ಜಿಲ್ಲೆಯತ್ತ ಬನ್ನೇರುಘಟ್ಟದ ಸಿಂಹಗಳ ಪಯಣ

ಬುಧವಾರ, ಜೂನ್ 19, 2019
31 °C
ಡಿಎಫ್‌ಒ ಕಚೇರಿ ತಲುಪಿದ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ಸಮ್ಮತಿ ಪತ್ರ

ಜಿಲ್ಲೆಯತ್ತ ಬನ್ನೇರುಘಟ್ಟದ ಸಿಂಹಗಳ ಪಯಣ

Published:
Updated:
ಜಿಲ್ಲೆಯತ್ತ ಬನ್ನೇರುಘಟ್ಟದ ಸಿಂಹಗಳ ಪಯಣ

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಿಂದ ಎರಡು ಸಿಂಹಗಳನ್ನು ತರಲು ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಸಮ್ಮತಿಸಿದೆ.

ಪ್ರಾಧಿಕಾರದ ಅಧಿಕೃತ ಪತ್ರ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ತಲುಪಿದ್ದು, ಒಂದು ವಾರದ ಒಳಗೆ ಸಿಂಹಗಳನ್ನು ತರಲು ಸಿದ್ಧತೆ ಆರಂಭವಾಗಿದೆ.

ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 10 ಕಿ.ಮೀ. ದೂರದಲ್ಲಿರುವ ಸಿಂಹಧಾಮದಲ್ಲಿ ಹಿಂದೆ ಹಲವು ಸಿಂಹಗಳಿದ್ದವು. ಬರುಬರುತ್ತಾ ಅವುಗಳ ಸಂತತಿ ಸಂಪೂರ್ಣ ಕ್ಷೀಣಿಸಿದೆ. 90ರ ದಶಕದಲ್ಲಿ 5 ಇದ್ದ ಸಿಂಹಗಳ ಸಂಖ್ಯೆ ನಂತರ ಕಡಿಮೆಯಾಗಿತ್ತು. ಆಪ್ರೋ–ಏಷ್ಯಾ ತಳಿಯ ಮೂರು ಸಿಂಹಗಳು ಮಾತ್ರ ಉಳಿದುಕೊಂಡಿದ್ದವು. ಈಚೆಗೆ ತಾಯಿ ಸಿಂಹ ಮೃತಪಟ್ಟಿದ್ದು, ತಂದೆ ಆರ್ಯ ಹಾಗೂ ಮಗಳು ಮಾನ್ಯ ಮಾತ್ರ ಇದ್ದಾರೆ. ಈಗ ಬನ್ನೇರುಘಟ್ಟದ ಸಿಂಹಗಳು ಬಂದರೆ ಸಂಖ್ಯೆ 4ಕ್ಕೆ ಏರಲಿದೆ.

ಗುಜರಾತ್‌ನಿಂದ ಗಂಡು–ಹೆಣ್ಣು ಸೇರಿ ಎರಡು ಸಿಂಹ ಕಳುಹಿಸಲು ಕರ್ನಾಟಕ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು. ಆದರೆ, ಅಲ್ಲಿಂದ ರಾಜ್ಯಕ್ಕೆ ಕಳುಹಿಸಲು ಪ್ರಾಧಿಕಾರ ಒಪ್ಪಿರಲಿಲ್ಲ. ಕೊನೆಗೆ ರಾಜ್ಯದ ಬನ್ನೇರುಘಟ್ಟದಿಂದಲೇ ಕಳುಹಿಸಲು ಕೋರಿ ಪುನಃ ಪತ್ರ ಬರೆಯಲಾಗಿತ್ತು.

‘ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ಅನುಮತಿ ಪತ್ರ ತಲುಪಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಒಂದು ಗಂಡು, ಒಂದು ಹೆಣ್ಣು ಸಿಂಹ ತರಲಾಗುವುದು’ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೆಲುವರಾಜ್ ಮಾಹಿತಿ ನೀಡಿದರು.

ವನ್ಯಜೀವಿ ವಿಭಾಗದ ಅಧಿಕಾರಿಗಳು ಈಗಾಗಲೇ ಬನ್ನೇರುಘಟ್ಟಕ್ಕೆ ತೆರಳಿ ಸಿಂಹಗಳನ್ನು ಗುರುತು ಮಾಡಿ ಬಂದಿದ್ದಾರೆ. ಪ್ರಸ್ತುತ ಸಿಂಹಧಾಮದಲ್ಲಿ ಇರುವ ಆರ್ಯ, ಮಾನ್ಯಾ ಮಂಕಾಗಿವೆ. ಬರುವ ಸಿಂಹಗಳಿಗೆ ಕಡಿಮೆ ವಯಸ್ಸಿದ್ದರೆ ಲವಲವಿಕೆ ಇರುತ್ತದೆ. ಹಾಗಾಗಿ, ಮೂರು–ನಾಲ್ಕು ವರ್ಷದ ಒಳಗಿನ ಸಿಂಹಗಳಿಗೇ ಆದ್ಯತೆ ನೀಡಿ, ತರಲು ಆಲೋಚಿಸಲಾಗಿದೆ.

ಲಾರಿಗೆ ಬೋನ್ ಅಳವಡಿಸಿ ರಸ್ತೆ ಮೂಲಕ ತರಲಾಗುತ್ತಿದೆ. ಅದಕ್ಕಾಗಿ ವನ್ಯಜೀವಿ ವೈದ್ಯರು, ಪ್ರಾಣಿತಜ್ಞರನ್ನು ಒಳಗೊಂಡ ತಂಡ ರಚಿಸಲಾಗಿದೆ.

ಸಿಂಹ–ಹುಲಿಗಳಿಗೆ ಪ್ರತ್ಯೇಕ ಪ್ರದೇಶ

600 ಹೆಕ್ಟೇರ್‌ ವಿಸ್ತಾರದ ಈ ಪ್ರದೇಶದಲ್ಲಿ ಹುಲಿ ಮತ್ತು ಸಿಂಹಗಳಿಗಾಗಿಯೇ ಪ್ರತ್ಯೇಕ ಪ್ರದೇಶ ಮೀಸಲಿಡಲಾಗಿದೆ. ಪ್ರಸ್ತುತ 7 ಹುಲಿಗಳಿವೆ. ಅವುಗಳಲ್ಲಿ 5 ಗಂಡು ಹಾಗೂ 2 ಹೆಣ್ಣು. ಹಿಂದೆ 27.5 ಹೆಕ್ಟೇರ್‌ನಲ್ಲಿ ಎಲ್ಲ ಪ್ರಾಣಿಗಳಿಗೂ ಅವಕಾಶ ಕಲ್ಪಿಸಲಾಗಿತ್ತು. ನಂತರ ಪ್ರಾಣಿಗಳ ಸಂಖ್ಯೆ ಹೆಚ್ಚಾದಂತೆ ಸಿಂಹಗಳಿಗಾಗಿ 35 ಹೆಕ್ಟೇರ್ ಹಾಗೂ ಹುಲಿಗಳಿಗಾಗಿ 35 ಹೆಕ್ಟೇರ್ ಪ್ರತ್ಯೇಕ ಸ್ಥಳ ಮೀಸಲಿಡಲಾಗಿದೆ.

ಚಿರತೆಗಳ ಸಂಖ್ಯೆಯೇ ಹೆಚ್ಚು

ಸಿಂಹಧಾಮದಲ್ಲಿ ಹುಲಿ, ಚಿರತೆ, ಕರಡಿ, ಸಿಂಹ, ಕಿರುಬ, ನರಿ ಸೇರಿದಂತೆ ಒಟ್ಟು 185 ದೊಡ್ಡ ಪ್ರಾಣಿಗಳಿವೆ. ಅವುಗಳಲ್ಲಿ 23 ಚಿರತೆಗಳೇ ಇವೆ. 115 ವಿವಿಧ ಜಾತಿಯ, ವಿವಿಧ ದೇಶಗಳ ಪಕ್ಷಿಗಳಿವೆ. ಹೆಬ್ಬಾವು ಸೇರಿದಂತೆ 5 ಪ್ರಭೇದದ ಸರೀಸೃಪಗಳಿವೆ. 23 ಚಿರತೆಗಳಲ್ಲಿ 21 ದೊಡ್ಡವು, 2 ಮಾತ್ರ ಚಿಕ್ಕ ಮರಿಗಳಿವೆ. ಈಗಿರುವ ತಡೆ ಸಹಿತ ಆವರಣ ಅವುಗಳ ಚಲನವಲನಕ್ಕೆ, ಇತರೆ ಚಟುವಟಿಕೆಗಳಿಗೆ ಕಿಷ್ಕಿಂಧೆಯಂತಾಗಿದೆ. ಹಾಗಾಗಿ, ಮತ್ತೊಂದು ಆವರಣ ಸಿದ್ಧಪಡಿಸಲು ಸಿದ್ಧತೆ ನಡೆದಿದೆ. ಸಿಂಹಧಾಮದಲ್ಲಿ ಒಟ್ಟು 305 ಪ್ರಾಣಿ, ಪಕ್ಷಿಗಳು ಇವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry