ಮಂಗಳವಾರ, ಸೆಪ್ಟೆಂಬರ್ 17, 2019
21 °C

ಅತ್ಯುತ್ತಮ ಮುಖ್ಯಮಂತ್ರಿ ಸಿದ್ದರಾಮಯ್ಯ

Published:
Updated:

ವರುಣಾ:‘ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ’ ಎಂದು ಸಂಸದ ಧ್ರುವನಾರಾಯಣ ಹರಿಹಾಯ್ದರು.

ವರುಣಾ ಹೋಬಳಿಯ ಮಾರಶೆಟ್ಟಿಹಳ್ಳಿಯಲ್ಲಿ ಶುಕ್ರವಾರ ನಡೆದ ದೇವಲಾಪುರ, ಹಡಜನ, ತುಕ್ಕಡಿ ಮಾದಯ್ಯನಹುಂಡಿ, ಸೋಮೇಶ್ವರಪು, ಜಂತಗಳ್ಳಿ ಇನ್ನಿತರ ಗ್ರಾಮಗಳ ₹10 ಕೋಟಿಯ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ಸಿದ್ದರಾಮಯ್ಯ ಅವರು 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿ ದೇಶದಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಎಂದು ಹೆಸರು ಗಳಿಸಿದ್ದಾರೆ ಎಂದು ಧ್ರುವನಾರಾಯಣ್ ಹೇಳಿದರು.

ಯಡಿಯೂರಪ್ಪ ಅವರು ಯಾವುದೇ ಆರೋಪ ಮಾಡುವ ಮುನ್ನ ಸರಿಯಾದ ಸಾಕ್ಷಿ, ಆಧಾರ ಇಟುಕೊಂಡು ಮಾತನಾಡಲಿ ಎಂದ ಅವರು, 2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವರುಣಾ ವಸತಿ ಜಾಗೃತ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಸಾಲ ಮನ್ನಾ ಮಾಡುವುದನ್ನು ಬಿಟ್ಟು ಉದ್ಯಮಿ ಗಳ ಸಾಲವನ್ನು ಮನ್ನಾ ಮಾಡಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸಿ ಸರ್ವರಿಗೂ ಸಮಪಾಲು–ಸಮಬಾಳು ಎಂಬ ನೀತಿಯಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ರಾಮಯ್ಯ, ತಾ.ಪಂ.ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮಾಜಿ ಸದಸ್ಯರಾದ ರವಿಕುಮಾರ್, ಶಾಂತಮ್ಮ, ಮಹದೇವಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ದೇಗೌಡ, ರಾಯರಹುಂಡಿ ರವಿ, ತಹಶಿಲ್ದಾರ್ ರಮೇಶ್ ಬಾಬು ಇದ್ದರು.

Post Comments (+)