ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡಕ್ಕೆ ಸಿಲುಕಿದ ಹೈದರಾಬಾದ್

ಎಂಟನೇ ಶತಕ ಬಾರಿಸಿದ ಕರುಣ್‌ ನಾಯರ್‌; ಬಿನ್ನಿ ಮತ್ತೊಂದು ಅರ್ಧ ಶತಕ;
Last Updated 26 ಅಕ್ಟೋಬರ್ 2017, 19:44 IST
ಅಕ್ಷರ ಗಾತ್ರ

ಶಿವಮೊಗ್ಗ: ಒತ್ತಡದ ಸಂದರ್ಭದಲ್ಲೇ ಕರುಣ್ ನಾಯರ್ ಸಂಯಮದ ಶತಕ (134, 17 ಬೌಂಡರಿ) ಬಾರಿಸಿದರು. ಸ್ಟುವರ್ಟ್‌ ಬಿನ್ನಿ (72, 144 ಎಸೆತ, 1ಸಿಕ್ಸರ್, 8 ಬೌಂಡರಿ) ಜೊತೆ ಅವರ ಅತ್ಯುಪಯುಕ್ತ ಜೊತೆಯಾಟ ರಣಜಿ ಟ್ರೋಫಿ ‘ಎ’ ಗುಂಪಿನ ಲೀಗ್ ಪಂದ್ಯದ ಮೂರನೇ ದಿನ ಕರ್ನಾಟಕಕ್ಕೆ ಉತ್ತಮ ಚೇತರಿಕೆ ನೀಡಿತು. ಈಗ ಎದುರಾಳಿ ಹೈದರಾಬಾದ್‌ ತಂಡ ಒತ್ತಡಕ್ಕೆ ಸಿಲುಕಿದೆ.

ನಗರದ ಕೆಎಸ್‌ಸಿಎ ಕ್ರೀಡಾಂಗಣ ದಲ್ಲಿ ಗೆಲುವಿಗೆ 380 ರನ್‌ಗಳ ಗುರಿ ಪಡೆದಿರುವ ಪ್ರವಾಸಿ ತಂಡ 2 ವಿಕೆಟ್‌ಗೆ 92 ರನ್‌ಗಳೊಡನೆ ಗುರುವಾರ ದಿನದಾಟ ಪೂರೈಸಿತು. ಕೊನೆಯ ದಿನವಾದ ಶುಕ್ರವಾರ ಪಂದ್ಯ ಗೆಲ್ಲಬೇಕಾದರೆ ಹೈದರಾಬಾದ್‌ ತಂಡ ಇನ್ನೂ 288 ರನ್ ಗಳಿಸಬೇಕಾಗಿದೆ.

ಇದಕ್ಕೆ ಮೊದಲು ಕರ್ನಾಟಕದ ಎರಡನೇ ಇನಿಂಗ್ಸ್‌ ಊಟದ ನಂತರ 332 ರನ್‌ಗಳ ಉತ್ತಮ ಮೊತ್ತಕ್ಕೆ ಕೊನೆಗೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರು 47 ರನ್‌ ಮುನ್ನಡೆ ಪಡೆದಿದ್ದರು.

4 ವಿಕೆಟ್‌ಗೆ 128 ರನ್‌ಗಳೊಡನೆ ದಿನದಾಟ ಮುಂದುವರಿಸಿದ ಕರ್ನಾಟಕ ಕರುಣ್– ಬಿನ್ನಿ ನಡುವಣ 160 ರನ್‌ ಜೊತೆಯಾಟದಿಂದಾಗಿ ಅಪಾಯದಿಂದ ಪಾರಾಯಿತು. ಇವರಿಬ್ಬರು ಬೆಳಗಿನ ಮೊದಲ ಒಂದು ಗಂಟೆಯ ಅವಧಿಯನ್ನು ಸುರಕ್ಷಿತವಾಗಿ ಆಡಿದರು.

ಆರಂಭದಲ್ಲಿ ಒಂದೆರಡು ಬಾರಿ ಕರುಣ್‌ ಅವರ ಬ್ಯಾಟಿನಂಚಿಗೆ ತಗುಲಿದ ಚೆಂಡು ಸ್ಲಿಪ್‌ ಮೂಲಕ ಹಾರಿ ಬೌಂಡರಿಗೆರೆ ದಾಟಿತ್ತು. ನಂತರ ಅವರು ವಿಶ್ವಾಸ ಪ್ರದರ್ಶಿಸಿ ಎರಡೂ ಬದಿಗಳಲ್ಲಿ ಆಕರ್ಷಕ ಡ್ರೈವ್‌ ಮತ್ತು ಸ್ವೀಪ್‌ ಹೊಡೆತಗಳನ್ನು ಆಡಿದರು.

ಬಿನ್ನಿ ಅವರಿಗೆ ಅದೃಷ್ಟದ ಬೆಂಬ ಲವೂ ಇತ್ತು. ಮಧ್ಯಮವೇಗಿ ರವಿಕಿರಣ್‌ ಬೌಲಿಂಗ್‌ನಲ್ಲಿ (ದಿನದ ಹತ್ತನೇ ಓವರಿನ ಮೂರನೇ ಎಸೆತ) ಅಂಪೈರ್‌ ನವದೀಪ್‌ ಸಿಂಗ್, ಬಿನ್ನಿ ವಿರುದ್ಧ ಎಲ್‌ಬಿಡಬ್ಲ್ಯು ತೀರ್ಪು ನೀಡಿದ್ದರು. ಆದರೆ ‘ಟಿವಿ ರಿವ್ಯೂ’ ಪರಿಶೀಲಿಸಿದಾಗ ಆ ಎಸೆತ ನೋಬಾಲ್‌ ಎನ್ನುವುದು ಖಚಿತವಾಗಿ ಬಿನ್ನಿ ಆಟ ಮುಂದುವರಿಸುವ ಅವಕಾಶ ಪಡೆದರು. ಆಗ ಅವರು 49 ರನ್ ಗಳಿಸಿದ್ದರು. ಅದೇ ಓವರಿನಲ್ಲಿ ಸ್ಕ್ವೇರ್‌ ಕಟ್‌ ಮೂಲಕ ರನ್‌ ಗಳಿಸಿ ಅರ್ಧಶತಕ ದಾಟಿದರು.

ಬುಧವಾರ ನಾಲ್ಕು ವಿಕೆಟ್‌ ಪಡೆದಿದ್ದ ಎಡಗೈ ಸ್ಪಿನ್ನರ್‌ ಮೆಹದಿ ಹಸನ್‌ ಅವರೇ ಕೊನೆಗೆ ಈ ಜೊತೆಯಾಟ ಮುರಿದರು. ಭರ್ಜರಿ ಹೊಡೆತದ ಯತ್ನದಲ್ಲಿ ಬಿನ್ನಿ ಲಾಂಗ್ ಅಫ್‌ನಲ್ಲಿ ರೋಹಿತ್‌ ರಾಯುಡು ಅವರಿಗೆ ಕ್ಯಾಚಿತ್ತರು.

ಎಂಟನೇ ಶತಕ: ಕರುಣ್ ನಂತರವೂ ಆಪತ್ಬಾಂಧವನ ಪಾತ್ರ ಮುಂದುವರಿಸಿ ಉಪಯುಕ್ತ ಜೊತೆಯಾಟಗಳಲ್ಲಿ ಭಾಗಿ ಯಾದರು. ಸಿ.ಎಂ. ಗೌತಮ್‌ (21) ಜೊತೆ 37 ರನ್‌, ನಂತರ ನಾಯಕ ವಿನಯ್ ಕುಮಾರ್‌ (14) ಜೊತೆ ಎಂಟನೇ ವಿಕೆಟ್‌ಗೆ 40 ರನ್‌ ಸೇರಿಸಿದರು. ಆಫ್‌ ಸ್ಪಿನ್ನರ್‌ ಪ್ರಗ್ಯಾನ್‌ ಓಜಾ ಬೌಲಿಂಗ್‌ನಲ್ಲಿ ಚೆಂಡನ್ನು ಮಿಡ್‌ವಿಕೆಟ್‌ ಕಡೆ ಆಡಿ ಶತಕ ಪೂರೈಸಿದ ಕರುಣ್‌ ಅಷ್ಟರೊಳಗೆ 13 ಬೌಂಡರಿ ಬಾರಿಸಿದ್ದರು. ಇದು ರಣಜಿ ಟ್ರೋಫಿಯಲ್ಲಿ ಅವರಿಗೆ ಎಂಟನೇ ಶತಕ.

ಅಂತಿಮ ವಿಕೆಟ್‌ಗೆ ಎಸ್‌.ಅರವಿಂದ್‌ (ಔಟಾಗದೇ 10) ಜೊತೆ 40 ರನ್‌ ಸೇರಿಸಿದ ಅವರು ನಿರ್ಗಮಿಸಿದ್ದು ಕೊನೆ ಯವರಾಗಿಯೇ. ತನ್ಮಯ್‌ ಅಗರ ವಾಲ್‌ (ಬ್ಯಾಟಿಂಗ್ 43) ಮತ್ತು ಅಕ್ಷತ್‌ ರೆಡ್ಡಿ ಹೈದರಾಬಾದ್‌ ಎರಡನೇ ಇನಿಂಗ್ಸ್‌ ಎಚ್ಚರಿಕೆಯಿಂದ ಆರಂಭಿಸಿ 30 ರನ್‌ ಸೇರಿಸಿದರು.

ಆಫ್‌ ಸ್ಪಿನ್ನರ್‌ ಗೌತಮ್‌ ಬೌಲಿಂಗ್‌ನಲ್ಲಿ ನಿರೀಕ್ಷೆಗಿಂತ ಮೇಲೆದ್ದ ಚೆಂಡನ್ನು ಅವರು ವಿಕೆಟ್‌ ಕೀಪರ್‌ಗೆ ನಿರ್ದೇಶಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಕೊಲ್ಲ ಸುಮಂತ್, ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಬೌಲಿಂಗ್‌ನಲ್ಲಿ ಚೆಂಡನ್ನು ಎಳೆದು ಬಾರಿಸುವ ಯತ್ನದಲ್ಲಿ ಶಾರ್ಟ್‌ ಮಿಡ್‌ ವಿಕೆಟ್‌ನಲ್ಲಿ ಅರವಿಂದ್‌ಗೆ ಕ್ಯಾಚಿತ್ತರು. ಮೊದಲ ಇನಿಂಗ್ಸ್‌ನಲ್ಲಿ ಬೇಗ ರನೌಟ್‌ ಬೇಗ ನಿರ್ಗಮಿಸಿದ್ದ ಎಡಗೈ ಆಟಗಾರ ತನ್ಮಯ್, ಕೆಲವು ಆಕರ್ಷಕ ಹೊಡೆತಗಳೊಡನೆ 43 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ನಾಯಕ ಅಂಬಟಿ ರಾಯುಡು (ಅಜೇಯ 18) ಜೊತೆ ಮುರಿಯದ ಮೂರನೇ ವಿಕೆಟ್‌ಗೆ 42 ರನ್‌ ಬಂದಿವೆ.

‘ಬೌಲರ್‌ಗಳು ಒತ್ತಡ ಹೇರಬೇಕಾಗಿದೆ’

‘ಬ್ಯಾಟ್ಸ್‌ಮನ್‌ಗಳು ಅಗತ್ಯವಿರುವಷ್ಟು ರನ್‌ ಗಳಿಸಿದ್ದಾರೆ. ಶುಕ್ರವಾರದ ಆಟದಲ್ಲಿ ಬೌಲರ್‌ ಗಳು ಕರಾರುವಾಕ್‌ ಆಗಿ ಬೌಲ್‌ ಮಾಡಿ, ಬೇಗನೇ ವಿಕೆಟ್‌ಗಳನ್ನು ಪಡೆಯಬೇಕು’ ಎಂದು ಕರ್ನಾಟಕದ ಕರುಣ್‌ ನಾಯರ್ ಅಭಿಪ್ರಾಯಪಟ್ಟರು.

‘ಕೆಲ ಸಮಯದಿಂದ ಉತ್ತಮ ಆರಂಭ ಪಡೆಯುತ್ತಿದ್ದೆ. ಆದರೆ ಅದನ್ನು ಶತಕವನ್ನಾಗಿ ಪರಿವರ್ತಿಸಬೇಕಿತ್ತು. ಇಂದು ಸಾಧ್ಯವಾಗಿದ್ದು ಸಂತಸ ತಂದಿದೆ. ಬುಧವಾರ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳು ಬೇಗ ಬಿದ್ದ ಕಾರಣ ಮೂರನೇ ದಿನ ಸಾಧ್ಯವಾದಷ್ಟು ಹೆಚ್ಚು ಕಾಲ ಆಡಬೇಕೆಂದು ಬಿನ್ನಿ ಜೊತೆ ಮಾತನಾಡಿಕೊಂಡಿದ್ದೆ’ ಎಂದು ದಿನದಾಟದ ನಂತರ ಅವರು ಸುದ್ದಿಗಾರರೊಂದಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT