ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ ಲೀಗ್: ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣು

Last Updated 27 ಅಕ್ಟೋಬರ್ 2017, 19:59 IST
ಅಕ್ಷರ ಗಾತ್ರ

ಚೆನ್ನೈ: ಹೊಸದಾಗಿ ಪ್ರೊ ಕಬಡ್ಡಿ ಲೀಗ್‌ಗೆ ಪ್ರವೇಶಿಸಿರುವ ಗುಜರಾತ್ ಫಾರ್ಚೂನ್‌ಜೈಂಟ್ಸ್ ತಂಡ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟು ಶನಿವಾರ ಅಂಗಣಕ್ಕೆ ಇಳಿಯಲಿದೆ. ಇಲ್ಲಿನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಈ ತಂಡ ಎರಡು ಬಾರಿಯ ಚಾಂಪಿಯನ್‌ ಪಟ್ನಾ ಪೈರೆಟ್ಸ್‌ ಎದುರು ಸೆಣಸಲಿದೆ.

ಬೆಂಗಾಲ್ ವಾರಿಯರ್ಸ್ ವಿರುದ್ಧದ ಒಂದನೇ ಕ್ವಾಲಿಫೈಯರ್‌ ಪಂದ್ಯದಲ್ಲಿ 42–17ರಿಂದ ಗೆದ್ದು ಫೈನಲ್‌ಗೆ ಪ್ರವೇಶಿಸಿದ ಗುಜರಾತ್ ಫಾರ್ಚೂನ್‌ ಜೈಂಟ್ಸ್ ಎಲ್ಲ ವಿಭಾಗಗಳಲ್ಲೂ ಬಲಿಷ್ಠ ವಾಗಿದೆ.

ಪ್ರದೀಪ್ ನರ್ವಾಲ್ ಅವರ ಅಮೋಘ ಆಟದ ಬಲದಿಂದ ಪಟ್ನಾ ಪೈರೇಟ್ಸ್‌ ಫೈನಲ್‌ಗೆ ಪ್ರವೇಶಿಸಿದೆ. ಗುರುವಾರ ರಾತ್ರಿ ಇಲ್ಲಿ ನಡೆದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್ ವಿರುದ್ಧ ಪಟ್ನಾ ಪೈರೇಟ್ಸ್‌ 47–44 ಪಾಯಿಂಟ್‌ಗಳ ರೋಚಕ ಜಯ ಸಾಧಿಸಿತ್ತು. ಲೀಗ್‌ನಲ್ಲಿ ದಾಖಲೆಗಳನ್ನು ಬರೆದ ಪ್ರದೀಪ್ ನರ್ವಾಲ್‌ ನಿರ್ಣಾಯಕ ಕ್ವಾಲಿಫೈಯರ್‌ನಲ್ಲೂ ತಂಡದ ರಕ್ಷಣೆಗೆ ನಿಂತಿದ್ದರು. ಫೈನಲ್‌ನಲ್ಲೂ ಅವರು ‘ಮ್ಯಾಜಿಕ್‌’ ಮಾಡುವ ನಿರೀಕ್ಷೆಯಲ್ಲಿದ್ದಾರೆ ಕಬಡ್ಡಿ ಪ್ರಿಯರು.

ಗುಜರಾತ್ ತಂಡದ ಕೋಚ್‌ ಮನ್‌ಪ್ರೀತ್ ಸಿಂಗ್ ಪಂದ್ಯದ ಬಗ್ಗೆ ಪೂರ್ಣ ಭರವಸೆ ಹೊಂದಿದ್ದಾರೆ. ‘ತಂತ್ರಗಾರಿಕೆಯೇ ನಮ್ಮ ಬಲ. ಯಾವುದೇ ತಂಡದ ವಿರುದ್ಧ ಗೆಲ್ಲುವ ಜಯ ಗಳಿಸುವ ಕಲೆ ನಮ್ಮ ತಂಡಕ್ಕೆ ತಿಳಿದಿದೆ. ಎಲ್ಲ ಆಟಗಾರರಿಗೂ ಇದರ ಅರಿವು ಇದೆ. ಆದ್ದರಿಂದ ಭರವಸೆ ಯಿಂದಲೇ ಕಣಕ್ಕೆ ಇಳಿಯಲಿದ್ದಾರೆ’ ಎಂದು ಅವರು ಹೇಳಿದರು.

‘ಫಜಲ್ ಅತ್ರಾಚಲಿ ಅವರ ನಾಯಕತ್ವದಲ್ಲಿ ತಂಡ ಈ ವರೆಗೆ ಅಮೋಘ ಆಟ ಆಡಿದೆ. ಕ್ರೀಡಾಸ್ಫೂರ್ತಿಯಿಂದ ಆಡಿ ಪ್ರತಿ ಪಂದ್ಯದಲ್ಲೂ ಗಮನಾರ್ಹ ಸಾಧನೆ ಮಾಡಿದೆ’ ಎಂದು ಅವರು ಹೇಳಿದರು.

ಪೈರೇಟ್ಸ್ ತಂಡದ ಕೋಚ್‌ ರಾಮ್ ಮೆಹರ್ ಸಿಂಗ್ ಅವರಿಗೆ ತಂಡದ ಪ್ರಮುಖ ಆಟಗಾರ ಪ್ರದೀಪ್ ನರ್ವಾಲ್ ಅವರ ಮೇಲೆ ಪೂರ್ಣ ಭರವಸೆ ಇದೆ. ‘ಈ ಬಾರಿ ಶುಭ ನಿರೀಕ್ಷೆಯೊಂದಿಗೆ ಆಡಲು ಇಳಿದಿದ್ದೆವು. ಇದು ಇಲ್ಲಿಯವರೆಗೂ ಫಲ ನೀಡಿದೆ. ಪ್ರದೀಪ್ ನರ್ವಾಲ್ ಪ್ರತಿ ಪಂದ್ಯದಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದಿರುವ ತಂಡ ಈ ಬಾರಿಯೂ ಗೆಲುವಿನ ನಗೆ ಬೀರಲಿದೆ’ ಎಂದು ಹೇಳಿದರು.

‘ಪ್ರದೀಪ್ ನರ್ವಾಲ್ ನಿಜಕ್ಕೂ ಪ್ರಶಂಸೆಗೆ ಅರ್ಹರು. ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ಅವರು ವೈಯಕ್ತಿಕವಾಗಿಯೂ ಉತ್ತಮ ಸಾಮರ್ಥ್ಯ ತೋರಿ ದಾಖಲೆಗಳನ್ನು ಮುರಿದಿದ್ದಾರೆ. ಅವರ ಮೇಲೆ ಇಡೀ ತಂಡ ಭರವಸೆ ಇರಿಸಿದೆ’ ಎಂದು ರಾಮ್ ಮೆಹರ್ ಸಿಂಗ್ ನುಡಿದರು.

‘ಈ ಬಾರಿ ಮೊದಲ ಪಂದ್ಯ ದಿಂದಲೇ ತಂಡ ಒಂದೇ ಗುರಿಯಿಂದ ಆಡುತ್ತಿದೆ. ಟೂರ್ನಿಯಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿ ಗೆಲ್ಲುವುದು ನಮ್ಮ ಉದ್ದೇಶ. ತಂಡ ಇಲ್ಲಿಯವರೆಗೆ ಅತ್ಯುತ್ತಮವಾಗಿ ಆಡಿದೆ.

ಎಲ್ಲ ಆಟಗಾರರು ತಮ್ಮ ಅಮೂಲ್ಯ ಕಾಣಿಕೆ ನೀಡಿದ್ದಾರೆ. ಹೀಗಾಗಿ ಫೈನಲ್‌ನಲ್ಲೂ ಒತ್ತಡವಿಲ್ಲದೆ ಆಡಲಿದ್ದೇವೆ’ ಎಂದು ಪೈರೇಟ್ಸ್ ನಾಯಕ ಪ್ರದೀಪ್ ನರ್ವಾಲ್ ಹೇಳಿದರು.

‘ನಾವು ಪ್ರತಿ ಪಂದ್ಯದಲ್ಲೂ ಒಗ್ಗಟ್ಟಿನಿಂದ ಶ್ರಮ ಹಾಕಿದ್ದೇವೆ. ಭಾಷೆ, ದೇಶದ ಅಂತರ ಮರೆದು ಎಲ್ಲರೂ ಒಂದಾಗಿ ಆಡಿದ್ದೇವೆ. ಅಂತಿಮ ಪಂದ್ಯ ದಲ್ಲೂ ಇದೇ ಹುರುಪು, ಹುಮ್ಮಸ್ಸಿನಿಂದ ಆಡಲಿದ್ದೇವೆ’ ಎಂಬುದು ಗುಜರಾತ್ ತಂಡದ ನಾಯಕ ಫಜಲ್ ಅತ್ರಾಚಲಿ ಅವರ ಅಭಿಪ್ರಾಯ.

ಪಂದ್ಯದ ಆರಂಭ: ರಾತ್ರಿ 8.00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT