ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಸ್‌ಎಫ್‌ ವಿಶ್ವಕಪ್‌ ಶೂಟಿಂಗ್‌ ಫೈನಲ್‌: ಸಂಗ್ರಾಮ್‌ಗೆ ಬೆಳ್ಳಿ, ಅಮನ್‌ಪ್ರೀತ್‌ಗೆ ಕಂಚು

Last Updated 27 ಅಕ್ಟೋಬರ್ 2017, 20:05 IST
ಅಕ್ಷರ ಗಾತ್ರ

ನವದೆಹಲಿ: ನಿಖರ ಗುರಿ ಹಿಡಿದ ಸಂಗ್ರಾಮ್‌ ದಹಿಯಾ ಮತ್ತು ಅಮನ್‌ಪ್ರೀತ್‌ ಸಿಂಗ್‌, ಐಎಸ್‌ಎಸ್‌ಎಫ್‌ ವಿಶ್ವಕಪ್‌ ಫೈನಲ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಅನುಭವಿ ಶೂಟರ್‌ ಜಿತು ರಾಯ್‌ ಏಳನೇ ಸ್ಥಾನ ಪಡೆದು ನಾಲ್ಕನೇ ದಿನವೂ ನಿರಾಸೆಗೊಂಡರು.

ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಶುಕ್ರವಾರ ನಡೆದ ಪುರುಷರ ಡಬಲ್‌ ಟ್ರ್ಯಾಪ್‌ ಸ್ಪರ್ಧೆಯಲ್ಲಿ ಸಂಗ್ರಾಮ್‌ 76 ಪಾಯಿಂಟ್ಸ್‌ ಸಂಗ್ರಹಿಸಿ ಈ ಸಾಧನೆ ಮಾಡಿದರು.

ಹ್ಯು ಬಿನಾವನ್‌ (79) ಮತ್ತು ಇಟಲಿಯ ಗ್ಯಾಸ್‌ಪರಾನಿ ದಾವಿ (56) ಕ್ರಮವಾಗಿ ಚಿನ್ನ ಮತ್ತು ಕಂಚು ತಮ್ಮದಾಗಿಸಿಕೊಂಡರು.

ಸಂಗ್ರಾಮ್‌, ಸೀನಿಯರ್‌ ವಿಭಾಗದಲ್ಲಿ ಗೆದ್ದ ಮೊದಲ ಪದಕ ಇದಾಗಿದೆ. 2009ರಲ್ಲಿ ನಡೆದಿದ್ದ ಏಷ್ಯನ್‌ ಜೂನಿಯರ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಚಿನ್ನ ಜಯಿಸಿದ್ದರು.

ಪುರುಷರ 50 ಮೀಟರ್ಸ್‌ ಪಿಸ್ತೂಲ್‌ ವಿಭಾಗದ ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಅಮನ್‌ಪ್ರೀತ್‌ 202.2 ಸ್ಕೋರ್‌ ಸಂಗ್ರಹಿಸಿ ಕಂಚು ಗೆದ್ದುಕೊಂಡರು.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಿತು 123.3 ಸ್ಕೋರ್‌ ಕಲೆಹಾಕಲಷ್ಟೇ ಶಕ್ತರಾದರು. ಫೈನಲ್‌ ಕಣದಲ್ಲಿ ಏಳು ಮಂದಿ ಇದ್ದರು.

ಸರ್ಬಿಯಾದ ದಮಿರ್‌ ಮಿಕೆಚ್‌ ಈ ವಿಭಾಗದ ಚಿನ್ನಕ್ಕೆ ಮುತ್ತಿಕ್ಕಿದರು. ಅವರು 229.3 ಸ್ಕೋರ್‌ ಸಂಗ್ರಹಿಸಿ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿದರು.

ಬೆಳ್ಳಿಪದಕ ಉಕ್ರೇನ್‌ನ ಒಲೆಹ್‌ ಒಮೆಲ್‌ಚುಕ್‌ ಅವರ ಪಾಲಾಯಿತು. ರೋಚಕ ಹೋರಾಟ ಕಂಡುಬಂದ ಫೈನಲ್‌ನಲ್ಲಿ ಅವರು 228.0 ಸ್ಕೋರ್‌ ಕಲೆಹಾಕಿದರು.

ಕಂಚಿನ ಪದಕಕ್ಕಾಗಿ ಅಮನ್‌ಪ್ರೀತ್‌, ಟರ್ಕಿಯ ಯೂಸುಫ್‌ ಡಿಕೆಕ್‌, ಸರ್ಬಿಯಾದ ಡಿಮಿಟ್ರಿಜೆ ಗ್ರೆಜಿಚ್‌ ಮತ್ತು ಇರಾನ್‌ನ ವಾಹಿದ್ ಗೋಲ್ಖಂಡನಾ ಅವರಿಂದ ತೀವ್ರ ಪೈಪೋಟಿ ಎದುರಿಸಿದ್ದರು. 22ನೇ ಅವಕಾಶದಲ್ಲಿ ಅವರು 8.1 ಸ್ಕೋರ್‌ ಹೆಕ್ಕಿ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದರು.

‍ಪ್ರಸ್ತುತ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದಲ್ಲಿ ಭಾರತ ಗೆದ್ದ ಮೊದಲ ಪದಕ ಇದಾಗಿದೆ. ಇದಕ್ಕೂ ಮುನ್ನ ಜಿತು ರಾಯ್‌ ಮತ್ತು ಹೀನಾ ಸಿಧು, 10 ಮೀಟರ್ಸ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿ ಆತಿಥೇಯರ ಪದಕದ ಖಾತೆ ತೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT