರತೀಯ ಮಾನದಂಡ ಮಂಡಳಿ (ಬಿಐಎಸ್‌) ಕಾಯ್ದೆ, ಉಜ್ವಲ ಯೋಜನೆ, ಸಬ್ಸಿಡಿ ನೇರ ವರ್ಗಾವಣೆ (ಡಿಬಿಐ) ಯೋಜನೆಗಳು ಗ್ರಾಹಕರನ್ನು ಸಶಕ್ತಗೊಳಿಸುವುದರ ಜೊತೆಗೆ ಭಾರಿ ಉಳಿತಾಯಕ್ಕೂ ಕಾರಣವಾಗಲಿದೆ ಎಂದು ಮೋದಿ ಹೇಳಿದರು.

ಮೂರು ವರ್ಷಗಳಲ್ಲಿ ಹಣದುಬ್ಬರವನ್ನು ಗಣನೀಯವಾಗಿ ನಿಯಂತ್ರಿಸಲಾಗಿದ್ದು, ಇದು ಕೂಡ ಗ್ರಾಹಕರಿಗೆ ಉಳಿತಾಯ ಮಾಡಲು ನೆರವಾಗಿದೆ ಎಂದು ಅವರು ಹೇಳಿದರು.

ರಿಯಲ್‌ ಎಸ್ಟೇಟ್‌ ಕಾಯ್ದೆಯನ್ನು ವಿವರಿಸಿದ ಅವರು, ‘ಗ್ರಾಹಕರ ಹಿತಕಾಯುವ ಉದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಒಟ್ಟು ಮೊತ್ತದ ಶೇ 10ರಷ್ಟನ್ನು ಬಿಲ್ಡರ್‌ಗಳಿಗೆ ಪಾವತಿಸಿ ಫ್ಲ್ಯಾಟ್‌ ಅನ್ನು ಗ್ರಾಹಕರು ಕಾಯ್ದಿರಿಸಬಹುದು. ಇದಕ್ಕೂ ಮೊದಲು ಶೇ 40ರಷ್ಟು ಹಣ ಪಾವತಿಸಬೇಕಿತ್ತು. ಬಿಲ್ಡರ್‌ಗಳು ಶೇ 70ರಷ್ಟು ಹಣವನ್ನು ಖಾತ್ರಿ ಖಾತೆಯಲ್ಲಿ ಇಡಬೇಕಾಗಿರುವುದರಿಂದ ಹಣವನ್ನು ಬೇರೆಡೆಗೆ ವರ್ಗಾಯಿಸಲು ಸಾಧ್ಯವಿಲ್ಲ’ ಎಂದರು.

ಗ್ರಾಹಕರ ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವ ವ್ಯವಸ್ಥೆಗಳು ಯಾವುದೇ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮುಖ್ಯ. ಹಾಗಾಗಿ, ಬಲಿಷ್ಠ ಕುಂದುಕೊರತೆ ನಿವಾರಣೆ ವ್ಯವಸ್ಥೆಗಾಗಿ ಸರ್ಕಾರ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ವಿವರಿಸಿದರು.

**

ಜಿಎಸ್‌ಟಿಯಿಂದ ಗ್ರಾಹಕರಿಗೆ ಲಾಭ!

‘ಜಿಎಸ್‌ಟಿ ವ್ಯವಸ್ಥೆಯು ದೇಶದಾದ್ಯಂತ ಹೊಸ ವ್ಯಾಪಾರ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದೆ. ದೀರ್ಘ ಅವಧಿಯಲ್ಲಿ ಜಿಎಸ್‌ಟಿಯಿಂದ ಗ್ರಾಹಕರಿಗೆ ಲಾಭವಾಗಲಿದೆ. ಈ ಕಾನೂನಿನ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡುವುದರಿಂದ ಅವರಿಗೆ ಮೋಸ ಮಾಡಲು ಸಾಧ್ಯವಿಲ್ಲ’ ಎಂದು ಮೋದಿ ಅವರು ಜಿಎಸ್‌ಟಿ ಜಾರಿಯನ್ನು ಸಮರ್ಥಿಸಿಕೊಂಡರು.

‘ತಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಷ್ಟು ತೆರಿಗೆ ಪಾವತಿಸುತ್ತಿದ್ದೇವೆ ಎಂಬುದನ್ನು ಗ್ರಾಹಕರು ಈಗ ರಸೀದಿ ಮತ್ತು ಬಿಲ್‌ಗಳಲ್ಲಿ ನೋಡಬಹುದು. ಜಿಎಸ್‌ಟಿಯು ತಯಾರಿಕಾ ಕಂಪೆನಿಗಳ ನಡುವೆ ಪೈಪೋಟಿ ಸೃಷ್ಟಿಸಿ ಸರಕುಗಳ ಬೆಲೆ ಇಳಿತಕ್ಕೆ ಕಾರಣವಾಗಲಿದೆ. ಇದರಿಂದ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲಿದೆ. ಸರಕು ಸಾಗಣೆಯ ಅವಧಿಯಲ್ಲಿ ಆಗುತ್ತಿರುವ ಕಡಿತದಿಂದಾಗಿ ಉತ್ಪನ್ನಗಳ ಬೆಲೆ ಇಳಿಯಲಿದೆ. ಇದರ ಪ್ರಯೋಜನವೂ ಗ್ರಾಹಕರಿಗೇ ಸಿಗಲಿದೆ’ ಎಂದು ವಿವರಿಸಿದರು.

‘ಜಿಎಸ್‌ಟಿಯಿಂದಾಗಿ ವಿವಿಧ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳು ರದ್ದಾಗಿವೆ. ಹೊಸ ವ್ಯವಸ್ಥೆಯಿಂದ ಗ್ರಾಹಕರು ಮತ್ತು ಮಧ್ಯಮವರ್ಗದವರಿಗೇ ಅತ್ಯಂತ ಹೆಚ್ಚು ಲಾಭವಾಗಲಿದೆ’ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry