ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನೋಂದಣಿಯಲ್ಲಿ ಶೇ 25ರಷ್ಟು ಇಳಿಕೆ

ವಾಹನಗಳ ನೋಂದಣಿ ನಿಷೇಧ * ಹೊಸ ಬೈಕ್‌ ಮಾರಾಟದಲ್ಲಿ ಕುಸಿತ * ಸರ್ಕಾರದ ಸುತ್ತೋಲೆಗೆ ವ್ಯಾಪಕ ಆಕ್ರೋಶ
Last Updated 26 ಅಕ್ಟೋಬರ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: 100 ಸಿ.ಸಿ.ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ಹೊಸ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಾರಿಗೆ ಇಲಾಖೆಯು ಅ. 23ರಿಂದ ನಿಷೇಧ ಮಾಡಿದ್ದು, ನಗರದಲ್ಲಿ ವಾಹನಗಳ ನೋಂದಣಿಯ ಪ್ರಮಾಣ ಶೇ 25ರಷ್ಟು ಇಳಿಕೆಯಾಗಿದೆ.

ಕೋರಮಂಗಲ, ರಾಜಾಜಿನಗರ, ಇಂದಿರಾನಗರ, ಯಶವಂತಪುರ, ಜಯನಗರ, ಎಲೆಕ್ಟ್ರಾನಿಕ್‌ ಸಿಟಿ, ರಾಜರಾಜೇಶ್ವರಿ ನಗರ, ಕೆ.ಆರ್‌.ಪುರ, ದೇವನಹಳ್ಳಿ, ಯಲಹಂಕ ಹಾಗೂ ಆನೇಕಲ್‌ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳಿಗೆ ವಾಹನಗಳ ನೋಂದಣಿಗಾಗಿ ಬರುತ್ತಿರುವ ಸಾರ್ವಜನಿಕರ ಸಂಖ್ಯೆ ಕಡಿಮೆಯಾಗಿದೆ.

‘ನಗರದ ಎಲ್ಲ ಆರ್‌ಟಿಒ ಕಚೇರಿಗಳು ಸೇರಿ ನಿತ್ಯವೂ ಗರಿಷ್ಠ 1,500 ವಾಹನಗಳ ನೋಂದಣಿ ಆಗುತ್ತಿತ್ತು. ಅದರಲ್ಲಿ ಶೇ 70ರಷ್ಟು ದ್ವಿಚಕ್ರ ವಾಹನಗಳು ಇರುತ್ತಿದ್ದವು. ಆದರೆ, ಈಗ ದ್ವಿಚಕ್ರ ವಾಹನಗಳ ನೋಂದಣಿ ಶೇ 25ರಷ್ಟು ಕಡಿಮೆಯಾಗಿರುವುದರಿಂದ ದಿನಕ್ಕೆ 1,000 ನೋಂದಣಿಯಾದರೆ ಹೆಚ್ಚು’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷ ದೀಪಾವಳಿ ಹಬ್ಬದ ನಂತರ ಕಚೇರಿಗಳಲ್ಲಿ ಜನಸಂದಣಿ ಹೆಚ್ಚಿರುತ್ತಿತ್ತು. ಈಗ ನೋಂದಣಿ ನಿಷೇಧ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಕಚೇರಿಗೆ ಬರುತ್ತಿಲ್ಲ. ಬಂದವರು ನಿಷೇಧದ ಬಗ್ಗೆಯೇ ಮಾಹಿತಿ ಪಡೆದು ವಾಪಸ್‌ ಹೋಗುತ್ತಿದ್ದಾರೆ’ ಎಂದು ಅವರು ಹೇಳಿದರು.

‘ನಗರದ ಜಯನಗರ, ಯಶವಂತಪುರ ಕಚೇರಿಗಳಲ್ಲೇ ಹೆಚ್ಚಿನ ವಾಹನಗಳು ನೋಂದಣಿ ಆಗುತ್ತಿದ್ದವು. ಈಗ ಅಲ್ಲಿಯೂ ನೋಂದಣಿ ಕಡಿಮೆಯಾಗಿದೆ. ಇದಕ್ಕೆ ನೋಂದಣಿ ನಿಷೇಧದ ಸುತ್ತೋಲೆ ಕಾರಣವೆಂದು ಹೇಳಲಾಗದು. ಈ ಬಗ್ಗೆ ನಿಖರ ಮಾಹಿತಿ ನೀಡುವಂತೆ ಆರ್‌ಟಿಒಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಅಧಿಕಾರಿ ವಿವರಿಸಿದರು.

ಹೊಸ ಬೈಕ್‌ ಮಾರಾಟದಲ್ಲಿ ಕುಸಿತ: ರಾಜ್ಯದ 500ಕ್ಕೂ ಹೆಚ್ಚು ಮಳಿಗೆಗಳಲ್ಲಿ 100 ಸಿ.ಸಿ.ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ.

‘ಹೀರೊ, ಬಜಾಜ್‌, ಹೊಂಡಾ, ಟಿ.ವಿ.ಎಸ್‌ ಸೇರಿ ಹಲವು ಕಂಪೆನಿಗಳ ಮಳಿಗೆಗಳಲ್ಲಿ ಸದ್ಯ ಸುಮಾರು 45,000 ಬೈಕ್‌ಗಳನ್ನು ಮಾರಾಟಕ್ಕೆ ಇಡಲಾಗಿದೆ. ಸುತ್ತೋಲೆ ಜಾರಿಯಾದಾಗಿನಿಂದ ಯಾವ ಮಳಿಗೆಯಲ್ಲೂ ಒಂದು ಬೈಕ್‌ ಮಾರಾಟವಾಗುತ್ತಿಲ್ಲ’ ಎಂದು ಮಳಿಗೆಯೊಂದರ ಮಾಲೀಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಯು ತುಘಲಕ್ ದರ್ಬಾರ್‌ ನಡೆಸುತ್ತಿದ್ದು, ಈ ಸುತ್ತೋಲೆ ಅವೈಜ್ಞಾನಿಕ. 100 ಸಿ.ಸಿ.ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ವಾಹನಗಳ ವೇಗ ಕಡಿಮೆ. ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸುತ್ತದೆ ಹೊರತು, ವಾಹನಗಳು  ಅದಕ್ಕೆ ಕಾರಣವಲ್ಲ. ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯದೆ ಸಾರಿಗೆ ಇಲಾಖೆಯು ಈ ಸುತ್ತೋಲೆ ಹೊರಡಿಸಿದೆ’ ಎಂದು ಅವರು ದೂರಿದರು.

ಮಾರಾಟವಾದ ಬೈಕ್‌ಗೂ ನೋಂದಣಿ ಇಲ್ಲ: ‘ದೀಪಾವಳಿ ಹಬ್ಬವಿದ್ದ ಅ. 18, 19, 20ರಂದು 100ಕ್ಕೂ ಹೆಚ್ಚು ಬೈಕ್‌ಗಳು ಮಾರಾಟವಾಗಿವೆ. ಆ ದಿನಗಳಂದು ಸರ್ಕಾರಿ ರಜೆ ಇದ್ದಿದ್ದರಿಂದ ತಾತ್ಕಾಲಿಕ ನೋಂದಣಿ ಪ್ರಕ್ರಿಯೆಗೆ ಬೇಕಾದ ದಾಖಲೆಗಳನ್ನು ಹೊಂದಿಸಿಕೊಳ್ಳಲು ಆಗಲಿಲ್ಲ. ದಾಖಲೆ ಹೊಂದಿಸಿಕೊಳ್ಳುವಷ್ಟರಲ್ಲಿ ಸುತ್ತೋಲೆ ಹೊರಬಿದ್ದಿದ್ದು, ಈಗ ಬೈಕ್‌ಗಳ ನೋಂದಣಿ ಮಾಡಲು ಆರ್‌ಟಿಒಗಳು ನಿರಾಕರಿಸುತ್ತಿದ್ದಾರೆ’ ಎಂದು ಪೀಣ್ಯದ ಮಳಿಗೆಯೊಂದರ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದರು.

‘2015ರಲ್ಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಅಷ್ಟಾದರೂ 2017ರವರೆಗೆ 100 ಸಿ.ಸಿ.ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ಮಾಡಲಾಗಿದೆ. ಈಗ ಏಕಾಏಕಿ ಹೈಕೋರ್ಟ್‌ ಆದೇಶ ನೆಪದಲ್ಲಿ ನೋಂದಣಿ ನಿಷೇಧ ಮಾಡಿರುವುದರ ಹಿಂದೆ ಷಡ್ಯಂತ್ರವಿರುವಂತೆ ಕಾಣುತ್ತಿದೆ’ ಎಂದು ಅವರು ದೂರಿದರು.

**

100 ಸಿ.ಸಿ.ಗಿಂತ ಕಡಿಮೆ ದ್ವಿಚಕ್ರ ವಾಹನಗಳು

ಟಿ.ವಿ.ಎಸ್‌ ಸ್ಕೂಟಿ ಪೆಪ್‌ ಪ್ಲಸ್‌

ಟಿ.ವಿ.ಎಸ್‌ ಸ್ಪೋರ್ಟ್‌

ಹೀರೊ ಎಚ್‌.ಎಫ್‌ ಡಿಲಕ್ಸ್‌

ಹೀರೊ ಸ್ಪ್ಲೆಂಡರ್‌ ಪ್ಲಸ್‌

ಟಿ.ವಿ.ಎಸ್‌ ಎಕ್ಸ್‌.ಎಲ್‌ 100

ಹೀರೊ ಸ್ಪ್ಲೆಂಡರ್‌ ಪ್ರೊ

ಬಜಾಜ್‌ ಸಿ.ಟಿ 100

ಹೀರೊ ಎಚ್‌.ಎಫ್‌ ಡಿಲಕ್ಸ್‌ ಇಕೊ

ಹೀರೊ ಪ್ಯಾಶನ್‌ ಪ್ರೊ ಐ3ಎಸ್‌

**

50 ಸಿ.ಸಿ.ಗೆ ಸೀಮಿತಗೊಳಿಸಲು ಚಿಂತನೆ

‘ಬಡಜನರಿಗೆ ಹೊರೆ ಉಂಟು ಮಾಡುವ ಸುತ್ತೋಲೆಯನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿ ಬೆಂಗಳೂರು ನಗರ ವಾಹನಗಳ ಮಾರಾಟ ಮಳಿಗೆಯ ಮಾಲೀಕರ ನಿಯೋಗವು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ನಿಯೋಗದೊಂದಿಗೆ ಮಾತನಾಡಿರುವ ಸಚಿವರು, ‘ಕಾಯ್ದೆಯಂತೆ ಸುತ್ತೋಲೆ ಹೊರಡಿಸಲಾಗಿದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿಯಮ ತಿದ್ದುಪಡಿ ಬಗ್ಗೆ ಹಾಗೂ 50 ಸಿ.ಸಿ.ಗಿಂತ ಕಡಿಮೆ ಎಂಜಿನ್‌ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸಿ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ಮಾತ್ರ ಜಾರಿಗೆ ತರಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

**

ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ

ಸುತ್ತೋಲೆಯಿಂದ ಆತಂಕಗೊಂಡಿರುವ ಹಲವರು, ತಮ್ಮ ಬೈಕ್‌ಗಳನ್ನು ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಅಲ್ಲಿ ಶೇ 50ರಷ್ಟು ಬೆಲೆ ಇಳಿಕೆಯಾಗಿರುವುದರಿಂದ ವಾಹನದ ಸೆಕೆಂಡ್‌ ಹ್ಯಾಂಡ್‌ ದರಕ್ಕೆ ತಕ್ಕಷ್ಟು ಹಣ ಸಿಗುತ್ತಿಲ್ಲ.

‘ನಾಲ್ಕು ವರ್ಷಗಳ ಹಿಂದೆ ₹48 ಸಾವಿರ ಕೊಟ್ಟು ಬೈಕ್‌ ಖರೀದಿಸಿದ್ದೇನೆ. ಸುತ್ತೋಲೆ ಹೊರಡಿಸುವುದಕ್ಕೂ ಮುನ್ನ ಅದನ್ನು ಮಾರಾಟ ಮಾಡಲು ಹೋದಾಗ ₹20 ಸಾವಿರಕ್ಕೆ ಖರೀದಿಸುವುದಾಗಿ ಗಿರಾಕಿಯೊಬ್ಬರು ಹೇಳಿದ್ದರು. ಅನಿವಾರ್ಯ ಕಾರಣದಿಂದ ಮಾರಾಟ ಮಾಡಿರಲಿಲ್ಲ. ಅದೇ ಬೈಕ್‌ ಅನ್ನು ಅ. 24ರಂದು ಮಾರುಕಟ್ಟೆಗೆ ತೆಗೆದುಕೊಂಡು ಹೋದಾಗ ಆ ಗಿರಾಕಿಯು ₹8 ಸಾವಿರಕ್ಕೆ ಬೈಕ್‌ ಕೇಳಿದ’ ಎಂದು ಪೀಣ್ಯದ ರಾಮಮೂರ್ತಿ ಹೇಳಿದರು.

**

100 ಸಿ.ಸಿ ಬೈಕ್‌ ನೋಂದಣಿಗೆ ಅವಕಾಶ

‘100 ಸಿ.ಸಿ ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರವಾಹನಗಳ ನೋಂದಣಿಯನ್ನು ಮಾತ್ರ ನಿಷೇಧ ಮಾಡಲಾಗಿದೆ. ಅದರನ್ವಯ 99.9 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ವಾಹನಗಳ ನೋಂದಣಿ ಮಾಡಲು ಸಾಧ್ಯವಿಲ್ಲ. ಆದರೆ, ನಿರ್ದಿಷ್ಟವಾಗಿ 100 ಸಿ.ಸಿ ಇದ್ದರೆ ನೋಂದಣಿ ಮಾಡಬಹುದು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು.

‘ದೇಶದಲ್ಲಿ ಯಾವುದೇ ಕಂಪೆನಿಯು 100 ಸಿ.ಸಿ ದ್ವಿಚಕ್ರ ವಾಹನ ಉತ್ಪಾದನೆ ಮಾಡುತ್ತಿಲ್ಲ. ಹೀಗಾಗಿ ನೋಂದಣಿ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಮುಂದಿನ ದಿನಗಳಲ್ಲಿ  100 ಸಿ.ಸಿ ಬೈಕ್‌ ಉತ್ಪಾದನೆಯಾದರೆ, ಅವುಗಳ ನೋಂದಣಿಗೆ ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT